ಗೋವಿಂದರಾವ ಆಯೋಗದ ವರದಿ ಆಧಾರಿಸಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಲಿ: ಹೋರಾಟ ಸಮಿತಿ ಆಗ್ರಹ
ಗೋವಿಂದರಾವ ಆಯೋಗದ ವರದಿ ಆಧಾರಿಸಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಲಿ: ಹೋರಾಟ ಸಮಿತಿ ಆಗ್ರಹ
ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಗೋವಿಂದರಾವ ನೇತೃತ್ವದ ನೂತನ ಪ್ರಾದೇಶಿಕ ಅಸಮತೋಲನಾ ನಿವಾರಣಾ ಆಯೋಗದ ವರದಿಯನ್ನು ಆಧಾರವನ್ನಾಗಿ ಪಡೆದು ಸರ್ಕಾರ ತಕ್ಷಣ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಒತ್ತಾಯಿಸಿದೆ.
ಈ ಕುರಿತು ಪ್ರಕಟಣೆ ನೀಡಿದ ಸಮಿತಿಯ ಗೌರವಾಧ್ಯಕ್ಷ ಬಸವರಾಜ ದೇಶಮುಖ ಹಾಗೂ ಸಂಸ್ಥಾಪಕ ಅಧ್ಯಕ್ಷ ಡಾ. ಲಕ್ಷ್ಮಣ ದಸ್ತಿ ಅವರು, ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಸಮರ್ಪಕ “ನೀಲಿ ನಕ್ಷೆ” ಸಿದ್ಧಪಡಿಸಿ, ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಂಜುಂಡಪ್ಪ ಆಯೋಗವನ್ನು ರಚಿಸಿ, 2002ರಲ್ಲಿ ವರದಿ ಸಲ್ಲಿಸಲಾಗಿತ್ತು. ಆ ವರದಿಯನ್ನು ಆಧರಿಸಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದರೂ, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಸಾಧ್ಯವಾಗಿಲ್ಲ. ಪರಿಣಾಮವಾಗಿ, ಕಲ್ಯಾಣ ಕರ್ನಾಟಕ ಪ್ರದೇಶವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಇನ್ನೂ ಹಿಂದುಳಿದ ಸ್ಥಿತಿಯಲ್ಲಿರುವುದು ವಿಷಾದನೀಯ ಎಂದು ಅವರು ಅಭಿಪ್ರಾಯಪಟ್ಟರು.
ಇದನ್ನು ಮನಗಂಡು ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅಭಿವೃದ್ಧಿ ಸೂಚ್ಯಂಕಗಳನ್ನು ಪರಿಷ್ಕರಿಸಿ, ಗೋವಿಂದರಾವ ನೇತೃತ್ವದಲ್ಲಿ ಹೊಸ ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಬಜೆಟ್ ಅಧಿವೇಶನಕ್ಕೂ ಮುನ್ನವೇ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಹೀಗಾಗಿ, ಸರ್ಕಾರ ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರದಲ್ಲೇ ಕಾರ್ಯೋನ್ಮುಖ ಕ್ರಮಗಳನ್ನು ಕೈಗೊಂಡು, ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾಲಮಿತಿಯೊಳಗೆ ಸ್ಪಷ್ಟ ಮತ್ತು ಪರಿಣಾಮಕಾರಿ ಯೋಜನೆ ರೂಪಿಸಬೇಕು ಎಂದು ಹೋರಾಟ ಸಮಿತಿ ಬಲವಾಗಿ ಒತ್ತಾಯಿಸಿದೆ.
