ಡಾ. ಎ. ಕುಮುದ ರವರ ಶ್ರೀಹರಿಯ ದಶಾವತಾರ ಕೃತಿಗಳು ಬಿಡುಗಡೆ

ಡಾ. ಎ. ಕುಮುದ ರವರ ಶ್ರೀಹರಿಯ ದಶಾವತಾರ ಕೃತಿಗಳು ಬಿಡುಗಡೆ

ವಾಗ್ದೇವಿ ಭಜನಾ ಮಂಡಳಿಯ 36ನೇ ವಾರ್ಷಿಕೋತ್ಸವ 

 ಡಾ. ಎ. ಕುಮುದ ರವರ ಶ್ರೀಹರಿಯ ದಶಾವತಾರ ಕೃತಿಗಳು ಬಿಡುಗಡೆ 

 ನಗರದ ಬಸವನಗುಡಿಯ ಶ್ರೀ ಉತ್ತರಾದಿ ಮಠದಲ್ಲಿ ವಾಗ್ದೇವಿ ಭಜನಾ ಮಂಡಳಿಯ 36ನೇ ವಾರ್ಷಿಕೋತ್ಸವವನ್ನು ಆಯೋಜಿಸಲಾಗಿತ್ತು.

 ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಡಾ.ಸತ್ಯಧ್ಯಾನಚಾರ್ ಕಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವಾಗ್ದೇವಿ ಭಜನಾ ಮಂಡಳಿಯ ಅಧ್ಯಕ್ಷಿಣಿ ಡಾ. ಎ.ಕುಮುದರವರು ಸಂಪಾದಿಸಿರುವ ವಿವಿಧ ಯತಿಗಳು ಮತ್ತು ಹರಿದಾಸ ರಚಿಸಿದ ಶ್ರೀಹರಿಯ ದಶಾವತಾರ ಕೀರ್ತನೆಗಳ ಕೃತಿಯನ್ನು ವಿದ್ವಾನ್ ಕರ್ನೂಲ್ ಶ್ರೀನಿವಾಸ ಆಚಾರ್ಯರು ಲೋಕಾರ್ಪಣೆಗೊಳಿಸಿದರು. 83ರ ಇಳಿ ವಯಸ್ಸಿನಲ್ಲೂ ಲವಲವಿಕೆಯಿಂದ ದಾಸ ಸಾಹಿತ್ಯದಲ್ಲಿ ಅನೇಕ ಕೃತಿಗಳನ್ನು ಪ್ರಕಟಪಡಿಸಿರುವ ಇವರ ಕ್ರಿಯಾಶೀಲತೆ ಯುವ ಜನಾಂಗಕ್ಕೆ ಮಾದರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀಮತಿ ರಾಜಲಕ್ಷ್ಮಿ ಪಾರ್ಥಸಾರಥಿ ಮಾತನಾಡುತ್ತಾ ಶ್ರೀಹರಿಯ ದಶಾವತಾರಗಳು ವಿಕಾಸವಾದಕ್ಕೆ ಪೂರಕವಾಗಿದ್ದು ಸಂಶೋಧನಾತ್ಮಕ ದೃಷ್ಟಿಯೊಂದಿಗೆ ಭಕ್ತಿಯ ಸುಧೆಯು ಇಲ್ಲಿ ಮೇಳಯಿಸಿದೆ. ಸುಮಾರು 132 ಕೀರ್ತನೆಗಳ ಸಂಗ್ರಹ ಇದಾಗಿದ್ದು ಸಂಗೀತಾಸಕ್ತರಿಗೆ ಆಕರ ಗ್ರಂಥವಾಗಿ ಶೋಭಿಸುತ್ತದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಅಂಕಣಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮತ್ತು ಶ್ರೀನಿವಾಸ ಉತ್ಸವ ಬಳಗದ ಸಂಸ್ಥಾಪಕ ಅಧ್ಯಕ್ಷ ಡಾ. ಟಿ ವಾದಿರಾಜ ರವರು ಉಪಸ್ಥಿತರಿದ್ದರು .

 ಕಾರ್ಯಕ್ರಮದ ಆರಂಭದಲ್ಲಿ ಕು. ಸಾಚಿ ವರುಣ್ ರಿಂದ ಭರತನಾಟ್ಯ ನಡೆಯಿತು. ದೇವಗಿರಿ ಲಕ್ಷ್ಮಿಕಾಂತ ಸಂಘದ ಅಧ್ಯಕ್ಷಣಿ ಶ್ರೀಮತಿ ಜಿ.ವಿ ಶಾಂತ ಬಾಯಿ, ಶ್ರೀಮತಿ ಭಾಗ್ಯ ಸತೀಶ್,ಶ್ರೀಮತಿ ರೇಖಾ ಲಕ್ಷ್ಮೇಶ್ವರ ರವರುಗಳನ್ನು ಸನ್ಮಾನಿಸಲಾಯಿತು. ವಿವಿಧ ಭಜನಾ ಮಂಡಳಿಗಳ ಮಾತೆಯರಿಗೆ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀವಾರಿ ಫೌಂಡೇಶನ್ ನ ವೆಂಕಟೇಶಮೂರ್ತಿ ರವರ ನೇತೃತ್ವದಲ್ಲಿ ವೈಭವದ ಶ್ರೀನಿವಾಸ ಕಲ್ಯಾಣೋತ್ಸವದೊಂದಿಗೆ ಸಂಪನ್ನವಾಯಿತು.