ಕಮಲನಗರ ರೈತರಿಗೆ ಶೀಘ್ರ ಬೆಳೆ ವಿಮೆ ಪರಿಹಾರ ಕಲ್ಪಿಸಿ: ಶಾಸಕ ಪ್ರಭು ಚವ್ಹಾಣ
ಕಮಲನಗರ ರೈತರಿಗೆ ಶೀಘ್ರ ಬೆಳೆ ವಿಮೆ ಪರಿಹಾರ ಕಲ್ಪಿಸಿ: ಶಾಸಕ ಪ್ರಭು ಚವ್ಹಾಣ
ಕಮಲನಗರ ತಾಲ್ಲೂಕಿನ ರೈತರಿಗೆ ಬೆಳೆ ವಿಮೆ ಪರಿಹಾರ ಧನ ಇನ್ನೂ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ. ಚವ್ಹಾಣ ಅವರು ಕೃಷಿ ಇಲಾಖೆಯ ಆಯುಕ್ತರು, ನಿರ್ದೇಶಕರು ಹಾಗೂ ಬೀದರ ಜಿಲ್ಲಾ ಜಂಟಿ ನಿರ್ದೇಶಕರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
ಬೆಳೆ ವಿಮೆ ಪರಿಹಾರ ಬಿಡುಗಡೆ ವಿಳಂಬವಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಜ್ಯದ ಇತರೆ ಭಾಗಗಳ ರೈತರಿಗೆ ಪರಿಹಾರ ಧನ ಬಿಡುಗೆಯಾಗಿದೆ. ಔರಾದ (ಬಿ) ತಾಲ್ಲೂಕಿಗೆ ಬಂದರೂ ಕಮಲನಗರ ತಾಲ್ಲೂಕಿನ ರೈತರನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಯಾವುದೇ ವಿಳಂಬವಿಲ್ಲದೆ ಬೆಳೆ ವಿಮೆ ಪರಿಹಾರ ಧನ ಜಮೆಯಾಗುವಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕಳೆದ ವರ್ಷದ ಅತಿವೃಷ್ಟಿ ಮತ್ತು ಭಾರೀ ಮಳೆಯಿಂದಾಗಿ ಕಮಲನಗರ ತಾಲ್ಲೂಕಿನ ಅನೇಕ ರೈತರ ಬೆಳೆಗಳು ಹಾನಿಗೊಳಗಾಗಿ ಭಾರೀ ನಷ್ಟ ಉಂಟಾಗಿದೆ. ಬೆಳೆ ಹಾನಿಯಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸಾಲದ ಹೊರೆ, ಕುಟುಂಬ ನಿರ್ವಹಣೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ಬೆಳೆ ವಿಮೆ ಪರಿಹಾರ ಧನ ಸಿಗದ ಕಾರಣ ಮುಂಗಾರು ಹಂಗಾಮಿನ ಬಿತ್ತನೆ, ಬೀಜ, ರಸಗೊಬ್ಬರ ಹಾಗೂ ಕೃಷಿ ಕಾರ್ಮಿಕರ ವೆಚ್ಚ ಭರಿಸಲು ಸಹ ಅನೇಕ ರೈತರಿಗೆ ಸಂಕಷ್ಟಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪರಿಹಾರ ಧನ ಬಿಡುಗಡೆ ವಿಳಂಬವಾಗುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆಯ ಅಧಿಕಾರಿಗಳು, ಎಲ್ಲ ಕಡೆ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಕಮಲನಗರ ತಾಲ್ಲೂಕಿನ ಅರ್ಹ ರೈತರ ಖಾತೆಗಳಿಗೆ ಜುಲೈ ಅಂತ್ಯದೊಳಗೆ ಬೆಳೆ ವಿಮೆ ಪರಿಹಾರ ಧನ ಜಮೆಯಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಮ್ಮ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು. ಬೆಳೆ ಹಾನಿಗೊಳಗಾದ ಎಲ್ಲ ಅರ್ಹ ರೈತರಿಗೆ ಬೆಳೆ ವಿಮೆ ಪರಿಹಾರ ಧನ ತಲುಪಬೇಕು. ಜುಲೈ ಅಂತ್ಯದೊಳಗೆ ಹಣ ಜಮೆಯಾಗದಿದ್ದರೆ ವಿಷಯವನ್ನು ಮತ್ತೊಮ್ಮೆ ಸರ್ಕಾರ ಮತ್ತು ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.
