ಮಾದಕ ವ್ಯಸನದಿಂದ ದೂರವಿದ್ದು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ: ನ್ಯಾಯಾಧೀಶ ಶ್ರೀನಿವಾಸ ನವಲೆ
ಮಾದಕ ವ್ಯಸನದಿಂದ ದೂರವಿದ್ದು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ: ನ್ಯಾಯಾಧೀಶ ಶ್ರೀನಿವಾಸ ನವಲೆ
ಕಲಬುರಗಿ : ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನದಿಂದ ದೂರವಿದ್ದು, ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀನಿವಾಸ ನವಲೆ ಹೇಳಿದರು.
ಕರ್ನಾಟಕ ಸರ್ಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ), ಕಲಬುರಗಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ "ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನ" ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾದಕ ವಸ್ತುಗಳ ಸೇವನೆಯು ವ್ಯಕ್ತಿಯ ಆರೋಗ್ಯ, ಕುಟುಂಬ ಹಾಗೂ ಸಮಾಜದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು ದುಷ್ಟ ಚಟಗಳಿಂದ ದೂರವಿದ್ದು, ಕಾನೂನಿನ ಅರಿವಿನೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿ ಡಾ. ರವಿಕಾಂತಿ ಎಸ್. ಕ್ಯಾತನಾಳ ಅವರು, ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದ್ದು, ಸಮಸ್ಯೆಗಳನ್ನು ಮುಚ್ಚಿಡದೆ ತಜ್ಞರ ಸಲಹೆ ಪಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ. ಮಹಮ್ಮದ್ ಇರ್ಫಾನ್ ಮಹಾಗಾವಿ ಅವರು ಮಾನಸಿಕ ಆರೋಗ್ಯ, ಒತ್ತಡ ನಿರ್ವಹಣೆ, ಮಾದಕ ವ್ಯಸನದ ದುಷ್ಪರಿಣಾಮಗಳು ಹಾಗೂ ಅವುಗಳಿಂದ ಹೊರಬರುವ ಮಾರ್ಗಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಲಬುರಗಿಯ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ ವಹಿಸಿ, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಇಂತಹ ಜಾಗೃತಿ ಕಾರ್ಯಕ್ರಮಗಳು ಅತ್ಯಂತ ಅಗತ್ಯವೆಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಡಾ. ಮಲ್ಲೇಶಪ್ಪ ಕುಂಬಾರ, ಡಾ. ವಿಜಯಕುಮಾರ ಸಾಲಿಮನಿ, ಡಾ. ರಾಜಕುಮಾರ ಸಲಗರ, ಡಾ. ದೌಲಪ್ಪ ಬಿ.ಎಚ್., ಡಾ. ಟಿ.ವಿ. ಅಡಿವೇಶ, ಡಾ. ರವೀಂದ್ರಕುಮಾರ ಭಂಡಾರಿ, ಡಾ. ಶ್ರೀಮಂತ ಹೋಳ್ಕರ್, ಡಾ. ಬಲಭೀಮ ಸಾಂಗ್ಲಿ, ಡಾ. ಚಂದ್ರಕಾಂತ ಜಮಾದಾರ, ಐಕ್ಯೂಎಸಿ ಸಂಚಾಲಕರಾದ ಶ್ರೀ ಮಹೇಶ, ಶ್ರೀ ಅಜಯಸಿಂಗ್ ತಿವಾರಿ ಹಾಗೂ ಶ್ರೀಮತಿ ವಿಜಯಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಜಗದೇವಪ್ಪ, ಡಾ. ಬಸಂತ ಸಾಗರ, ಡಾ. ಮಂಜುನಾಥ ರೆಡ್ಡಿ, ಡಾ. ಮೀನಾಕ್ಷಿ ಕೆ.ಸಿ., ಡಾ. ಶೈಲಜಾ, ಡಾ. ನಾಗಪ್ಪ ಗೋಗಿ, ಡಾ. ಶಂಕರ ರಾಠೋಡ್, ಸೇರಿದಂತೆ ಅಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಡಾ. ಶಾಮಲಾ ಸ್ವಾಮಿ ಪ್ರಾರ್ಥನೆ ನೆರವೇರಿಸಿದರು. ಡಾ. ಮೀನಾಕ್ಷಿ ಕೆ.ಸಿ. ಸ್ವಾಗತಿಸಿದರು. ಡಾ. ಬಸಂತ ಸಾಗರ ವಂದಿಸಿದರು. ಡಾ. ಬಲಭೀಮ ಸಾಂಗ್ಲಿ ಕಾರ್ಯಕ್ರಮ ನಿರೂಪಿಸಿದರು.
