ಕೋಡ್ಲಿ ಸೇರಿ ವಿವಿಧ ಗ್ರಾಮಗಳಲ್ಲಿ ಅಕ್ರಮ ಸೌಳು ಗಣಿಗಾರಿಕೆ ಆರೋಪ: ಕ್ರಮಕ್ಕೆ ವಿಠ್ಠಲ್ ಕುಸಾಳೆ ಆಗ್ರಹ
ಕೋಡ್ಲಿ ಸೇರಿ ವಿವಿಧ ಗ್ರಾಮಗಳಲ್ಲಿ ಅಕ್ರಮ ಸೌಳು ಗಣಿಗಾರಿಕೆ ಆರೋಪ: ಕ್ರಮಕ್ಕೆ ವಿಠ್ಠಲ್ ಕುಸಾಳೆ ಆಗ್ರಹ
ಕಲಬುರಗಿ: ಜಿಲ್ಲೆಯ ಕಾಳಗಿ ತಾಲ್ಲೂಕಿನ ಕೋಡ್ಲಿ, ಅಲ್ಲಾಪೂರ ಹಾಗೂ ಸೂಗೂರ-ಕೆ ಗ್ರಾಮಗಳ ವಿವಿಧ ಸರ್ವೇ ನಂಬರಿನ ಜಮೀನುಗಳಲ್ಲಿ ಕಳೆದ ಹಲವು ತಿಂಗಳುಗಳಿಂದ ಅಕ್ರಮವಾಗಿ ಸೌಳು ಗಣಿಗಾರಿಕೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವೀರ ಕನ್ನಡಿಗರ ಸೇನೆ ಕಲ್ಯಾಣ ಕರ್ನಾಟಕ ವಿಭಾಗೀಯ ಘಟಕದ ಕಾರ್ಯಾಧ್ಯಕ್ಷ ವಿಠ್ಠಲ್ ಕುಸಾಳೆ ಆಗ್ರಹಿಸಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರಿಗೆ ಸಲ್ಲಿಸಿದ ದೂರಿನಲ್ಲಿ, ಕೋಡ್ಲಿ ಗ್ರಾಮದ ಪಟ್ಟಾ ಜಮೀನುಗಳಾದ ಸರ್ವೇ ನಂ.65, 90, 99 ಹಾಗೂ ಸರ್ಕಾರಿ ಜಮೀನು ಸರ್ವೇ ನಂ.88, ಅಲ್ಲಾಪೂರ ಗ್ರಾಮದ ಸರ್ವೇ ನಂ.137 ಮತ್ತು ಸೂಗೂರ-ಕೆ ಗ್ರಾಮದ ಸರ್ವೇ ನಂ.73, 74, 75 ಹಾಗೂ 107ರಲ್ಲಿ ಯಾವುದೇ ಅಧಿಕೃತ ಅನುಮತಿ ಪಡೆಯದೆ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಗುಂಡಪ್ಪ ಪೂಜಾರಿ, ಮುಸ್ತಫಾ, ನಾಗೇಶ ಗುತ್ತೇದಾರ, ಎಂ.ಜಿ. ಪಾಟೀಲ ಹಾಗೂ ಸುಲೇಮಾನ ಸೇರಿದಂತೆ ಕೆಲವರು ಹಲವು ತಿಂಗಳುಗಳಿಂದ ಅಕ್ರಮವಾಗಿ ಸೌಳು ತೆಗೆಯುವ ಕಾರ್ಯದಲ್ಲಿ ತೊಡಗಿದ್ದು, ಭಾರಿ ವಾಹನಗಳ ಮೂಲಕ ಸರಬರಾಜು ಮಾಡುತ್ತಿದ್ದಾರೆ. ಸರ್ಕಾರಕ್ಕೆ ಪಾವತಿಸಬೇಕಾದ ರಾಯಲ್ಟಿ ಹಣವನ್ನು ಪಾವತಿಸದೇ ಖಜಾನೆಗೆ ನಷ್ಟ ಉಂಟುಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಕೆಲವರು ಒಂದು ಎಕರೆ ಪ್ರದೇಶಕ್ಕೆ ಮಾತ್ರ ಅನುಮತಿ ಪಡೆದು 3ರಿಂದ 6 ಎಕರೆವರೆಗೆ ವ್ಯಾಪಕವಾಗಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಆರೋಪವೂ ಕೇಳಿಬಂದಿದೆ. ಈ ಕುರಿತು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ವಿಠ್ಠಲ್ ಕುಸಾಳೆ ದೂರಿದ್ದಾರೆ.
ವಿಶೇಷವಾಗಿ ಕೋಡ್ಲಿ ಗ್ರಾಮದ ಮೂರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದರಿಂದ ಧೂಳು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖಾ ತಂಡ ರಚಿಸಿ ಸ್ಥಳ ಪರಿಶೀಲನೆ ನಡೆಸಬೇಕು. ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಉಂಟಾದ ನಷ್ಟದ ಮೌಲ್ಯಮಾಪನ ಮಾಡಿ, ತಪ್ಪಿತಸ್ಥರಿಂದ ದಂಡ ಸಮೇತ ಹಣ ವಸೂಲಿ ಮಾಡಿ ಸರ್ಕಾರದ ಖಜಾನೆಗೆ ಜಮಾ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
