ಕೋಚಲಾಪೂರ ಪ್ರಾಥಮಿಕ ಶಾಲೆಯಲ್ಲಿ ಅಕ್ಷರಾಭ್ಯಾಸ, ಎಫ್‌ಡಿ ಬಾಂಡ್ ಹಾಗೂ ಅಭಿನಂದನಾ ಪತ್ರ ವಿತರಣೆ

ಕೋಚಲಾಪೂರ ಪ್ರಾಥಮಿಕ ಶಾಲೆಯಲ್ಲಿ  ಅಕ್ಷರಾಭ್ಯಾಸ, ಎಫ್‌ಡಿ ಬಾಂಡ್ ಹಾಗೂ ಅಭಿನಂದನಾ ಪತ್ರ ವಿತರಣೆ

ಕೋಚಲಾಪೂರ ಪ್ರಾಥಮಿಕ ಶಾಲೆಯಲ್ಲಿ ಅಕ್ಷರಾಭ್ಯಾಸ, ಎಫ್‌ಡಿ ಬಾಂಡ್ ಹಾಗೂ ಅಭಿನಂದನಾ ಪತ್ರ ವಿತರಣೆ

ನರೇಗಲ್ಲ, ಜು. 9: ಮಜರೆ ಕೋಚಲಾಪೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಅಕ್ಷರಾಭ್ಯಾಸ, ಪಾಲಕರಿಗೆ ಅಭಿನಂದನಾ ಪತ್ರ ವಿತರಣೆ, ಒಂದನೇ ತರಗತಿ ಮಕ್ಕಳಿಗೆ ₹1000 ಮೌಲ್ಯದ ಎಫ್‌ಡಿ ಬಾಂಡ್ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಗತಿ ಪತ್ರ ವಿತರಣಾ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

ಕಾರ್ಯಕ್ರಮಕ್ಕೆ ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ದಯಾನಂದ ಯಾವಗಲ್ ಚಾಲನೆ ನೀಡಿದರು. ಅವರು ಮರಳಿನ ಮೇಲೆ ಮಕ್ಕಳಿಂದ ಅಕ್ಷರ ಬರೆಯಿಸುವ ಮೂಲಕ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಕೋಚಲಾಪೂರ ಶಾಲೆಯ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಇಲ್ಲಿನ ವಿನೂತನ ಶೈಕ್ಷಣಿಕ ಆಲೋಚನೆಗಳು ರಾಜ್ಯಮಟ್ಟದವರೆಗೂ ತಲುಪಿವೆ. ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಕರು ಕೈಗೊಂಡಿರುವ ಈ ಪ್ರಯತ್ನಗಳು ಮಾದರಿಯಾಗಿದ್ದು, ಇಲಾಖೆಯಿಂದ ಅಗತ್ಯ ಪ್ರೋತ್ಸಾಹ ಹಾಗೂ ಸಹಕಾರ ನೀಡಲಾಗುವುದು” ಎಂದು ಹೇಳಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಹೈದರಾಬಾದ್‌ನಿಂದ ಆಗಮಿಸಿದ್ದ ನಿವೃತ್ತ ಪ್ರೊಫೆಸರ್ ಡಾ. ಅರವಿಂದ ಯಾದಪ್ಪನವರ್ ಮಾತನಾಡಿ, “ಈ ಶಾಲೆಯ ನೂತನ ಆಲೋಚನೆಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಕೇಳಿ ಇಲ್ಲಿಗೆ ಬಂದಿದ್ದೇನೆ. ದೂರದಿಂದ ಬಂದದ್ದು ಸಾರ್ಥಕವಾಗಿದೆ. ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಶಿಕ್ಷಕರು ಹಾಗೂ ಬೆಂಬಲ ನೀಡುತ್ತಿರುವ ಪಾಲಕರು ಅಭಿನಂದನಾರ್ಹರು” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಎಸ್. ನರೇಗಲ್, ಶಿಕ್ಷಣ ಸಂಯೋಜಕ ಮಲ್ಲನಗೌಡ ಎಸ್. ಪಾಟೀಲ, ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ ಬೇಲೇರಿ, ಗ್ರಾಮದ ಹಿರಿಯರಾದ ವಿರೂಪಾಕ್ಷಪ್ಪ ಮೇಟಿ ಹಾಗೂ ಕ.ರಾ.ಪ್ರಾ.ಶಾ.ಶಿ. ಗಜೇಂದ್ರಗಡ ತಾಲೂಕು ಘಟಕದ ಅಧ್ಯಕ್ಷ ಬಿ.ಬಿ. ಕುರಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ ಎಸ್. ಹಿರೇಮಠ ವಹಿಸಿದ್ದರು. ಪ್ರಧಾನ ಗುರುಮಾತೆ ಎಸ್.ಬಿ. ಕೊಟ್ರಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ವಿವಿಧ ಶೈಕ್ಷಣಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಹಿರಿಯ ಶಿಕ್ಷಕ ವಿ.ಎ. ಕುಂಬಾರ ಸ್ವಾಗತಿಸಿದರು. ಶಿಕ್ಷಕ ವಿಜಯಕುಮಾರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅನಿತಾ ದ್ಯಾಂಪುರ ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪಾಲಕರು, ಶಿಕ್ಷಣಾಸಕ್ತರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ