ಏಪ್ರಿಲ್ 20 ರಂದು ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯ ವಿಜೃಂಭಣೆಯಿಂದ ಆಚರಿಸಲು ನಿರ್ಧಾರ
ಏಪ್ರಿಲ್ 20 ರಂದು ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯ ವಿಜೃಂಭಣೆಯಿಂದ ಆಚರಿಸಲು ನಿರ್ಧಾರ
ಕಲಬುರಗಿ,ಏ.10 (ಕಲ್ಯಾಣ ಕಹಳೆ ವಾರ್ತೆ) ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಕಲಬುರಗಿ ಜಿಲ್ಲಾಯಾದ್ಯಂತ ಇದೇ ಏಪ್ರಿಲ್ 20 ರಂದು ವಿಜೃಂಭಣೆಯಿಂದ ಆಚರಿಸಲು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಯಪ್ಪ ಹುಣಸಗಿ ಅವರು, ಏಪ್ರಿಲ್ 20 ರಂದು ನಗರದ ಜಗತ್ ವೃತ್ತದಲ್ಲಿರುವ ಬಸವಣ್ಣನವರ ಪ್ರತಿಮೆಗೆ ಬೆಳಿಗ್ಗೆ 8.30 ಕ್ಕೆ ಮಾಲಾರ್ಪಣೆ ಮಾಡಿದ ನಂತರ ಅಲ್ಲಿಯೇ ವೇದಿಕೆ ಕಾರ್ಯಕ್ರಮ ನೆರವೇರಿಸಲು ಹಾಗೂ ಶಿಷ್ಠಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲಾ ಚುನಾಯಿತ ಜನಪ್ರತಿನಿಧಿಗಳನ್ನು ಆಹ್ವಾನಿಸಲು ಸಭೆ ಒಪ್ಪಿಗೆ ಸೂಚಿಸಿತ್ತು.
ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರು ಜೀವನದುದ್ದಕ್ಕೂ ಜಾತಿ ರಹಿತ ಸಮ-ಸಮಾಜ ನಿರ್ಮಾಣಕ್ಕೆ ಹೋರಾಡಿದ್ದು, ಹೀಗಾಗಿ ಅವರ ಜಯಂತಿ ಕಾರ್ಯಕ್ರಮಕ್ಕೆ ಸಮುದಾಯದವರ ಬೇಡಿಕೆಯಂತೆ ವಿಶೇಷವಾಗಿ ಎಲ್ಲಾ ಬಸವಾದಿ ಶರಣರ ಸಮುದಾಯದವರಿಗೆ ಆಹ್ವಾನಿಸಲು ನಿರ್ಧರಿಸಿದಲ್ಲದೆ ಬಸವಣ್ಣನವರ ಕುರಿತು ಮಾತನಾಡಲು ಓರ್ವ ಉಪನ್ಯಾಸಕರನ್ನು ಅಂತಿಮಗೊಳಿಸಿ ಕನ್ನಡ ಮತ್ತ ಸಂಸ್ಕೃತಿ ಇಲಾಖೆಗೆ ಹೆಸರು ನೀಡಬೇಕೆಂದು ಸಮುದಾಯದ ಮುಖಂಡರಿಗೆ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ತಿಳಿಸಿದರು.
ಬಸವ ಜಯಂತಿ ಅಂಗವಾಗಿ ವೇದಿಕೆ ಕಾರ್ಯಕ್ರಮ ನಡೆಯುವ ಬಸವೇಶ್ವರ ಪುತ್ಥಳಿ ಆವರಣ ಸ್ವಚ್ಛಗೊಳಿಸಬೇಕು. ಬಸವೇಶ್ವರ ಪುತ್ಥಳಿಗೆ ದೀಪಾಲಂಕಾರ ಮಾಡುವುದಲ್ಲದೆ ಹೂವಿನಿಂದ ಸಿಂಗರಿಸಬೇಕು. ವೇದಿಕೆ ಕಾರ್ಯಕ್ರಮಕ್ಕೆ ಗಣ್ಯರು, ಸಾರ್ವಜನಿಕರು ಭಾಗಿಯಾಗುವುದರಿಂದ ಪೊಲೀಸ್ ಭದ್ರತೆ ಒದಗಿಸಬೇಕು. ವಿದ್ಯುತ್ ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕು. ಬೇಸಿಗೆ ಕಾಲ ಇದಾಗಿದ್ದರಿಂದ ವೇದಿಕೆ ಮತ್ತು ಸಮಾಜದ ವತಿಯಿಂದ ನಡೆಯವ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ ರಾಯಪ್ಪ ಹುಣಸಗಿ ಅವರು, ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಅಂದು ಬೆಳಿಗ್ಗೆ 9 ಗಂಟೆಗೆ ಬಸವ ಜಯಂತಿ ಆಚರಿಸಲು ಮತ್ತು ಕಲಬುರಗಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಸುತ್ತೋಲೆ ಕಳುಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ಮಾತನಾಡಿ, ಬಸವೇಶ್ವರ ಪುತ್ಥಳಿ ಮತ್ತು ಸುತ್ತಮುತ್ತ ಸುಣ್ಣ-ಬಣ್ಣ, ಸಣ್ಣ ಪುಟ್ಟ ದುರಸ್ತಿ ಹಾಗೂ ವಿದ್ಯುತ್ ವ್ಯವಸ್ಥೆ ಸರಿಪಡಿಸುವ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಸಮಾಜದ ಮುಖಂಡರಿಗೆ ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ ವಿವಿಧ ಸಮುದಾಯದ ಮುಖಂಡರು ಮಾತನಾಡಿ, ಬೇಸಿಗೆ ಇರುವ ಕಾರಣ ಮೆರವಣಿಗೆ ಸಂದರ್ಭದಲ್ಲಿ ಆಂಬುಲೆನ್ಸ್ ವಾಹನ ತೈನಾತಿಸಬೇಕು. ಪಾಲಿಕೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ವಚನ ಸಾಹಿತ್ಯ ಸಂಪುಟ ಮುದ್ರಿಸಿ ಹೊರತರಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ವಚನಗಳ ಕುರಿತು ಸ್ಪರ್ಧೇ ಆಯೋಜಿಸಬೇಕೆಂದು ಇತ್ಯಾದಿ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ 893ನೇ ಬಸವ ಜಯಂತಿ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರಾದ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಆಳಂದ ಶಾಸಕ ಬಿ.ಆರ್. ಪಾಟೀಲ್, ಕಾರ್ಯಧ್ಯಕ್ಷರಾಗಿರುವ ವಿಧಾನ ಪರಿಷತ್ ಶಾಸಕ ಬಿ.ಜಿ. ಪಾಟೀಲ, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್, ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣನವರ್, ಡಿ.ಸಿ.ಪಿ ಪ್ರವೀಣ ನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ಅ. ನಾಸಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.
