ದಾಸಿಮಯ್ಯ ಕಾ.ಸೇ.ಕೇ.| ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ಆಚರಣೆ
ದಾಸಿಮಯ್ಯ ಕಾ.ಸೇ.ಕೇ.| ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ಆಚರಣೆ
ಕಲಬುರಗಿ: ಕಲಬುರಗಿ ನಗರದ ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ ಕೇಂದ್ರದ ಕಾರ್ಯಾಲಯದಲ್ಲಿ ದಿ. 01-03-2026ರಂದು ಸಂಜೆ 8 ಗಂಟೆಗೆ ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು.
ಕಾರ್ಯಕ್ರಮದ ಆರಂಭದಲ್ಲಿ ಖ್ಯಾತ ಛಾಯಾಗ್ರಾಹಕ ರಾಜು ಕೊಷ್ಠಿ ಅವರು ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ನ್ಯಾಯವಾದಿ ಜೆ.ಎಸ್. ವಿನೋದಕುಮಾರ ಮಾತನಾಡಿ, ಪಂಚಪೀಠಗಳಲ್ಲಿ ಕೇದಾರ ಪೀಠವು ಮುಖ್ಯ ಪೀಠವಾಗಿದ್ದು, ಅದರ ಮಾರ್ಗದರ್ಶನದಲ್ಲಿ ಉಳಿದ ನಾಲ್ಕು ಪೀಠಗಳು ಚಲನೆಯ ಮೂಲಕ ಗುರುಪೀಠಗಳಾಗಿ ರೂಪುಗೊಂಡಿವೆ ಎಂದು ಹೇಳಿದರು. ಈ ಪೀಠವು ಶೈವ ಧರ್ಮದ ದೇವಸಾಲಿಗಳ ಆದ್ಯ ಪೀಠವಾಗಿದ್ದು, ಶಿವಸ್ವರೂಪಿ ಏಕೋರಾಮಾರಾಧ್ಯರ ಕೃಪೆ ನಮ್ಮೆಲ್ಲರ ಮೇಲಿರುವುದನ್ನು ಒಪ್ಪಿಕೊಳ್ಳಬೇಕು ಎಂದರು. ಕಳೆದ ಐದು ವರ್ಷಗಳಿಂದ ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ನಿರಂತರವಾಗಿ ಆಚರಿಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ತು (ಕ.ಸಾ.ಪ) ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಪ್ರೊ. ಅನಾದಿ ಚಂದ್ರಶೇಖರ ವಹಿಸಿಕೊಂಡು ಪೂಜೆ ಸಲ್ಲಿಸಿ ಮಾತನಾಡಿ, ಕಾಲವನ್ನು ಅನಾದಿ, ಆದಿ ಹಾಗೂ ಆಧುನಿಕ ಎಂಬ ಮೂರು ಹಂತಗಳಲ್ಲಿ ತಿಳಿದುಕೊಳ್ಳಬೇಕು. ಈ ಮೂರು ಕಾಲಗಳ ಅರಿವು ಮನುಷ್ಯನ ಜ್ಞಾನವೃದ್ಧಿಗೆ ಸಹಕಾರಿ ಆಗುತ್ತದೆ. ಸಮಾಜದಲ್ಲಿ ಸೌಹಾರ್ದತೆ ಬೆಳೆಸಿ, ಈ ಅಲ್ಪ ಬದುಕಿನಲ್ಲಿ ಸೇವೆ ಸಲ್ಲಿಸುವ ಮೂಲಕ ಜೀವನವನ್ನು ಸಾರ್ಥಕಗೊಳಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಜಯಂತಿ ಆಚರಣೆಗೆ ಹರ್ಷ ವ್ಯಕ್ತಪಡಿಸಿದರು. ಕೊನೆಯಲ್ಲಿ ರಾಜಗೋಪಾಲ ಭಂಡಾರಿ ವಂದಿಸಿದರು.
