ಅಂತರಾಷ್ಟ್ರೀಯ ನಿವೃತ್ತ ನ್ಯಾಯಾಧೀಶರ ಸಮಾವೇಶಕ್ಕೆ ಕಲಬುರಗಿ ವಕೀಲರ ತಂಡ ಪ್ರಯಾಣ
ಅಂತರಾಷ್ಟ್ರೀಯ ನಿವೃತ್ತ ನ್ಯಾಯಾಧೀಶರ ಸಮಾವೇಶಕ್ಕೆ ಕಲಬುರಗಿ ವಕೀಲರ ತಂಡ ಪ್ರಯಾಣ
ಕಲಬುರಗಿ, ಮೇ 27:ರಾಜಸ್ಥಾನದ ಮೌಂಟ್ ಅಬು ಕೇಂದ್ರದಲ್ಲಿರುವ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ನಿವೃತ್ತ ನ್ಯಾಯಾಧೀಶರ ಸಮಾವೇಶದಲ್ಲಿ ಭಾಗವಹಿಸಲು ಕಲಬುರಗಿ ವಕೀಲರ ಬಳಗದ ತಂಡ ಇಂದು ಪ್ರಯಾಣ ಬೆಳೆಸಿತು.
ಎಸ್‌ಬಿಎಚ್ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶ್ರೀ ವೀರಭದ್ರಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಪ್ರಸ್ತುತ ನ್ಯಾಯಾಂಗ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ 8 ಜನ ನ್ಯಾಯವಾದಿಗಳು ಹಾಗೂ ಇಬ್ಬರು ಲೆಕ್ಕಪರಿಶೋಧಕರು ಈ ಸಮಾವೇಶದಲ್ಲಿ ಭಾಗವಹಿಸಲು ತೆರಳಿದ್ದಾರೆ.
ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ (DLSA) ಶ್ರೀ ನೀಲಕಂಠ ಹಾಗೂ ಹಿರಿಯ ವಕೀಲರಾದ ಮಲ್ಲಿಕಾರ್ಜುನ ಕೋಟೆ ಅವರು ತಂಡದ ಸದಸ್ಯರಿಗೆ ರಾಷ್ಟ್ರ ಸಂಕೇತದ ಶಾಲು ಹೊದಿಸಿ, ಯಾತ್ರೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿ ಗೌರವಪೂರ್ವಕವಾಗಿ ಬೀಳ್ಕೊಟ್ಟರು.
ಸಮಾವೇಶದೊಂದಿಗೆ ತಂಡವು ಸೋಮೇಶ್ವರ ಕ್ಷೇತ್ರ, ದ್ವಾರಕಾ ಕೃಷ್ಣನ ಕ್ಷೇತ್ರ, ಮಥುರಾ, ಅಕ್ಷರಧಾಮ ಸೇರಿದಂತೆ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ದರ್ಶನ ಪಡೆಯಲಿದ್ದು, ಧಾರ್ಮಿಕ ವಿಧಿ-ವಿಧಾನಗಳ ಅಧ್ಯಯನವನ್ನೂ ನಡೆಸಲಿದ್ದಾರೆ. ಜೂನ್ 4ರಂದು ಮರಳಿ ಕಲಬುರಗಿಗೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ಪ್ರಯಾಣದಲ್ಲಿ ಮಲ್ಲಿಕಾರ್ಜುನ ಪಾಟೀಲ, ಲಿಂಗಣ್ಣಗೌಡ ಪಾಟೀಲ, ಸಂಘನಗೌಡ ಪಾಟೀಲ, ಬಸನಗೌಡ ಹುನಗುಂದ, ಸಂಗಣ್ಣ ಬಾದವಾಡಗಿ, ಶಿವಶರಣಪ್ಪ ಮನ್ನಳ್ಳಿ, ನಾಗರಾಜ ತಡಕಲ್, ವಿಜಯಕುಮಾರ ಟೋನಪೆ, ಸುನೀಲ್ ಚಿಟಗುಪಿಕರ ಸೇರಿದಂತೆ ಹಲವರು ಭಾಗವಹಿಸಿದ್ದಾರೆ ಎಂದು ನ್ಯಾಯವಾದಿ ವಿನೋದಕುಮಾರ ಜೆನವೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
