ಕಲಬುರಗಿ ಉತ್ಸವಕ್ಕೆ, ಅಂಡಗಿ ಮನವಿ
ಕಲಬುರಗಿ ಉತ್ಸವಕ್ಕೆ, ಅಂಡಗಿ ಮನವಿ
ಕಲಬುರಗಿ: ಸರ್ಕಾರದ ಆಶ್ರಯದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಹಂಪಿ, ಕಿತ್ತೂರು, ಮೈಸೂರು ಉತ್ಸವಗಳ ಮಾದರಿಯಲ್ಲೇ ಕಲಬುರಗಿ ಜಿಲ್ಲೆಯಲ್ಲಿ ಸಹ ಭವ್ಯ ಉತ್ಸವವನ್ನು ಹಮ್ಮಿಕೊಳ್ಳಬೇಕು ಎಂದು ಟೆಂಗಳಿಯ ಅಂಡಗಿ ಪ್ರತಿಷ್ಠಾನ ಅಧ್ಯಕ್ಷರು ಹಾಗೂ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿಯವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಸಾಹಿತ್ಯ, ಸಂಸ್ಕೃತಿ ಮತ್ತು ಕಲಾವಿದರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳಲ್ಲಿ ಸಮ್ಮೇಳನ, ಕಾರ್ಯಕ್ರಮಗಳು . ಕಸಾಪ ಅಧ್ಯಕ್ಷ ನೇತೃತ್ವದಲ್ಲಿ ನಡೆಯುತ್ತಿವೆ.
ಇದಲ್ಲದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಸಹಕಾರದೊಂದಿಗೆ ಅನೇಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಈ ಎಲ್ಲರ ಸಮನ್ವಯದಿಂದ ಕಲಬುರಗಿ ಉತ್ಸವವನ್ನು ಆಯೋಜಿಸಿದರೆ ಜಿಲ್ಲೆಯ ಕಲಾ-ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ರೈತರ ಸಮಸ್ಯೆಗಳು, ಜನಸಾಮಾನ್ಯರ ಆರೋಗ್ಯ, ರಸ್ತೆ ಅಭಿವೃದ್ಧಿ ಹಾಗೂ ಸ್ಮಾರಕಗಳ ಸಂರಕ್ಷಣೆ ವಿಷಯಗಳಲ್ಲಿ ಜಿಲ್ಲಾಧಿಕಾರಿಗಳು ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದ ಅವರು, ಮುಖ್ಯಮಂತ್ರಿಗಳಿಂದ ಪ್ರಶಂಸೆ ಪಡೆದಿರುವ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಇದರ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.
ಕಳೆದ ಎರಡು ವರ್ಷಗಳ ಹಿಂದೆ ಕರ್ನಾಟಕ ಸರ್ಕಾರ ಕೆ.ಕೆ.ಆರ್.ಡಿ.ಬಿ. ವತಿಯಿಂದ ಕಲೆ, ಸಾಹಿತ್ಯ ಮತ್ತು ನಾಟಕ ಕ್ಷೇತ್ರಗಳಿಗೆ ನೀಡಿದ ಅವಕಾಶಗಳನ್ನು ಸ್ಮರಿಸಿದ ಅವರು, ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಉತ್ಸವಗಳಿಂದ ನೂರಾರು ಕಲಾವಿದರಿಗೆ ವೇದಿಕೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಗತ್‌ಪ್ರಸಿದ್ಧ ಜುಮ್ಮಾ ಮಸೀದಿ ಕೋಟೆಯಂತಹ ಐತಿಹಾಸಿಕ ಸ್ಥಳದಲ್ಲಿ ಕಲಬುರಗಿ ಉತ್ಸವವನ್ನು ಆಯೋಜಿಸುವ ಮೂಲಕ ಜಿಲ್ಲೆಯ ಖ್ಯಾತಿಯನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವುದು ಅಗತ್ಯ ಎಂದು ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
