ಪುಸ್ತಕ ಬಿಟ್ಟು ವಿದ್ಯಾವಂತ ಸಮಾಜ ಬದುಕಲು ಸಾಧ್ಯವಿಲ್ಲ :ಡಾ. ಕೊನೇಕ್
ಪುಸ್ತಕ ಬಿಟ್ಟು ವಿದ್ಯಾವಂತ ಸಮಾಜ ಬದುಕಲು ಸಾಧ್ಯವಿಲ್ಲ :ಡಾ. ಕೊನೇಕ್
ಕಲಬುರಗಿ : ಪುಸ್ತಕಗಳು, ಪುಸ್ತಕ ಸಂಸ್ಕೃತಿ ಹಾಗೂ ಓದುವಿಕೆ ಇವೆಲ್ಲವೂ ನಮ್ಮ ಬದುಕಿನ ಭಾಗಗಳು. ಪುಸ್ತಕಗಳನ್ನು ಬಿಟ್ಟು ವಿದ್ಯಾವಂತ ಸಮಾಜ ಬದುಕಲು ಸಾಧ್ಯವಿಲ್ಲ. ಒಂದಲ್ಲಾ ಒಂದು ಸಂದರ್ಭದಲ್ಲಿ ನಾವು ಪುಸ್ತಕಗಳ ಜೊತೆಗೆ ಬದುಕು ಮಾಡಬೇಕಾಗುತ್ತದೆ ಪ್ರಕಾಶಕ ಡಾ. ಬಸವರಾಜ ಕೊನೇಕ್ ಹೇಳಿದರು.
ನಗರದ ಗಂಜ ಕಾಲೋನಿ ಯಲ್ಲಿರುವ ವೀರಭದ್ರಪ್ಪ ಜಮದರಖಾನಿ ಅವರ ಮನೆಯಲ್ಲಿ ಪುಸ್ತಕ ಪ್ರಾಧಿಕಾರದಿಂದ ಹಮ್ಮಿಕೊಂಡ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದಲ್ಲಿ ಡಾ. ಕರುಣಾ ಜಮದರಖಾನಿ ಅವರು ರಚಿಸಿದ ಎರಡು ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿ
‘ನಮ್ಮ ತಲೆಮಾರು ಕೂಡ ಇಂದಿನ ಜ್ಞಾನ ಪರಂಪರೆಯನ್ನು ಪುಸ್ತಕ ರೂಪದಲ್ಲಿ ಇಟ್ಟು ಹೋಗುತ್ತದೆ. ಹಿಂದಿನವರು ಬಿಟ್ಟು ಹೋಗಿರುವುದು ಹಾಗೂ ನಾವು ಮುಂದಿನವರಿಗಾಗಿ ಉಳಿಸಿ ಹೋಗುವ ಜ್ಞಾನದ ನಿರಂತರ ಧಾರೆ ಪುಸ್ತಕ ರೂಪದಲ್ಲಿ ಸಂಗ್ರಹವಾಗಿರುತ್ತದೆ. ಹಳೆಯ ತಲೆಮಾರು ತಮ್ಮ ಜೀವಮಾನದ ನೆನಪಿನ ಸಂಚಯವನ್ನು ಉಳಿಸಿ ಹೋಗುವ ವಿಧಾನ ಬರವಣಿಗೆ‘ ಎಂದರು.
ಕನ್ನಡ ನಾಡು ಲೇಖಕರ ಸಂಘದ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆ ಮಾತನಾಡಿ ಪುಸ್ತಕಗಳು ಆಯಾ ಕಾಲದ ಸಂಸ್ಕೃತಿಯ ಜೀವಂತ ಪ್ರತೀಕ. ಯಾವುದೇ ಕಾಲದ ಸಂಸ್ಕತಿ, ಜನಜೀವನ ಅರ್ಥಮಾಡಿಕೊಳ್ಳಲು ನಮಗೆ ಅಧಿಕೃತವಾಗಿ ಸಿಗುವ ಆಕರಗಳೆಂದರೆ ಪುಸ್ತಕಗಳು. ಪುಸ್ತಕ ನಾಗರಿಕತೆಯ ತಳಹದಿ, ಜ್ಞಾನಾರ್ಜನೆಯ ಮಾಧ್ಯಮದ ಒಂದು ಪ್ರಮುಖ ಸಾಧನ. ಅನುಭವ, ಜ್ಞಾನದ ಅಭಿವ್ಯಕ್ತಿ ರೂಪವಾದ ಪುಸ್ತಕ ಸಂಸ್ಕತಿಯ ನಿರಂತರ ಪ್ರವಾಹಕ್ಕೆ ಸೇತುವೆಯಾಗಿವೆ‘ ಎಂದರು.
ಅಧ್ಯಕ್ಷತೆ ವಹಿಸಿದ್ದ ವೀರಭದ್ರಪ್ಪ ಜಮದರಖಾನಿ ಮಾತನಾಡಿ, ’ಜ್ಞಾನ-ವಿಜ್ಞಾನ, ಸಂಸ್ಕತಿ-ಸಂಪ್ರದಾಯ, ಆಗು-ಹೋಗುಗಳು ಎಲ್ಲವನ್ನೂ ದಕ್ಕಿಸಿಕೊಳ್ಳಲು ಓದಿನ ಮೂಲಕ ಮಾತ್ರ ಸಾಧ್ಯವಾಗುವುದು‘ ಎಂದರು.
ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ. ಎಚ್.ನಿರಗುಡಿ ಮಾತನಾಡಿ, ''ಪುಸ್ತಕಗಳ ಮೂಲಕ ಮನುಕುಲದ ಸೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಳೆದ ವರ್ಷದಿಂದ ಪುಸ್ತಕ ಪ್ರಧಿಕಾರ ನಡೆಸುತ್ತಿರುವ ಮನೆಗೊಂದು ಗ್ರಂಥಾಲಯ ತುಂಬಾ ಯಶಸ್ಸು ಕಂಡಿದ್ದು ಡಾ. ಕರುಣಾ ಜಮದರಖಾನಿ ಅವರು ತುಂಬಾ ಅಚ್ಚುಕಟ್ಟಾಗಿ ಗ್ರಂಥಾಲಯ ರೂಪಿಸಿದ್ದು ಅವರಿಗೆ ಪುಸ್ತಕ ಪ್ರಾಧಿಕಾರದಿಂದ ಅಭಿನಂದನಾ ಪತ್ರ ನೀಡಿ ಅಭಿನoದಿಸುತಿದ್ದದ್ದು ಹರ್ಷದಾಯಕ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಜಾಗೃತಿ ಸಮಿತಿಯ ಸದಸ್ಯರಾದ ರೇವಣಸಿದ್ದಪ್ಪ ದುಕಾನ, ಶೋಭಾದೇವಿ ಚೆಕ್ಕಿ, ಹಾಗೂ ನಾಗರಾಜ ಜಮದರಖಾನಿ, ಅರವಿಂದ ಕುಮಾರ ಜಮದರಖಾನಿ, ಬಸವರಾಜ ವಗದುರ್ಗಿ, ಸುಧಾ ಜಮದರಖಾನಿ, ಶಿಲ್ಪಾ ಜಮದರಖಾನಿ, ಇದ್ದರು.ಡಾ. ಶರಣಬಸಪ್ಪ ವಡ್ಡನಕೇರಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರೆ,ಕುಮಾರಿ ಲಕ್ಷ್ಮಿ ಜಮದರಖಾನಿ ಪ್ರಾರ್ಥಿಸಿದರೆ, ಶೋಭಾದೇವಿ ಚೆಕ್ಕಿ ನಿರೂಪಿಸಿದರು ಪರಮಾನoದ ಜಮದರಖಾನಿ ವಂದಿಸಿದರು.

