ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಭಾವಪೂರ್ಣ ನುಡಿನಮನ
ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಭಾವಪೂರ್ಣ ನುಡಿನಮನ
ಕಲಬುರಗಿ: ಕನ್ನಡದ ಗಾನಕೋಗಿಲೆ ಶ್ರೀಮತಿ ಎಸ್. ಜಾನಕಿ ಅವರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮವನ್ನು 12-7-22ರಂದು ಸಂಜೆ 5.30ಕ್ಕೆ ನಡೆಯಿತು.
ಸಪ್ತ ನೇಕಾರ ಸಂಘದ ಉಪಾಧ್ಯಕ್ಷ ಶ್ರೀನಿವಾಸ್ ಬಲಪುರ ಅವರು ಗಾನಮಾತೆ ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಹಿರಿಯ ವಕೀಲ ಮೇಘನಾಥ ಹಿರೇಮಠ ಅವರು ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ನ್ಯಾಯವಾದಿ ವಿನೋದಕುಮಾರ ಅವರು ಶ್ರದ್ಧಾಂಜಲಿ ಸಲ್ಲಿಸಿದರು, ಶಿಕ್ಷಕರಾದ ಮನೋಹರ ಜೈನ್ ಮಲಗತ್ತಿ ಹಾಗೂ ಗುರುಮಿಠಕಲ್‌ನ ಶಿಕ್ಷಕ ಉಮಾಪತಿ ರೆಡ್ಡಿ ನುಡಿನಮನ ಸಲ್ಲಿಸಿದರು.
ಹಿರಿಯ ನಿವೃತ್ತ ಶಿಕ್ಷಕ ಮನೋಹರ ಜೈನ್ ಮಾತನಾಡಿ, “ಎಸ್. ಜಾನಕಿ ಅವರ ಆರು ದಶಕಗಳ ಸುದೀರ್ಘ ಸಂಗೀತ ಪಯಣ ಅವಿಸ್ಮರಣೀಯ. ತಮ್ಮ ಸುಮಧುರ ಕಂಠದ ಮೂಲಕ ಕೋಟ್ಯಂತರ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ” ಎಂದು ಸ್ಮರಿಸಿದರು.
ಶಿಕ್ಷಕ ಶರಣಬಸಪ್ಪ ನರೋಣಿ ಮಾತನಾಡಿ, “ಎಸ್. ಜಾನಕಿ ಅವರ ಧ್ವನಿ ಸರಸ್ವತಿ ದೇವಿಯ ಅಪೂರ್ವ ಕೊಡುಗೆ. ಸುಮಾರು 20 ಭಾಷೆಗಳಲ್ಲಿ ಹಾಡಿರುವ ಅವರ ಗೀತೆಗಳು ಜನರ ಉಸಿರಿರುವವರೆಗೂ ಜೀವಂತವಾಗಿರುತ್ತವೆ. ಹುಟ್ಟು ನಿರ್ಧರಿತ, ಸಾವು ಖಚಿತ; ಆದರೆ ಇವೆರಡರ ನಡುವೆ ಸಮಾಜಕ್ಕೆ ಸಲ್ಲಿಸಿದ ಸೇವೆಯೇ ವ್ಯಕ್ತಿಯನ್ನು ಅಮರಗೊಳಿಸುತ್ತದೆ. ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಅನುಪಮ” ಎಂದು ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಾಮೂಹಿಕ ಮೌನಾಚರಣೆ ನಡೆಸಲಾಯಿತು. ಮಾಧ್ಯಮ ಮಿತ್ರ ರಾಜು ಕೊಷ್ಠಿ ವಂದಿಸಿದರು. ಸಂಗಣ್ಣ ಚೋರಗಸ್ತಿ ಭೀಮಳ್ಳಿ, ದೇಶಟ್ಟಿ ಆಂಜನೇಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
