ಹೋಟೆಲ್ ಉದ್ಯಮಿಗಳ ಜೊತೆ ಸಂವಾದದಲ್ಲಿ ಡಿಸಿಪಿ ಶಾಲೂ ಹೇಳಿಕೆ

ಹೋಟೆಲ್ ಉದ್ಯಮಿಗಳ ಜೊತೆ ಸಂವಾದದಲ್ಲಿ ಡಿಸಿಪಿ ಶಾಲೂ ಹೇಳಿಕೆ

ಹೋಟೆಲ್ ಸುಗಮ ವ್ಯವಹಾರಕ್ಕೆ ಪೊಲೀಸ್ ಇಲಾಖೆಯ ಪೂರ್ಣ ಸಹಕಾರ

 ಹೋಟೆಲ್ ಉದ್ಯಮಿಗಳ ಜೊತೆ ಸಂವಾದದಲ್ಲಿ ಡಿಸಿಪಿ ಶಾಲೂ ಹೇಳಿಕೆ

 ಕಲಬುರಗಿ : ಹೋಟೆಲ್ ಉದ್ಯಮಿಗಳು ಕಾನೂನಿನ ಚೌಕಟ್ಟಿನಲ್ಲಿ ಸುಗಮವಾಗಿ ವ್ಯಾಪಾರ ವಹಿವಾಟು ನಡೆಸಲು ಪೊಲೀಸ್ ಇಲಾಖೆಯು ಸಂಪೂರ್ಣ ಸಹಕಾರ ನೀಡಲಿದೆ ಎಂದು ಪೊಲೀಸ್ ಉಪ ಉಪಯುಕ್ತೆ (ಕಾನೂನು ಮತ್ತು ಭದ್ರತೆ ) ಶ್ರೀಮತಿ ಶಾಲೂ ಹೇಳಿದರು.

    ಕಲಬುರಗಿಯಲ್ಲಿ ಗುರುವಾರ (ಆಗಸ್ಟ್ 12ರಂದು) ನಗರದ ಸಾರ್ವಜನಿಕ ಉದ್ಯಾನವನದ ಶ್ರೀ ಯಾತ್ರಿಕ ನಿವಾಸ ಸಭಾಂಗಣದಲ್ಲಿ ನಡೆದ ಕಲಬುರಗಿ ಜಿಲ್ಲಾ ಹೋಟೆಲ್,ಬೇಕರಿ ಮತ್ತು ವಸತಿಗೃಹ ಮಾಲೀಕರ ಜೊತೆಗಿನ ಸಂವಾದದಲ್ಲಿ ಮಾತನಾಡಿ ಪ್ರತಿ ವಸತಿಗೃಹಗಳಲ್ಲಿ ಸಿಸಿ ಕ್ಯಾಮೆರಾ,ನೋಂದಣಿ ಪುಸ್ತಕ ಹಾಗೂ ಗ್ರಾಹಕರ ಆಧಾರ್ ಕಾರ್ಡ್ಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಜೂಜಾಟ, ವೇಶ್ಯಾವಾಟಿಕೆ, ಸೇರಿದಂತೆ ಅನ್ಯ ಅಕ್ರಮ ಚಟುವಟಿಕೆಗಳಿಗೆ ವಸತಿಗೃಹವನ್ನು ನೀಡಿದರೆ ಕಠಿಣವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದು ಇಡೀ ಹೋಟೆಲ್ ಉದ್ಯಮಕ್ಕೆ ಕೆಟ್ಟ ಹೆಸರು ಹಾಗೂ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅನೇಕ ಬಾರಿ ಎಚ್ಚರಿಕೆಗಳನ್ನು ನೀಡಿದರೂ ಕಾನೂನು ಪಾಲನೆಗೆ ವಿಫಲವಾಗುತ್ತಿರುವ ಹೋಟೆಲ್ ಗಳ ವಿರುದ್ಧ ಪೋಲಿಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು ಕ್ಷಿಪ್ರ ತಪಾಸಣೆ ನಡೆಸಲಾಗು ತ್ತಿದೆ. ಹೋಟೆಲ್, ವಸತಿ ಗೃಹ ಉದ್ಯಮಿಗಳ ಸಮಸ್ಯೆಗಳಿಗೆ ಪೊಲೀಸ್ ಇಲಾಖೆ ಸದಾ ನೆರವು ನೀಡಲಿದ್ದು ಪೂರ್ಣ ಸಹಕಾರದೊಂದಿಗೆ ವ್ಯಾಪಾರ ವಹಿವಾಟು ನಡೆಸಲು ವಾತಾವರಣ ಕಲ್ಪಿಸಲಾಗುವುದು ಎಂದು ಶಾಲೂ ಹೇಳಿದರು.

    ನಂತರ ನಡೆದ ಸಂವಾದದಲ್ಲಿ ಪ್ರದೇಶ ಹೋಟೆಲ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಸತ್ಯನಾಥ ಶೆಟ್ಟಿ ಮಾತನಾಡಿ ಹೋಟೆಲ್ ಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳತ್ತ ಗಮನ ಸೆಳೆದಾಗ ಉದ್ಯಮಿಗಳಿಗೆ ಯಾವುದೇ ರೀತಿಯಲ್ಲಿ ಕಿರುಕುಳ ನೀಡದಂತೆ ಪೊಲೀಸ್ ಸಿಬ್ಬಂದಿಗಳಿಗೆ ಕೂಡ ಸಲಹೆ ನೀಡಲಾಗುವುದು ಆಧಾರ್ ಕಾರ್ಡ್, ಸಿಸಿ ಕ್ಯಾಮೆರಾ ಸೇರಿದಂತೆ ಸೂಕ್ತ ದಾಖಲೆ ಪತ್ರಗಳನ್ನು ಇಟ್ಟುಕೊಳ್ಳುವಂತೆ ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ನರಸಿಂಹ ಮೆಂಡನ್ ಮಾತನಾಡಿ ಉದ್ಯಮಿಗಳು ಮತ್ತು ಪೊಲೀಸ್ ಇಲಾಖೆಯು ಪರಸ್ಪರ ಸಹಕಾರದಿಂದ ಪ್ರಾಮಾಣಿಕವಾಗಿ ವ್ಯವಹಾರ ನಡೆಸಲು ಎಲ್ಲ ರೀತಿಯ ಸಹಾಯ ಸಹಕಾರಗಳನ್ನು ಅಸೋಸಿಯೇಷನ್ ಕಡೆಯಿಂದ ಪೊಲೀಸ್ ಇಲಾಖೆಗೆ ನೀಡಲಾಗುವುದು ಎಂದು ಭರವಸೆ ನೀಡಿದರು.

    ಹೋಟೆಲ್ ಅಸೋಸಿಯೇಷನ್ ಗೆ ಮೊದಲ ಬಾರಿಗೆ ಆಗಮಿಸಿದ ಡಿಸಿಪಿಯವರಿಗೆ ಸ್ಮರಣಿಕೆ ಹಾಗೂ ಹೂಗುಚ್ಛ ನೀಡಿ ಸನ್ಮಾನಿಸಲಾಯಿತು. ಸಂಘದ ವಸತಿ ವಿಭಾಗದ ಉಪಾಧ್ಯಕ್ಷರಾದ ಗಿರಿಧರ ಭಟ್, ಬೇಕರಿ ವಿಭಾಗದ ಉಪಾಧ್ಯಕ್ಷರಾದ ಮೊಯಿನುದ್ದೀನ್, ಹೋಟೆಲ್ ವಿಭಾಗದ ಉಪಾಧ್ಯಕ್ಷರಾದ ಶರಣು ಪಾಟೀಲ್ ಉಪಸ್ಥಿತರಿದ್ದರು. ಅಸೋಸಿಯೇಷನ್ ಕಾರ್ಯದರ್ಶಿ ಮಹಾ ಕೀರ್ತಿ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು ಕೋಶಾಧಿಕಾರಿ ಸುನಿಲ್ ಶೆಟ್ಟಿ ವಂದನಾರ್ಪಣೆ ಮಾಡಿದರು. ಸಂವಾದದಲ್ಲಿ 50ಕ್ಕೂ ಹೆಚ್ಚು ಉದ್ಯಮಿಗಳು ಪಾಲ್ಗೊಂಡಿದ್ದರು.