ಡಾ. ಎಸ್. ಆರ್ ರಂಗನಾಥನ್ ರವರ ಜನ್ಮ ದಿನಾಚರಣೆಯ ಪ್ರಯುಕ್ತ ಗ್ರಂಥಪಾಲಕರ ದಿನಾಚರಣೆ

ಡಾ. ಎಸ್. ಆರ್ ರಂಗನಾಥನ್ ರವರ ಜನ್ಮ ದಿನಾಚರಣೆಯ ಪ್ರಯುಕ್ತ ಗ್ರಂಥಪಾಲಕರ ದಿನಾಚರಣೆ

ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್. ಆರ್ ರಂಗನಾಥನ್ ರವರ ಜನ್ಮ ದಿನಾಚರಣೆಯ ಪ್ರಯುಕ್ತ ಗ್ರಂಥಪಾಲಕರ ದಿನಾಚರಣೆ

         ಡಾ. ಎಸ್. ಆರ್. ರಂಗನಾಥನ್ (ಶಿಯಾಲಿ ರಾಮಾಮೃತ ರಂಗನಾಥನ್) ಅವರು ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಪ್ರಖ್ಯಾತಿಯನ್ನು ಪಡೆದಿರುತ್ತಾರೆ. ಅದಲ್ಲದೇ ದೇಶದ ವಿವಿಧ ಗ್ರಂಥಾಲಯಗಳಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರು ವೃತ್ತಿಯಲ್ಲಿ ಗಣಿತದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರವೃತ್ತಿಯಲ್ಲಿ ಪ್ರಸಿದ್ದ ಗ್ರಂಥಪಾಲಕರಾಗಿ ಮತ್ತು ಗ್ರಂಥಾಲಯ ವಿಜ್ಞಾನದಲ್ಲಿ ಅಪಾರವಾಗಿ ಸಾಧನೆಗೈದು ಪರಿಣಿತಿಯನ್ನು ಪಡೆದಿರುತ್ತಾರೆ.  

ಪ್ರತೀ ವರ್ಷ ಆಗಸ್ಟ್ 12 ರಂದು ಡಾ. ಎಸ್. ಆರ್. ರಂಗನಾಥನ್ ರವರ ಜನ್ಮ ದಿನದ ಪ್ರಯುಕ್ತ ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ಸರ್ಕಾರವು ಗ್ರಂಥಪಾಲಕರ ದಿನಾಚರಣೆ ಆಚರಿಸಲು‌ 2007 ರಲ್ಲಿ ಆದೇಶ ನೀಡಲಾಗಿರುತ್ತದೆ, ಸದರಿ ದಿನಾಚರಣೆ ಪ್ರಯುಕ್ತ ನಾಡಿನ ಹಿರಿಯ ಗ್ರಂಥಪಾಲಕರುಗಳಿಗೆ, ಗ್ರಂಥಾಲಯ ತಜ್ಞರಿಗೆ, ಕರ್ನಾಟಕ ಸರ್ಕಾರದಿಂದ ಉತ್ತಮ ಗ್ರಂಥಪಾಲಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಮತ್ತು ರಾಜ್ಯದ ವಿವಿಧ ವಿಶ್ವ ವಿದ್ಯಾಲಯಗಳಲ್ಲಿ, ಪದವಿ ಕಾಲೇಜುಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಗ್ರಂಥಪಾಲಕರ ದಿನಾಚರಣೆಯ ನಿಮಿತ್ಯ ಮಕ್ಕಳಿಗಾಗಿ ವಿವಿಧ ಸ್ವರ್ಧೆಗಳನ್ನು ಏರ್ಪಡಿಸುವುದರ ಮೂಲಕ ಜ್ಞಾನದ ಹವ್ಯಾಸವನ್ನು ಹೆಚ್ಚಿಸಲಾಗುತ್ತಿದೆ ಮತ್ತು ಮಕ್ಕಳಲ್ಲಿ ಪುಸ್ತಕ ಓದುವ ಸಂಸೃತಿಯನ್ನು ಹೆಚ್ಚಿಸಲಾಗುತ್ತಿದೆ. 

ಇಂದಿನ ಅತ್ಯಾಧುನಿಕ ಯುಗದಲ್ಲಿ AI (artificial Intaligence) ತಂತ್ರಜ್ಷಾನದ ಮೂಲಕ ಯುವಕರಲ್ಲಿ ಜ್ನಾನದ ವಿವಿಧ ಕೌಶಲ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಕರ್ನಾಟಕ ಸರ್ಕಾರವು AI ತಂತ್ರಜ್ಷಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಇಂದು ದೇಶ ವಿದೇಶಗಳಲ್ಲಿ AI ತಂತ್ರಜ್ಷಾನವು ಮುಂಚೂಣಿಯಲ್ಲಿದೆ. ಪ್ರಮುಖವಾಗಿ ವಿವಿಧ ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಆಯಾ ಶಾಲಾ ಕಾಲೇಜುಗಳಲ್ಲಿ ವಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಟೋಟಗಳ ಮೂಲಕ ವಿವಿಧ ಚಟುವಟಿಕೆಗಳ ಮೂಲಕ ಕೃತಕ ಬುದ್ದಿ ಮತ್ತೆಯ ಅರಿವನ್ನು ಮತ್ತು ಅನುಭಾವಾಧಾರಿತ ಕಲಿಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ.  

  ರಾಜ್ಯದ ಮತ್ತು ದೇಶದ ವಿವಿಧ ಗ್ರಂಥಾಲಯಗಳಲ್ಲಿ AI (artificial Intaligence) ತಂತ್ರಜ್ಞಾನದ ಬಗ್ಗೆ ಹಲವಾರು ಸಮ್ಮೇಳನಗಳನ್ನು ಏರ್ಪಡಿಸಲಾಗುತ್ತಿದೆ. 

ಜ್ಞಾನವು ಶಕ್ತಿಯಾಗಿ (Knowledge is Power) ಅಭಿವೃದ್ದಿಗೆ ಪೂರಕವಾಗಿ ಇಂದಿನ ಮಕ್ಕಳು ಮುಂದಿನ ಭಾವಿ ಪ್ರಜೆಗಳು ಎಂಬಂತೆ, ವಿವಿಧ ಗ್ರಂಥಾಲಯಗಳಲ್ಲಿ ಲಭ್ಯವಿರುವ ಪುಸ್ತಕಗಳನ್ನು ಓದುವುದರ ಮೂಲಕ ಪ್ರಾವೀಣ್ಯತೆಯನ್ನು ಪಡೆದು ಸುಸಜ್ಜಿತ ನಾಗರಿಕರಾಗಿ ಹೊರಹೊಮ್ಮುತ್ತಿದ್ದಾರೆ.

ಪ್ರತಿಯೊಂದು ಜೀವಿಗೂ ಬದುಕಲು ನೀರು, ಗಾಳಿ, ಬೆಳಕು ಮತ್ತು ಆಹಾರ, ವಸತಿ ಹೇಗೆ ಮುಖ್ಯವೋ ಹಾಗೆಯೊ ಮನುಷ್ಯ ಮನುಷ್ಯತ್ವದಿಂದ ನಡೆದು ಕೊಳ್ಳಲು ಮಾನವೀಯ ಮೌಲ್ಯಗಳನ್ನು ಬೆಳಸಬೇಕೆಂದರೆ, ಮನುಷ್ಯನ ವ್ಯಕ್ತಿತ್ವವನ್ನೇ ಬದಲಿಸಬೇಕೆಂದರೆ, ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಪ್ರಮುಖ ಸಾಧನ ಪುಸ್ತಕಗಳು ಎನ್ನಬಹುದು. 

ಪುಸ್ತಕದ ಮೌಲ್ಯ ಮತ್ತು ಸಾರ್ಥಕ್ಯ ಪಡೆಯಬೇಕಾದರೆ ಗ್ರಂಥಾಲಯಗಳು ಅವಶ್ಯಕವಾಗಿವೆ ಹಾಗೂ ಗ್ರಂಥಾಲಯಗಳನ್ನು ನಿರ್ವಹಿಸುವ ಗ್ರಂಥಪಾಲಕನ ಪಾತ್ರ ಅತ್ಯಂತ ಮಹತ್ವದ್ದಾಗಿದೆ. 

ಗ್ರಂಥಾಲಯಗಳು ಎಂದರೆ ಜ್ಞಾನದ ಸಾಗರ. ಪ್ರಾಚೀನ ಕಾಲದಿಂದಲೂ ಇತಿಹಾಸವನ್ನು ಅರಿಯಬೇಕಾದರೆ ನಾವು ಗ್ರಂಥಾಲಯಗಳ ಮೊರೆಹೋಗಬೇಕಾಗುತ್ತದೆ. ಇಂದಿನ ಡಿಜಿಟಲ್‌ ಯುಗಲ್ಲಿಯೂ ಸಹಿತ ಸಂಶೋದಕರು, ಪಂಡಿತರು, ಯುವಕರು ತಮ್ಮಲ್ಲಿರುವ ಅನುಭವಗಳನ್ನು ಹೆಚ್ಚಿಸಿಕೊಳ್ಳಲು ಹಾಗೂ ಪೀಳಿಗೆಯಿಂದ ಪೀಳಿಗೆಗೆ ಜ್ಞಾನವನ್ನು ಪಸರಿಸಲು ಗ್ರಂಥಾಲಯಗಳು ಪ್ರಮುಖ ಪಾತ್ರವಹಿಸುತ್ತಿವೆ ಹಾಗೂ ಜ್ಞಾನದೇಗುಲಗಳಾಗಿ ಕೆಲಸ ನಿರ್ವಹಿಸುತ್ತಿವೆ.  

ಗ್ರಂಥಾಲಯಗಳಿಗೆ ಜ್ಞಾನದ ಕಣಜಗಳು ಎಂದು ಕರೆಯಲಾಗುತ್ತದೆ, ಇದರಲ್ಲಿ ಗ್ರಂಥಪಾಲಕರ ಪಾತ್ರ ಅವರ ಪರಿಶ್ರಮ ಬಹಳವಿದೆ, ಓದುಗನಿಗೆ ಜ್ಞಾನದ ರಸದೌತಣವನ್ನು ಉಣಬಡಿಸಲು ಗ್ರಂಥಪಾಲಕನು ಸದಾ ಸಿದ್ದನಾಗಿರುತ್ತಾನೆ. ಇಂತಹ ಮಹತ್ವದ ಕಾರ್ಯಕ್ರಮಗಳನ್ನು ಪ್ರತಿಯೊಬ್ಬ ಗ್ರಂಥಪಾಲಕರೂ ನಿರ್ವಹಿಸುತ್ತಾರೆ.  

ಗ್ರಂಥಾಲಯದ ಬದುಕಿನ ಹಾದಿಯನ್ನೇ ಬದಲಿಸಿ, ವಿಶ್ವಕ್ಕೆ ಮಾದರಿ ಗ್ರಂಥಾಲಯ ತೋರಿಸಿದ ಮಹಾನ್ ವ್ಯಕ್ತಿ ಡಾ. ಎಸ್.‌ ಆರ್‌ ರಂಗನಾಥನ್.‌

ಡಾ. ಶಿಯಾಳಿ ರಾಮಾಮೃತ ರಂಗನಾಥನ್. ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ. ಡಾ. ಎಸ್.ಆರ್ ರಂಗನಾಥನ್ ಎಂಬ ನಾಮದಿಂದಲೇ ದೇಶಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಚಿರಪರಿಚಿತರಾದವರು. ಗ್ರಂಥಾಲಯದಲ್ಲಿ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ, ಇಂದಿನ ಸಾವಿರಾರು ಗ್ರಂಥಪಾಲಕರಿಗೆ ಬೆಳಕಾದವರು. ಇಂದಿನ ಡಿಜಿಟಲ್ ಯುಗದಲ್ಲಿಯೂ ಗ್ರಂಥಾಲಯಗಳ ಉಳಿಯುವಲ್ಲಿ ಡಾ.ರಂಗನಾಥನ್ ಅವರ ಪಾತ್ರ ಮತ್ತು ಕೊಡುಗೆಯನ್ನು ನಾವು ಸ್ಮರಿಸಲೇಬೇಕು. ದೇಶದ ಗ್ರಂಥಾಲಯದಲ್ಲಿ ಇವರಷ್ಟು ಕೃಷಿ ಮಾಡಿದವರು ಮತ್ತೊಬ್ಬರಿಲ್ಲ.

ಗ್ರಂಥಾಲಯ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಓರಣಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಡಾ.ಎಸ್.ಆರ್.ರಂಗನಾಥನ್ ಅವರು ತಮಿಳುನಾಡಿನ, ಅಂದಿನ ಮದ್ರಾಸ ಪ್ರಾಂತ್ಯದ ಒಂದು ಪುಟ್ಟ ಹಳ್ಳಿ ಶಿಯಾಳಿ ಎಂಬಲ್ಲಿ 1892, ಆಗಸ್ಟ್‌ 12 ರಂದು ಜನಿಸಿದರು. ಬಾಲ್ಯದಿಂದಲೂ ಶಿಸ್ತಿನ ಸಿಪಾಯಿ, ಚುರುಕು ಬುದ್ಧಿಯಳ್ಳವರು. 1909ರಲ್ಲಿ ಮದ್ರಾಸ್‌ನ ಕ್ರಿಶ್ಚಿಯನ್ ಕಾಲೇಜಿಗೆ ಸೇರಿ ಇಂಗ್ಲಿಷ್ ವಿಷಯವನ್ನು ಐಚ್ಛಿಕವಾಗಿ ಪಡೆದು ಅದರಲ್ಲಿಯೇ ಸ್ನಾತಕೋತ್ತರ ಪದವಿ ಮುಗಿಸಿದರು. ನಂತರ ಅಧ್ಯಾಪನ ಶಾಸ್ತ್ರದಲ್ಲಿ ಎಲ್.ಟಿ ಪರೀಕ್ಷೆಯಲ್ಲಿ ಸಹ ಪ್ರಥಮ ದರ್ಜೆಯಲ್ಲಿ ಪಾಸಾದರು. ತದನಂತರ ಮದ್ರಾಸ್‌ನ ಸರ್ಕಾರಿ ಕಾಲೇಜಿನಲ್ಲಿ ಹಾಗೂ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಗಣಿತದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿದ್ದರು. ಮದ್ರಾಸ್ ವಿವಿಯ ಗ್ರಂಥಾಲಯಕ್ಕೆ ಪ್ರಥಮ ಗ್ರಂಥಪಾಲಕರಾಗಿ ನೇಮಕವಾದರು. 

ಬದುಕಿನ ದಿಕ್ಕು ಬದಲಿಸಿದ ಲಂಡನ್ ಪ್ರವಾಸ:

1924 ರಲ್ಲಿ ಇವರ ಅನುಭವ, ಶಿಸ್ತು, ಕ್ರಿಯಾಶೀಲ ವ್ಯಕ್ತಿತ್ವದಿಂದಾಗಿ ಲಂಡನ್ನಿನ ಬ್ರಿಟಿಷ್ ವಸ್ತು ಸಂಗ್ರಹಾಲಯದ ಗ್ರಂಥ ಭಂಡಾರದಲ್ಲಿ ನಡೆಯುವ ಗ್ರಂಥ ಪರಿಚಲನೆ, ಆಡಳಿತ ಪರಿಶೀಲನೆಗಾಗಿ ಅವರನ್ನು ಇಂಗ್ಲೆಂಡ್‌ಗೆ ಕಳಿಸಲಾಗಿತ್ತು. ಈ ಒಂದು ಅವಕಾಶ ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ಮಾತ್ರವಲ್ಲ, ಭಾರತೀಯ ಗ್ರಂಥಾಲಯಕ್ಕೆ ಒಂದು ಬುನಾದಿಯನ್ನೂ ಒದಗಿಸಿತು ಎಂಬುವುದರಲ್ಲಿ ಎರಡು ಮಾತಿಲ್ಲ. ಡಾ.ರಂಗನಾಥನ್ ಅವರು ಲಂಡನ್‌ನಲ್ಲಿಯೇ ಉನ್ನತ ಶಿಕ್ಷಣ ಪಡೆಯಲು ಉಳಿದುಕೊಂಡರು. ಗ್ರಂಥಾಲಯ ಮಹತ್ವದ ಬಗ್ಗೆ ಮಾಹಿತಿ ಕಲೆಹಾಕಿ ತಮ್ಮ ಗುರುಗಳಾದ ಬರ್ವಿಕ್ ಸೇಯರ್ಸ್ ಅವರ ಮಾರ್ಗದರ್ಶನದಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ಪರಿಣತಿ ಹೊಂದಿದರು.

ಲಂಡನ್‌ನಲ್ಲಿದ್ದಾಗ ಅವರ ಗುರು ಸೇಯರ್ಸ್ ಸಹಾಯದಿಂದ ವರ್ಗೀಕರಣ ಪದ್ಧತಿಗಳನ್ನು ವಿಮರ್ಶಾತ್ಮಕ ದೃಷ್ಟಿಯಿಂದ ಆಳವಾಗಿ ಅಭ್ಯಸಿಸಿದರು. ಅಲ್ಲಿಯ ಹಲವಾರು ಪದ್ಧತಿಗಳು ನಮ್ಮ ದೇಶದಲ್ಲಿ ಅನ್ವಯವಾಗುವುದಿಲ್ಲ ಎಂದರಿತ ಮೇಲೆ ತಾವೇ ದ್ವಿಬಿಂದು ವರ್ಗೀಕರಣ ಪದ್ಧತಿಯ ರೂಪುರೇಷೆ ಹುಟ್ಟುಹಾಕಿದರು. ನಂತರ ಮದ್ರಾಸ್ ವಿವಿಯ ಗ್ರಂಥಾಲಯದ ಗ್ರಂಥಗಳನ್ನು ವರ್ಗಿಕರಿಸಲಾರಂಭಿಸಿದರು. ಮದ್ರಾಸ್ ಗ್ರಂಥಾಲಯ ಸಂಘದಿಂದ ದ್ವಿಬಿಂದು ಪ್ರಥಮ ಮುದ್ರಣ ಕಂಡಿತು. ಮುಂದೆ ಅದು ಜಗದ್ವಿಖ್ಯಾತವಾಯಿತು. ಈಗ ಏಳನೇ ಆವೃತ್ತಿ ಪರಿಷ್ಕೃತಗೊಂಡು ಡಾ. ಎಂ.ಎ ಗೋಪಿನಾಥ ಅವರು 1987ರಲ್ಲಿ ಸಂಪಾದಿಸಿ ಕೊಟ್ಟಿದ್ದಾರೆ.

ಸ್ನಾತಕೋತ್ತರ ಮಟ್ಟದ ಗ್ರಂಥಾಲಯ ವಿಜ್ಞಾನ ರೂಪಿಸುವಲ್ಲಿ ಡಾ. ರಂಗನಾಥನ್ ಪಾತ್ರ ಅವಿಸ್ಮರಣೀಯ. ಬೆಂಗಳೂರಿನಲ್ಲಿ ಡಿ.ಆರ್.ಟಿ.ಸಿ ಸಂಸ್ಥೆಯನ್ನು ಸ್ಥಾಪಿಸಿದ ಕೀರ್ತಿ ಡಾ. ರಂಗನಾಥನ್ ರವರಿಗೆ ಸಲ್ಲುತ್ತದೆ. ಗ್ರಂಥಾಲಯ ವಿಭಾಗದಲ್ಲಿನ ಅವರ ಪ್ರಖರತೆ ಜ್ಞಾನ ಇಂದಿಗೂ ಬೆಳಗುತ್ತಿದೆ. ಡಾ.ಎಸ್.ಆರ್.ರಂಗನಾಥನ್ ಅವರು ಗ್ರಂಥಾಲಯ, ಗ್ರಂಥಾಲಯ ವಿಜ್ಞಾನ ಕುರಿತು 60ಕ್ಕೂ ಹೆಚ್ಚು ಗ್ರಂಥಗಳು ಹಾಗೂ ಸುಮಾರು 2500 ಲೇಖನಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಗ್ರಂಥಾಲಯದ ಪಂಚ ಸೂತ್ರಗಳು, ರಾಮಾನುಜನ್-ದ ಮ್ಯಾನ್ ಆ್ಯಂಡ್ ಮೆತಮಟೀಷಿಯನ್, ಕ್ಲಾಸಿಫೈಡ್ ಕೆಟ್ಲಾಗ್, ಡಿಕ್ಷನರಿ ಕೆಟ್ಲಾಗ್, ಲೈಬ್ರರಿ ಅಡ್ಮಿನಿಸ್ಟ್ರೇಷನ್, ಇಂಡಿಯನ್ ಲೈಬ್ರರಿ ಮ್ಯಾನಿಫೆಸ್ಟೋ, ಲೈಬ್ರರಿ ಮ್ಯಾನುವಲ್ ಫಾರ್ ಲೈಬ್ರರಿ ಅಥಾರಿಟೀಸ್, ಲೈಬ್ರರಿಯನ್ಸ್ ಆ್ಯಂಡ್ ಲೈಬ್ರರಿ ವರ್ಕರ್ಸ್, ಕ್ಲಾಸಿಫಿಕೇಷನ್-ಕಮ್ಯುನಿಕೇಶನ್, ಕಂಪ್ಯಾರಿಟಿವ್ ಸ್ಟಡಿ ಆಫ್ ಫೈವ್ ಕ್ಯಾಟಲಾಗ್ಸ್ ಹೀಗೆ ಹತ್ತು ಹಲವಾರು ಗ್ರಂಥಗಳು ಅವರಿಗಿದ್ದ ಆಳವಾದ ವಿದ್ವತ್ತನ್ನು ಮತ್ತು ಅನುಭವವನ್ನು ಎತ್ತಿ ತೋರಿಸುತ್ತವೆ.

ಗ್ರಂಥಾಲಯದ ಮಹತ್ವ, ಉಪಯೋಗ, ಜತೆಗೆ ಗ್ರಂಥಾಲಯದ ಕೋರ್ಸ್, ಎರಡು ವರ್ಷಗಳ ಲೈಬ್ರರಿ ಸೈ ಆರಂಭದಲ್ಲಿಯೂ ಇವರ ಪಾತ್ರ ಮಹತ್ವದ್ದು. ಬನಾರಸ್ ವಿವಿ, ದೆಹಲಿ ವಿವಿ ಸೇರಿದಂತೆ ದೇಶ, ವಿದೇಶಗಳಲ್ಲಿನ ಹಲವಾರು ವಿವಿಗಳಲ್ಲಿ ಡಾ.ರಂಗನಾಥನ್ ಅವರ ವೈಜ್ಞಾನಿಕ ವರ್ಗೀಕರಣ ಪದ್ದತಿ (Colon Classification Scheme) ಮಾಡಿದ್ದಾರೆ. ಇಂದಿಗೂ ಈ ವರ್ಗೀಕರಣ ಹಲವರಿಗೆ ದಾರಿದೀಪವಾಗಿವೆ. ಡಾ.ರಂಗನಾಥನ್ ಅವರ ಪಂಚಸೂತ್ರಗಳಾದ ಗ್ರಂಥ ಓದಲು, ಗ್ರಂಥಕ್ಕೊಬ್ಬರು, ಎಲ್ಲರಿಗೂ ಗ್ರಂಥಗಳು, ಓದುಗರ ಸಮಯವನ್ನು ಉಳಿಸಿರಿ, ಗ್ರಂಥಾಲಯ ಬೆಳೆಯುವ ಶಿಶು ಇವು ಗ್ರಂಥಪಾಲಕರಿಗೆ ದಾರಿದೀಪವಾಗಿವೆ. ಡಾ.ಎಸ್.ಆರ್. ರಂಗನಾಥನ್ ಹಾಕಿಕೊಟ್ಟ ಹಾದಿಯಲ್ಲಿ ಪ್ರತಿಯೊಬ್ಬ ಗ್ರಂಥಪಾಲಕರೂ ನಡೆಯುತ್ತಾ ಬರುತ್ತಿರುವುದು ಶ್ಲಾಘನೀಯ.

ಪ್ರಶಸ್ತಿಗಳು ಮತ್ತು ಗೌರವಗಳು:

ಭಾರತ ದೇಶಕ್ಕೆ ಅವರ ಮಹತ್ವದ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು 1957ರಲ್ಲಿ ನೀಡಿ ಗೌರವಿಸಿತು. ದೇಶ-ವಿದೇಶಗಳಲ್ಲಿ ಹಲವು ಸಂಸ್ಥೆಗಳು ಅವರಿಗೆ ಗೌರವ ಮತ್ತು ಪ್ರಶಸ್ತಿಗಳನ್ನು ನೀಡಿವೆ.

ಗ್ರಂಥಪಾಲಕರಿಗೆ ಮಾರ್ಗದರ್ಶಿಗಳು:

ಗ್ರಂಥಾಲಯಗಳು ಎಂದರೆ ಜ್ಞಾನದ ಸಾಗರ, ಪುರಾಣ, ಇತಿಹಾಸ ಕಾಲದಿಂದಲೂ ಇಂದಿನ ಡಿಜಿಟಲ್ ಯುಗದ ವರೆಗೂ ಅನೇಕ ಪಂಡಿತರು, ಸಂಶೋಧಕರು, ಅನುಭಾವಿಗಳು ತಮ್ಮ ಶ್ರಮ, ಸಮಯ, ಜ್ಞಾನ ಉಪಯೋಗಿಸಿ ಮುಂದಿನ ಪೀಳಿಗೆಗೆ ಗ್ರಂಥಸ್ಥವಾಗಿ ಬರೆದಿಟ್ಟಿದ್ದಾರೆ. ಇಂತಹ ಜ್ಞಾನ ದೇಗುಲವೇ ಗ್ರಂಥಾಲಯ. ಗ್ರಂಥಾಲಯಕ್ಕೆ ಜ್ಞಾನದ ಕಣಜ ಎಂದು ಕರೆಯಲಾಗುತ್ತದೆ. ಇದರಲ್ಲಿ ಗ್ರಂಥಪಾಲಕರ ಶ್ರಮ ಬಹಳವಿದೆ. ಓದುಗನಿಗೆ ಜ್ಞಾನದ ಊಟವನ್ನು ಉಣಬಡಿಸಲು ಸದಾ ಸಿದ್ದನಾಗಿರುತ್ತಾನೆ. ಹಾಗಾಗಿ ಪ್ರತಿಯೊಬ್ಬ ಗ್ರಂಥಪಾಲಕನಿಗೆ ಡಾ.ಎಸ್.ಆರ್.ರಂಗನಾಥನ್ ಮಾರ್ಗದರ್ಶಿಯಾಗಿ, ದಾರಿದೀಪವಾಗಿ ಮಾತ್ರವಲ್ಲ ಜ್ಞಾನದೀವಿಗೆಯಾಗಿ ನಿಲ್ಲುತ್ತಾರೆ. ಇಂತಹ ಶ್ರೇಷ್ಠ ಗ್ರಂಥಪಾಲಕರ ನೆನಪಿಗಾಗಿ ಗ್ರಂಥಾಲಯ ದಿನಾಚರಣೆ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆ ಮಾತ್ರವಲ್ಲ, ಔಚಿತ್ಯ ಕೂಡ. ಎಲ್ಲಿಯವರೆಗೆ ಗ್ರಂಥಾಲಯದಲ್ಲಿ ಪುಸ್ತಕಗಳು ಇರುತ್ತವೆಯೋ ಅಲ್ಲಿಯವರೆಗೂ ಜ್ಞಾನ ಹಂಚಿಕೆಯಾಗುತ್ತಲೇ ಇರುತ್ತದೆ. ಅದಕ್ಕೆ ತಳಸ್ಪರ್ಶಿಯಾದವರು ಡಾ.ರಂಗನಾಥನ್.

ಗ್ರಂಥಾಲಯ ವಿಜ್ಞಾನದ ಪಂಚ ಸೂತ್ರಗಳು (Five Laws of Library Science) 

ಡಾ. ಎಸ್. ಆರ್. ರಂಗನಾಥನ್ ಅವರು 1931ರಲ್ಲಿ ಪ್ರಸ್ತಾಪಿಸಿದ ಗ್ರಂಥಾಲಯ ವಿಜ್ಷಾನದ ಐದು ಪ್ರಮುಖ ನಿಯಮಗಳಾಗಿವೆ. ಇಂದಿನ ಆಧುನಿಕ ಯುಗದಲ್ಲಿಯೂ ಸಹಿತ ಗ್ರಂಥಾಲಯದ ನಿಯಮಗಳು ವಿಜ್ಞಾನದ ಮೂಲ ತತ್ವಗಳಾಗಿವೆ:

Books are for use — ಪುಸ್ತಕಗಳು ಉಪಯೋಗಕ್ಕಾಗಿ.

ಪುಸ್ತಕಗಳನ್ನು ಕೇವಲ ಸಂಗ್ರಹಿಸಿಡುವುದಕ್ಕಲ್ಲ; ಓದುಗರು ಬಳಸಲು ಅವು ಲಭ್ಯವಾಗಬೇಕು.

Every reader his/her book — ಪ್ರತಿಯೊಬ್ಬ ಓದುಗನಿಗೂ ಅವನ/ಅವಳ ಪುಸ್ತಕ.

ಪ್ರತಿಯೊಬ್ಬರ ಆಸಕ್ತಿ ಮತ್ತು ಅಗತ್ಯಕ್ಕೆ ಅನುಗುಣವಾದ ಪುಸ್ತಕ ದೊರೆಯಬೇಕು.

Every book its reader — ಪ್ರತಿಯೊಂದು ಪುಸ್ತಕಕ್ಕೂ ಅದರ ಓದುಗ.

ಪ್ರತಿಯೊಂದು ಪುಸ್ತಕವೂ ಯಾರಿಗಾದರೂ ಉಪಯುಕ್ತವಾಗಿರುತ್ತದೆ; ಅದನ್ನು ಸೂಕ್ತ ಓದುಗರಿಗೆ ತಲುಪಿಸಬೇಕು.

Save the time of the reader — ಓದುಗರ ಸಮಯವನ್ನು ಉಳಿಸಬೇಕು.

ಪುಸ್ತಕ ಹುಡುಕುವುದು ಮತ್ತು ಮಾಹಿತಿ ಪಡೆಯುವುದು ಸುಲಭ ಹಾಗೂ ವೇಗವಾಗಿರಬೇಕು.

Library is a growing organism — ಗ್ರಂಥಾಲಯವು ಬೆಳೆಯುತ್ತಿರುವ ಜೀವಂತ ಸಂಸ್ಥೆ.

ಹೊಸ ಪುಸ್ತಕಗಳು, ಹೊಸ ತಂತ್ರಜ್ಞಾನ ಮತ್ತು ಹೊಸ ಓದುಗರ ಅಗತ್ಯಗಳಿಗೆ ಅನುಗುಣವಾಗಿ ಗ್ರಂಥಾಲಯವೂ ನಿರಂತರವಾಗಿ ಬೆಳೆಯಬೇಕು.

ಕರ್ನಾಟಕದಲ್ಲಿ ಗ್ರಂಥಾಲಯದ ವಸ್ತುಸ್ಥಿತಿ:

ಕರ್ನಾಟಕದಲ್ಲಿ ಸಾರ್ವಜನಿಕ ಗ್ರಂಥಾಲಯ ವಿಭಾಗದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಕೇವಲ ಪುಸ್ತಕಗಳು ಮಾತ್ರವಲ್ಲ, ಡಿಜಿಟಲ್ ಗ್ರಂಥಾಲಯಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಡಿಜಿಟಲ್ ಗ್ರಂಥಾಲಯ ಜನರಿಗೆ ಹೆಚ್ಚು ಉಪಯುಕ್ತವಾಯಿತು. ಪ್ರಸ್ತುತ ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿಯಲ್ಲಿ ರಾಜ್ಯಾದ್ಯಂತ 26 ನಗರ ಕೇಂದ್ರ ಗ್ರಂಥಾಲಯಗಳು 30 ಜಿಲ್ಲಾ ಕೇಂದ್ರ ಗ್ರಂಥಾಲಯಗಳು, 216 ತಾಲೂಕು ಗ್ರಂಥಾಲಯಗಳು ಸೇರಿ Greater Bengaluru Authority ಅಡಿಯಲ್ಲಿ ಒಟ್ಟು 200 ಕ್ಕೂ ಹೆಚ್ಚು ಶಾಖಾ ಗ್ರಂಥಾಲಯಗಳು ಅದಲ್ಲದೇ ರಾಜ್ಯದ ವಿವಿಧ ನಗರಗಳಲ್ಲಿ ಒಟ್ಟು 1300 ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ. ಅದಲ್ಲದೇ ರಾಜ್ಯದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಅಂದಾಜು 5700 ಕ್ಕೂ ಹೆಚ್ಚು ಗ್ರಾಮೀಣ ಗ್ರಂಥಾಲಯಗಳು ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳನ್ನು ಕರ್ನಾಟಕ ಸರ್ಕಾರವು “ಅರಿವು ಕೇಂದ್ರ” ಎಂದು ಮರು ನಾಮಕರಣ ಮಾಡಲಾಗಿರುತ್ತದೆ. ಗ್ರಾಮೀಣ ಭಾಗದ ಅರಿವು ಕೇಂದ್ರಗಳಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಲು ಓದುವ ಬೆಳಕು ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಅದಲ್ಲದೇ ಗ್ರಾಮೀಣ ಭಾಗದ ಅರಿವು ಕೇಂದ್ರಗಳಲ್ಲಿ ಮಕ್ಕಳಿಗೆ, ಯುವಕರಿಗೆ, ರೈತರಿಗೆ ಗ್ರಂಥಾಲಯಗಳಲ್ಲಿ ಲಭ್ಯವಿರುವ ಪುಸ್ತಕಗಳನ್ನು ಒದಗಿಸುವುದರ ಮೂಲಕ ಮತ್ತು ಗಣಕಯಂತ್ರಗಳ ಮೂಲಕ ಓದುವ ಹವ್ಯಾಸಗಳನ್ನು ಹೆಚ್ಚಿಸಲಾಗುತ್ತಿದೆ ಹಾಗೂ AI ತಂತ್ರಜ್ಞಾನದ ಮೂಲಕ ಅರಿವು ಮೂಡಿಸಲಾಗುತ್ತಿದೆ. 

ಅದಲ್ಲದೆ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಶಾಲಾ ಗ್ರಂಥಾಲಯಗಳನ್ನು ಬಲವರ್ಧನೆಗೊಳಿಸಲಾಗುತ್ತಿದೆ ಮತ್ತು ಶಾಲಾ ಗ್ರಂಥಾಲಯಗಳಿಗೆ ಹೊಸ ಹೊಸ ಪುಸ್ತಕಗಳನ್ನು ಒದಗಿಸುವುದರ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಲಾಗುತ್ತಿದೆ. ಅದಲ್ಲದೆ ವಿವಿಧ ವಿಶ್ವವಿದ್ಯಾಲಯ ಗ್ರಂಥಾಲಯಗಳು ಹಾಗೂ ಕಾಲೇಜು ಗ್ರಂಥಾಲಯಗಳು ಮತ್ತು ಪದವಿ ಪೂರ್ವ ಗ್ರಂಥಾಲಯಗಳು ಸೇರಿ ಓದುಗರ ಅಭಿರುಚಿಗೆ ತಕ್ಕಂತೆ ಗ್ರಂಥಾಲಯ ಸೇವೆಯನ್ನು ಸಮರ್ಪಕವಾಗಿ ನೀಡುತ್ತಿವೆ. ಈ ಮೂಲಕ ಗ್ರಂಥಪಾಲಕ ದಿನಾಚರಣೆಯನ್ನು ಆಚರಿಸುವ ಎಲ್ಲಾ ಗ್ರಂಥಪಾಲಕರಿಗೆ ಶುಭಾಷಯಗಳನ್ನು ಸಲ್ಲಿಸುತ್ತೇನೆ.

ಡಾ. ಸತೀಶ ಕುಮಾರ ಎಸ್. ಹೊಸಮನಿ

ನಿರ್ದೇಶಕರು (ಕಾರ್ಯಕ್ರಮ)

ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ,

ಕೆ.ಆರ್‌ ವೃತ್ತ, ಬೆಂಗಳೂರು.