ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಹನುಮಂತರಾವ ಬಿ. ದೊಡ್ಡಮನಿ

ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ  ಡಾ. ಹನುಮಂತರಾವ ಬಿ. ದೊಡ್ಡಮನಿ

ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ 

ಡಾ. ಹನುಮಂತರಾವ ಬಿ. ದೊಡ್ಡಮನಿ

         ಲೇಖಕರು: ಡಾ.ಗವಿಸಿದ್ಧಪ್ಪ ಪಾಟೀಲ,ಕಲಬುರಗಿ

ಕನ್ನಡ ದಲಿತ ಚಳುವಳಿ ಮತ್ತು ಸಾಹಿತ್ಯ ಎರಡು ಕಡೆ ಏಕಕಾಲದಲ್ಲಿ ಹೋರಾಟ ಮಾಡಿದವರಾದ ಡಾ. ಹನುಮಂತರಾವ ಬಿ. ದೊಡ್ಡಮನಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಮಲ್ಲಾಬಾದ ಗ್ರಾಮದವರು. ಇವರ ತಂದೆ ಕೃಷಿಕ ದಲಿತ ಬಡತನ ಕುಟುಂಬದಿಂದ ಬಂದವರು. ಅವರು ಜಾನಪದ ವೈದ್ಯ ಪದ್ಧತಿ ಕಲಿತದ್ದರಿಂದ ಹಲವರಿಗೆ ಸಂಜೀವಿನಿಯಾದರು. ಇಂಥ ಮನೆತನದ ಭೀಮಶಾ ಮತ್ತು ಆದರ್ಶ ಗೃಹಿಣಿ ಹುಚ್ಚಮ್ಮ (ಪಾರವ್ವ) ರ ಮಗನಾಗಿ ೧ನೇ ಜೂನ್ ೧೯೫೮ ರಂದು ಏಳನೆಯವರಾಗಿ ಜನಿಸಿದರು.

ಮಲ್ಲಾಬಾದದಿಂದಲೇ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಿದ ಇವರು ಪ್ರತಿಭಾವಂತ ವಿದ್ಯಾರ್ಥಿ, ಆಗಲೇ ಜನಪದ ಹಾಡು,ಕುಣಿತಗಳಲ್ಲಿ ಪರಿಣಿತಿ ಹೊಂದಿದವರು. ವಿದ್ಯಾಭ್ಯಾಸದಲ್ಲಿ ವಿಶೇಷ ಆಸಕ್ತಿಯನ್ನು ತಂದೆಯವರು ಹೊಂದಿದಂತೆ ಹನುಮಂತರಾವರು ಸಹ ಚೂಟಿಯಾಗಿ ಅಂದೇ ಪ್ರಶ್ನಿಸುವ ಗುಣ ಬೆಳೆಸಿಕೊಂಡರು. ಶಿಕ್ಷಕರಾದ ಶ್ರೀ ಅಣ್ಣಾರಾವ ಬಸವಂತರಾವ ಮಾಲಿ ಪಾಟೀಲರು ಇವರ ಊರಿನವರೇ, ಇವರ ಮೇಲೆ ಕಾಳಜಿ ಹೊಂದಿದ್ದರಿಂದ ಏಳನೆಯ ತರಗತಿ ಬೋರ್ಡ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ೧೯೭೪ ರಲ್ಲಿ ಪಾಸಾದರು. ಎಸ್. ಎಸ್. ಎಲ್. ಸಿ. ೧೯೭೭ ರಲ್ಲಿ, ಪಿಯುಸಿ ೧೯೭೯ ರಲ್ಲಿ ಉತ್ತೀರ್ಣರಾದರು. ಎಮ್. ಎಸ್. ಆಯ್. ಪದವಿ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ.ಎ ಪದವಿಯಲ್ಲಿ ಪ್ರೊ. ವಸಂತ ಕುಷ್ಟಗಿಯವರ ಸಲಹೆಯಂತೆ ಕನ್ನಡವನ್ನು ಮೇಜರ್ ಆಗಿ ಆಯ್ಕೆ ಮಾಡಿಕೊಂಡವರು. ಮುಂದೆ ಬಿ. ಎ. ಪದವಿಯನ್ನು ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಿಂದ ತೇರ್ಗಡೆಯಾದರು. ಮುಂಬಯಿಯಲ್ಲಿ ಎರಡು ವರ್ಷಗಳ ಕಾಲ ಸ್ಟೋನ್ ಇಂಡಸ್ಟ್ರೀಜ್‌ನ ಮ್ಯಾನೇಜರ್‌ರಾಗಿ ಕರ್ತವ್ಯ ನಿರ್ವಹಿಸಿ, ನೌಕರಿಗೆ ಗುಡ್ ಬೈ ಹೇಳಿ, ಎಂ. ಎ. ಕನ್ನಡ ಮತ್ತು ಜಾನಪದ ವಿಷಯ ಆಯ್ದುಕೊಂಡು ೧೯೮೭ ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಅದೇ ವಿಶ್ವವಿದ್ಯಾಲಯದಲ್ಲಿ "ಚುಂಚೂರು ಮಾಪುರತಾಯಿ ಒಂದು ಅಧ್ಯಯನ" ಎಂಬ ಸಂಶೋಧನ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು.

ವಿದ್ಯಾರ್ಥಿ ದಿಸೆಯಿಂದಲೇ ಹೋರಾಟದಲ್ಲಿ ಪಾಲ್ಗೊಂಡವರು ದಲಿತ ಚಳುವಳಿಯಲ್ಲಿ ಡಾ. ಡಿ. ಜಿ. ಸಾಗರ, ಬಸಣ್ಣ ಸಿಂಗೆ ಅವರೊಂದಿಗೆ ಹಲವು ಹೋರಾಟದಲ್ಲಿ ಪಾಲ್ಗೊಂಡು ಹೊಡೆತ ಬಡಿತದ ಕಹಿ-ಸಿಹಿ ಅನುಭವಿಸಿದವರು. ಹಿಡಿದ ಹಠ ಬಿಡದವರು, ಅನ್ಯಾಯ ಕಂಡಲ್ಲಿ ಪ್ರತಿಭಟಿಸುವ ಗುಣ ಇವರದು. ವೃತ್ತಿಯಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ೧೨ ವರ್ಷ ಕರ್ತವ್ಯ ನಿರ್ವಹಿಸಿ ಜಿಲ್ಲಾ ಪಂಚಾಯತ ಚುನಾವಣೆಗೆ ಸ್ಪರ್ಧಿಸಿ ಸೋತರು. ನಂತರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿರಿಯ ಶ್ರೇಣಿ ಉಪನ್ಯಾಸಕರಾಗಿ ಭಾಲ್ಕಿ, ಕಲಬುರಗಿ, ಅಫಜಲಪೂರ ಆಳಂದ, ಸೇಡಂ ಮತ್ತು ಮಹಾಗಾಂವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸಿ, ಆಳಂದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಿಂದ ನಿವೃತ್ತರಾದರು. ಅವರು ಕಲಬುರಗಿಯ ಶರಣಸಿರಸಗಿ ಮಡ್ಡಿ ಡಾ. ಬಿ. ಆರ್. ಅಂಬೇಡ್ಕರ ನಗರದಲ್ಲಿ ವಿಶ್ರಾಂತ ಜೀವನದ ಬದುಕನ್ನು ಸಾರ್ಥಕ ಪಡಿಸಿಕೊಳ್ಳುತ್ತಿದ್ದಾರೆ.

       ಬಾಲ್ಯದಿಂದಲೇ ಸಾಹಿತ್ಯದ ಆಸಕ್ತಿ ಹೊಂದಿದ ಅವರು ೧೯೯೫ ರಿಂದಲೇ ಪುಸ್ತಕ ಪ್ರಕಟಣೆಗಳನ್ನು ಪ್ರಾರಂಭಿಸಿದರು. ಅಲ್ಲಿಂದ ೨೦೨೫ ರ ತನಕ ಮೂವತ್ತೈದಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಹತ್ತು ಹಸ್ತ ಪ್ರತಿಗಳ ಕೃತಿಗಳು ಪ್ರಕಟಣೆಗೆ ಸಿದ್ಧವಾಗಿರುವವು.

ಅವರ ಪ್ರಕಣೆಗಳು :

೧) ನೊಂದವರ ಹಾಡು, ೨) ನಮ್ಮ ದೇಶ ನಮ್ಮ ಜನ, ೩) ಆಕ್ರೋಶ ೪) ಮರೆಯದ ಮಾಣಿಕ್ಯ ೫) ಪಂಚಾಯತಿ ೬) ಸೊಲ್ಲೆತ್ತಿ ಹಾಡೇನ ಎಂಬ ಆರು ಕವನ ಸಂಕಲನಗಳನ್ನು ಪ್ರಕಟಿಸಿದರು. ಖಜೂರಿ ಶ್ರೀಕೋರಣೇಶ್ವರ ಕಾವ್ಯದರ್ಶನ ಮಹಾಕಾವ್ಯ ಪ್ರಕಟವಾಗಿದೆ. ಡಾ ಬಿ. ಆರ್. ಅಂಬೇಡ್ಕರ್ರ ಮಹಾಕಾವ್ಯ, ಮಹಾತ್ಮ ಗೌತಮಬುದ್ಧರ ಮಹಾಕಾವ್ಯ ಬಸವಣ್ಣನವರ ಮಹಾಕಾವ್ಯ ಮುದ್ರಣ ಹಂತದಲ್ಲಿವೆ. ಒಟ್ಟು ನಾಲ್ಕು ಮಹಾಕಾವ್ಯಗಳಿಂದ ಮಹಾಕವಿಯಾಗಿದ್ದಾರೆ. ದೇವಿಕಾರ್ಯ, ಏಡ್ಸ್‌ ಬಂತು, ಚಂಪಿಕನಸು, ಬಲಿಪಶು, ಕನಸು ನನಸಾಗಲಿಲ್ಲ. ಪರಿವ್ರಾಜಕ ಎಂಬ ಆರು ನಾಟಕಗಳನ್ನು ತುಂಬ ಅರ್ಥಪೂರ್ಣವಾಗಿ ರಚಿಸಿದ್ದಾರೆ.

ಪಂಚಮ ಆತ್ಮಕಥನ ಸಂಪುಟ ೧ : ೨. ಮತ್ತು ಶಾರಿಶಾಣ್ಯಾ ಆದಾಗ, ಬಿಸಿಲು ಬೆಳದಿಂಗಳು ಮತ್ತು ಬೆಳ್ಳಕ್ಕಿ ಹಾಡ್ಯಾವ, ಮೂರು ಕಥಾ ಸಂಕಲನಗಳು, ಸುಕ್ಷೇತ್ರ ಭತ್ತರಗಿ, ಘತ್ತರಗಿ ಭಾಗಮ್ಮ, ಜಾನಪದ ಹಬ್ಬಗಳು ಮತ್ತು ಉತ್ಸವಗಳು, ಜಾನಪದ ತೊಟ್ಟಿಲು, ಜಾನಪದ ಸಂಗಮ, ಜಾನಪದ ಜೀವನ ಮೌಲ್ಯ, ಜಾನಪದ ಜಂಗಮ, ಜಾನಪದ ಲೇಖನ ಕೃತಿಗಳು "ಚುಂಚೂರು ಮಾಪೂರತಾಯಿ: ಒಂದು ಅಧ್ಯಯನ* ಸಂಶೋಧನ ಮಹಾಪ್ರಬಂಧ, ನಮ್ಮೂರು ದೇವತೆ, ಮಹಾಪೂರತಾಯಿ ಚರಿತ್ರೆ ಸಂಶೋಧನೆಗಳಾಗಿವೆ. ಜೀವನ ಚರಿತ್ರೆ, ಕಾವ್, ಕಥೆ, ಮಹಾಕಾವ್ಯ, ಜಾನಪದ, ನಾಟಕ,ಆತ್ಮಕಥೆ, ಪ್ರಬಂಧ

ಸಂಶೋಧನೆ,ಸಂಪಾದನೆ,ಮೊದಲಾದ ಸಾಹಿತ್ಯ ಪ್ರಕಾರ ದಲ್ಲಿ ಕೃಷಿ ಮಾಡಿದ್ದಾರೆ.

        ಹೈದ್ರಾಬಾದ ಕರ್ನಾಟಕ ಸಾಹಿತ್ಯ ಮಂಟಪ, ಸಾಹಿತ್ಯ ವೇದಿಕೆ, ಶರಣ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕಗಳ ಅಧ್ಯಕ್ಷರಾಗಿ ಅನೇಕ ಕನ್ನಡ ಪರ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಸದಾ ಕ್ರಿಯಾಶೀಲ ವ್ಯಕ್ತಿ. ಹಲವು ವಿಚಾರ ಸಂಕಿರಣ, ಕವಿಗೋಷ್ಠಿ, ಅಖಿಲ ಭಾರತೀಯ ಸಮ್ಮೇಳನಗಳಲ್ಲಿ ಕವನ ವಾಚನ, ಪ್ರಬಂಧ ಮಂಡನೆ, ತಾಲೂಕು ಮತ್ತು ಜಿಲ್ಲಾ ಸಮ್ಮೇಳನಗಳಲ್ಲಿ ಆಶಯ ನುಡಿ, ಉದ್ಘಾಟನೆ, ಅಧ್ಯಕ್ಷೀಯ ನುಡಿಗಳಲ್ಲಿ ತಮ್ಮ ವಿಚಾರಗಳನ್ನು ಬೆಳಕಿಗೆ ತಂದಿದ್ದಾರೆ.

ಆಕಾಶವಾಣಿ, ದೂರದರ್ಶನ ಕಲಬುರಗಿ, ಬೆಂಗಳೂರು ಕೇಂದ್ರಗಳಲ್ಲಿ ಕಾರ್ಯಕ್ರಮ ನೀಡಿರುವರು. ಇವರ ಸಾಧನೆ ಗಮನಿಸಿ ಅಫಜಲಪೂರ ತಾಲೂಕಿನ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ಕಲಬುರಗಿ ಜಿಲ್ಲಾ ೧೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ತಾಲೂಕು, ಜಿಲ್ಲೆಯ ಜನತೆ ಗೌರವಿಸಿದ್ದಾರೆ. ಇವರಿಗೆ ತಾಲೂಕು: ಜಿಲ್ಲಾಡಳಿತದಿಂದ ರಾಜೋತ್ಸವ ಪ್ರಶಸ್ತಿ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, ಡಿ.ವಿ.ಜಿ. ಯುವರತ್ನ, ಕಾಯಕರತ್ನ, ಕವಿರತ್ನ ಪ್ರಶಸ್ತಿ, ಡಾ. ಹರಿಶ್ಚಂದ ದಿಕ್ರಂಗಿಕರ್ ಜಾನಪದ ಪ್ರಶಸ್ತಿ, ಸೂಗಯ್ಯ ಹಿರೇಮಠ ಪ್ರಶಸ್ತಿ, ಉರಿಲಿಂಗ ಪೆದ್ದಿ ಪ್ರಶಸ್ತಿ, ಮಹಾದೇವಪ್ಪ ರಾಂಪುರೆ ಪ್ರಶಸ್ತಿ, ಸೇರಿದಂತೆ "ಕರ್ನಾಟಕ ಸರಕಾರದ ೨೦೧೪ ರಲ್ಲಿ ರಾಜ್ಯದ ಉತ್ತಮ ಉಪನ್ಯಾಸಕ ಪ್ರಶಸ್ತಿ" ಕರ್ನಾಟಕ ಸರಕಾರದ ೨೦೨೪ ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ" ಶ್ರೀ ಷ. ಬ್ರ. ಮಳೇಂದ್ರ ಶಿವಾಚಾರ್ಯರು ರಾಜ್ಯ ಪ್ರಶಸ್ತಿ, ಹೀಗೆ ೪೦ ಕ್ಕೂ ಅಧಿಕ ಪ್ರಶಸ್ತಿಗಳು ಇವರಿಗೆ ಲಭಿಸಿವೆ.

ಡಾ. ಹನುಮಂತರಾವ, ಬಿ. ದೊಡ್ಡಮನಿ ಅವರು ಕವಿಯಾಗಿ, ಕಥೆಗಾರರಾಗಿ, ಕಾದಂಬರಿಕಾರರಾಗಿ, ನಾಟಕಕಾರರಾಗಿ, ಜಾನಪದ ತಜ್ಞರಾಗಿ, ಸಂಶೋಧಕರಾಗಿ, ಉತ್ತಮ ಉಪನ್ಯಾಸಕರಾಗಿ, ದಲಿತ ಚಳುವಳಿ ಹೋರಾಟದಲ್ಲಿ ಪಾಲ್ಗೊಂಡ ಹಿರಿಯ ಸಾಹಿತಿಗಳು, ಅವರು ಕಷ್ಟ ನಷ್ಟ ನೋವು ಅನುಭವಿಸಿದವರು. ತಮ್ಮ ಬದ್ಧತೆ ಸ್ವಾಭಿಮಾನ ಮಾರಿಕೊಳ್ಳದೆ ದಿಟ್ಟ, ನೇರ, ನಿಲುವಿನ ಬರೆಹಗಾರರಾಗಿರುವರು. ಸಮಾಜದಲ್ಲಿ ಎಲ್ಲರಿಗೂ ಬೇಕಾದವರಾಗಿದ್ದು ಅವರ ಜೀವನ ಸಾಧನೆ ಆದರ್ಶವಾಗಿರುವುದು, ಅವರ ನಾಡ ನುಡಿಯ ಸೇವೆಯನ್ನು ಗೌರವಿಸಲು ಅವರ ಜೀವನ ಹಾಗೂ ಸಾಧನೆ ಕುರಿತು ಅಭಿನಂದನ ಗ್ರಂಥ ಹೊರತರಲು ಅವರ ಗುರುಗಳು, ಶಿಷ್ಯರು, ಪರಿವಾರ ಬಂಧು ಬಳಗ ಹಾಗೂ ಅಭಿಮಾನಿಗಳು ನಿರ್ಧರಿಸಿದ್ದಾರೆ.ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಕರ್ನಾಟಕ ಸರಕಾರ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಅವರಿಗೆ ಸಂದಿರುವುದು ಅವರ ಸ್ವಾಭಿಮಾನ, ದಿಟ್ಟ, ನಿರಂತರ ಸಾಮಾಜಿಕ ಬದ್ಧತೆಯಿಂದ ಬದುಕಿದ ಮತ್ತು ಬದುಕುತ್ತಿರುವ ಅವರ ಮಾನವೀಯತೆ ಗುಣಕ್ಕೆ

ಮತ್ತೊಂದು ಉದಾಹರಣೆ ಬೇಕೆ ? ಅಲ್ಲದೇ ಈ‌ ಪ್ರಶಸ್ತಿ ಐವರು ಕೂಡಾ ಅಷ್ಟೇ ಸಮರ್ಥರು !.