ಒಳಮೀಸಲಿಗಾಗಿ ಉಗ್ರ ಹೋರಾಟಕ್ಕೆ ಸಂಕಲ್ಪ
ಒಳಮೀಸಲಿಗಾಗಿ ಉಗ್ರ ಹೋರಾಟಕ್ಕೆ ಸಂಕಲ್ಪ
ಡಾ.ಬಾಬು ಜಗಜೀವನರಾಮ್ ಜಯಂತ್ಯುತ್ಸವದಲ್ಲಿ ಸಮಾಜ ಮುಖಂಡರ ನಿರ್ಧಾರ
ಕಲಬುರಗಿ: ರಾಜ್ಯ ಸರಕಾರ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಸಂಪೂರ್ಣ ಜಾರಿಗೆ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟಕ್ಕೆಸಿದ್ದ ಎಂದು ಬಾಬು ಜಗಜೀವನರಾಮ್ ಜಯಂತಿ ಸಮಾರಂಭದಲ್ಲಿ ಮುಖಂಡರು ಒಕ್ಕೊರಲಿನಿಂದ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಡಾ.ಬಾಬು ಜಗಜೀವನರಾಮ್ ಜಿಲ್ಲಾ ಜಯಂತ್ಯುತ್ಸವ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಜಗಜೀವನರಾಮ್ ಜಯಂತ್ಯುತ್ಸವ ಪ್ರಯುಕ್ತ ಸಮತಾ ದಿವಸ ಕಾರ್ಯಕ್ರಮದಲ್ಲಿ ಎಲ್ಲ ಮುಖಂಡರು ಸರಕಾರಕ್ಕೆ ಕೊನೆಯ ಎಚ್ಚರಿಕೆ ನೀಡಿದರು.ಈಗಾಗಲೇ 35 ವರ್ಷದಿಂದ ಒಳಮೀಸಲಾತಿ ಸಂಪೂರ್ಣ ಜಾರಿಗಾಗಿ ಹೋರಾಟ ಮಾಡುತ್ತ ಬರಲಾಗಿದೆ. ಸರಕಾರ ಉದ್ದೇಶಪೂರ್ವಕವಾಗಿಯೇ ಒಳಮೀಸಲಾತಿ ಜಾರಿಗೆ ಎಳೆಂಬ ಧೋರಣೆ ಅನುಸರಿಸುತ್ತಿದೆ. ಇದು ಸಾಮಾಜಿಕ ನ್ಯಾಯದ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಉಪ ಚುನಾವಣೆ ನಂತರ ನಡೆಯುವ ವಿಶೇಷ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಸಂಪೂರ್ಣ ಜಾರಿ ಮಾಡದಿದ್ದರೆ, ಕಲಬುರಗಿಯಿಂದಲೇ 5000ಕ್ಕೂ ಅಧಿಕ ಜನರಿಂದ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಲ್ಲ ಮುಖಂಡರು ಸರಕಾರಕ್ಕೆ ತಿಳಿಸಿದರು.
ಮೈಸೂರಿನ ನ್ಯಾಯವಾದಿ ಅರುಣಕುಮಾರ ಮಾತನಾಡಿ, ಒಳ ಮೀಸಲಾತಿಗೆ ನಾವು ಒಗ್ಗಟ್ಟಿನ ಪ್ರದರ್ಶನ ತೋರಿಸಬೇಕಿದೆ.ನಾವು ಮೊದಲು ಸಂಘಟಿತರಾಗಬೇಕು. ನಮ್ಮ ಹಕ್ಕಿಗೆ ನಿರಂತರ ಹೋರಾಟ ಮುಖ್ಯ. ಒಳ ಮೀಸಲಾತಿಯಂತಹ ಹೋರಾಟಕ್ಕೆ ಅಪಾರ ಮಹಿಳೆಯರು ಭಾಗಿಯಾಗಬೇಕು. ಯಾವುದೇ ಕುತಂತ್ರಗಳಿಗೆ ನಾವು ಹೆದರಬಾರದು. ಪ್ರತಿಯೊಬ್ಬ
ತಾಯಂದಿರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದರು.
ಚಲಚಿತ್ರ ನಟ, ಹೋರಾಟಗಾರ,ಚೇತನ ಅಹಿಂಸಾ ಮಾತನಾಡಿ, ದೇಶ ಅಂದರೆ ಬರೀ ಜನವಲ್ಲ, ಗಡಿಯೂ ಅಲ್ಲ ಸರಕಾರವೂ ಅಲ್ಲ, ಅದೊಂದು ಪರಿಕಲ್ಪನೆ. ನಾವು ಯಾವ ಪರಿಕಲ್ಪನೆ ಪರವಾಗಿ ಹೋಗಬೇಕು. ಬಲಪಂಥೀಯ ಹಿಂದುತ್ವ, ಮಧ್ಯ ಪಂಥೀಯ ಮನುವಾದವಲ್ಲ, ಎಡಪಂಥೀಯ ಕಮ್ಯೂನಿಸ್ಟ್ ಕೂಡ ಅಲ್ಲ, ಅಂಬೇಡ್ಕರ್, ಪೆರಿಯಾರ್, ಕಾರಾಂ ಅವರ ಸತ್ಯ ಪಂಥದ ಸಿದ್ದಾಂತ ನಾವೆಲ್ಲ ಕಟ್ಟಬೇಕಿದೆ. ಅದು ಸಮಾನತೆ ತರಬಲ್ಲದು, ವಿಶ್ವಕ್ಕೆ ಮಾದರಿಯಾಗಬಲ್ಲದು ಎಂದರು.
ಮಾಜಿ ಸಚಿವರಾದ ಎಸ್.ಕೆ.ಕಾಂತಾ,ಮಾಲೀಕಯ್ಯ ಗುತ್ತೇದಾರ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಕೆ.ಬಿ.ವಾಸು, ನೀಲಕಂಠರಾವ ಮೂಲಗೆ, ಸುರೇಶ ಬಡಿಗೇರ, ಲಚ್ಚಪ್ಪ ಜಮಾದಾರ, ನಂದಿನಿ ಸನಬಾಳ್, ವಿನೋದ ಬಿ.ಕೆ., ಬಸವರಾಜ ಜವಳಿ, ಎ.ಎಚ್.ನಾಗೇಶ, ಆರುಂಧತಿ ನಾಗಮೂರ್ತಿ, ಹಣಮಂತ ತುಮಕೂರ, ಅಂಬಾರಾಯ ಬೆಳಕೋಟಾ, ಪ್ರದೀಪ ಭಾವೆ, ದಶರಥ ಕಲಗುರ್ತಿ, ಶ್ರೀಶೈಲ್ ಎಂ.ಜಿ., ಅನಿಲ ಬೆಳಕೇರಿ,ಅರವಿಂದ ನಾಟೀಕಾರ,ವಿಶಾಲ ನೀಲೂರಕರ್ ಸೇರಿ ಅನೇಕರು ಇದ್ದರು. ರಾಜು ಹದನೂರ ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ ನಾಲವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಭದ್ರಪ್ಪ ಅರಕೇರಿ ನಿರೂಪಿಸಿದರು.
ಚುನಾವಣೆ ನಂತರ ನಡೆಯುವ ವಿಶೇಷ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಸಂಪೂರ್ಣ ಜಾರಿ ಸರಕಾರ ಮಾಡಲೇಬೇಕು. ರಾಜ್ಯದಲ್ಲಿ ಸುಮಾರು ವರ್ಷದ ಹೋರಾಟ ಇದಾಗಿದೆ. ಬಡವರ, ದೀನ ದಲಿತರ ಪರ ಸರಕಾರ ನಿಲ್ಲಬೇಕು.
-ಜಗದ್ಗುರು ಡಾ.ಸಾರಂಗಧರ ದೇಶೀಕೇಂದ್ರ ಸ್ವಾಮೀಜಿ, ಶ್ರೀಶೈಲಂ ಸುಲಫಲ ಮಠ, ಕಲಬುರಗಿ
ಜಾತಿ, ಭಾಷೆ, ಧರ್ಮದವರು ನಮ್ಮ ಶತ್ರುಗಳಲ್ಲ.
ಅಸಮಾನತೆ ಹಾಗೂ ಅನ್ಯಾಯದಿಂದ ಕೂಡಿದ ವ್ಯವಸ್ಥೆಯೇ ನಮ್ಮ ಶತ್ರು. ಆ ಶತ್ರುವನ್ನು ಕಿತ್ತುಹಾಕಲು ರಾಜ್ಯದ ಎಲ್ಲ ಏಳು ಕೋಟಿ ಮಂದಿ ಒಗ್ಗೂಡಬೇಕಿದೆ.
-ಚೇತನ್ ಅಹಿಂಸಾ, ಚಲಚಿತ್ರ ನಟ, ಹೋರಾಟಗಾರ
ದೇಶಮಾನೆಗೆ ವಿಶೇಷ ಸನ್ಮಾನ
ಪದ್ಮಶ್ರೀ ಪುರಸ್ಕೃತ ಹಿರಿಯ ಕ್ಯಾನ್ಸರ್ ತಜ್ಞೆ ಡಾ ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ಸರಕಾರಿ ನೌಕರರ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಂದಿನಿ ಸನಬಾಳ್ ಸೇರಿ ಅನೇಕರಿಗೆ ಗೌರವ ಸತ್ಕಾರ ಹಾಗೂ ಸಾಧಕರಿಗೆ ಸಮತಾ ದಿವಸ ಪುರಸ್ಕಾರ ನೀಡಿ ಗೌರವಿಸಲಾಯಿತು.
