ಡಾ. ಪ್ರಣವಾನಂದ ಶ್ರೀ ನೇತೃತ್ವದಲ್ಲಿ ಡಿಕೆಶಿ ಸಿಎಂಗಾಗಿ ವಿಶೇಷ ಪೂಜೆ

ಡಾ. ಪ್ರಣವಾನಂದ ಶ್ರೀ ನೇತೃತ್ವದಲ್ಲಿ ಡಿಕೆಶಿ ಸಿಎಂಗಾಗಿ ವಿಶೇಷ ಪೂಜೆ

ಡಿಕೆಶಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಮೇ . 5ಕ್ಕೆ ಕಲಬುರಗಿಯಲ್ಲಿ ಚಂಡಿಕಾ ಹೋಮ

32 ಅತಿ ಹಿಂದುಳಿದ ಸ್ವಾಮೀಜಿಗಳ ಜೊತೆ ದೆಹಲಿಗೆ ಪ್ರಯಾಣ ಡಾ. ಪ್ರಣವಾನಂದ ಶ್ರೀ ಘೋಷಣೆ

ಕಲಬುರಗಿ : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಶೀಘ್ರದಲ್ಲಿ ಮುಖ್ಯಮಂತ್ರಿಯಾಗಲಿ ಎಂಬ ಪ್ರಾರ್ಥನೆಗಾಗಿ ಮೇ. 5 ರಂದು ಕಲಬುರಗಿಯಲ್ಲಿ ಚಂಡಿಕಾ ಹೋಮ ಹಾಗೂ ಹಿಂದುಳಿದ 32 ಸ್ವಾಮಿಗಳ ನಿಯೋಗದೊಂದಿಗೆ ಮೇ ಮೊದಲ ವಾರದಲ್ಲಿ ದೆಹಲಿಗೆ ತೆರಳಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ನಿರ್ಧರಿಸಲಾಗಿದೆ ಎಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕು ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಸ್ವಾಮೀಜಿ ಹೇಳಿದರು.

    ಬೆಂಗಳೂರಿನಲ್ಲಿ ಏ 27ರಂದು ಸೋಮವಾರ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿ ಮೇ 5 ರಂದು ಕಲಬುರಗಿಯ ಗುಬ್ಬಿ ಕಾಲನಿಯ ಶ್ರೀ ಅಂಬಾ ಭವಾನಿ ಗುಡಿಯಲ್ಲಿ ವಿಶ್ವಕರ್ಮ ಸಮಾಜದ ಪೂಜ್ಯ ಶ್ರೀ ದೊಡ್ಡೆಂದ್ರ ಸ್ವಾಮೀಜಿಯವರ ಪೌರೋಹಿತ್ಯದಲ್ಲಿ ಅತಿ ಹಿಂದುಳಿದ ಸ್ವಾಮೀಜಿಗಳ ಸಮ್ಮುಖದಲ್ಲಿ ಚಂಡಿಕಾ ಹೋಮವನ್ನು ಮಾಡಿ ಮುಖ್ಯಮಂತ್ರಿ ಪಟ್ಟ ಸಿಗಲಿ ಎಂದು ಪ್ರಾರ್ಥನೆ ಮಾಡಲು ನಿರ್ಧರಿಸಲಾಗಿದೆ. ಮೇ ಮೊದಲ ವಾರ ಸುಮಾರು 32 ಅತಿ ಹಿಂದುಳಿದ ಸ್ವಾಮೀಜಿಗಳನ್ನು ಬೆಂಗಳೂರು, ಹುಬ್ಬಳ್ಳಿ ಮತ್ತು ಹೈದರಾಬಾದ್ ಮೂಲಕ ವಿಮಾನದಲ್ಲಿ ದೆಹಲಿಗೆ ಕರೆದುಕೊಂಡು ಹೋಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಕಾರ್ಯದರ್ಶಿ ಕೆ . ಸಿ ವೇಣುಗೋಪಾಲ್ ಮತ್ತಿತರ ಮುಖಂಡರನ್ನು ಭೇಟಿಯಾಗಿ ಡಿಕೆಶಿ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಮನವಿ ಮೂಲಕ ಒತ್ತಾಯಿಸಲಾಗುವುದು ಎಂದು ಡಾ. ಪ್ರಣವಾನಂದ ಸ್ವಾಮೀಜಿ ತಿಳಿಸಿದರು. 

     ಡಿ ಕೆ ಶಿವಕುಮಾರ್ ಜಾತಿ ನೋಡಿ ರಾಜಕಾರಣ ಮಾಡಿದವರಲ್ಲ. ಅವರು ಕಳೆದ ಎಂಟು ವರ್ಷಗಳಲ್ಲಿ ಪಕ್ಷಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಹಣ ಖರ್ಚು ಮಾಡಿ ನಿಸ್ವಾರ್ಥವಾಗಿ ದುಡಿದಿದ್ದಾರೆ. ರಾಜ್ಯದಲ್ಲಿ 136 ಸ್ಥಾನಗಳೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅವರ ಪಾತ್ರ ಬಹಳ ಪ್ರಮುಖವಾಗಿದೆ. ಕಳೆದ ಆರು ತಿಂಗಳಿಂದ ಅವರನ್ನು ಮುಖ್ಯಮಂತ್ರಿ ಮಾಡುವ ವಿಚಾರದ ಬಗ್ಗೆ ಮಕರ ಸಂಕ್ರಾಂತಿ, ಯುಗಾದಿ, ಪಂಚ ರಾಜ್ಯಗಳ ಚುನಾವಣೆ ಎಂದು ಕಾಲಹರಣ ಮಾಡುತ್ತಿದ್ದು ಕೂಡಲೇ ಅವರನ್ನು ಹೈಕಮಾಂಡ್ ಮಾತು ಕೊಟ್ಟಂತೆ ಮುಖ್ಯಮಂತ್ರಿ ಸ್ಥಾನ ನೀಡಿ ಗೌರವಯುತವಾಗಿ ನಡೆಸಿಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಹಾಗೂ ರಾಷ್ಟ್ರ ಮಟ್ಟದ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮುಂಚೂಣಿ ನಾಯಕರಾಗಿ ಪ್ರಾಮಾಣಿಕವಾಗಿ ಕಾರ್ಯವೆಸಗುತ್ತಿರುವ ಡಿಕೆಶಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ಮಾತ್ರ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿ ಉಳಿಯಬಹುದು ಎಂದು ಸ್ವಾಮೀಜಿ ಹೇಳಿದರು. ನಿಯೋಗದೊಂದಿಗೆ ಸುಲೇಪೇಟೆ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ದೊಡ್ಡೇಂದ್ರ ಸ್ವಾಮೀಜಿ ಹಾಗೂ ಉಪ್ಪಾರ ಸಮಾಜದ ಭಗೀರಥ ಸ್ವಾಮೀಜಿ ಜೊತೆಗಿದ್ದರು.