ತಾಯಿಯ ಋಣ ತೀರಿಸಲಾಗದು: ಅವ್ವ ಪ್ರಶಸ್ತಿ ಸ್ವೀಕರಿಸಿದ ಡಾ. ದಾಕ್ಷಾಯಿಣಿ ಅಪ್ಪ ಅಭಿಪ್ರಾಯ
ತಾಯಿಯ ಋಣ ತೀರಿಸಲಾಗದು: ಅವ್ವ ಪ್ರಶಸ್ತಿ ಸ್ವೀಕರಿಸಿದ ಡಾ. ದಾಕ್ಷಾಯಿಣಿ ಅಪ್ಪ ಅಭಿಪ್ರಾಯ
ಬಸವಕಲ್ಯಾಣ, ಫೆ. 18: ಮಕ್ಕಳ ಬೆಳವಣಿಗೆಯಲ್ಲಿ ತಾಯಿ ಪಾತ್ರ ಅತ್ಯಂತ ಮಹತ್ವದ್ದು. ಮಕ್ಕಳು ಎಷ್ಟೇ ಸಾಧನೆ ಮಾಡಿದರೂ ತಾಯಿಯ ಋಣವನ್ನು ಜೀವನದಲ್ಲಿ ತೀರಿಸಲು ಸಾಧ್ಯವಿಲ್ಲ ಎಂದು ಡಾ. ದಾಕ್ಷಾಯಿಣಿ ಅಪ್ಪ ಹೇಳಿದರು.
ಹಾರಕೂಡ ಸಂಸ್ಥಾನ ಹಿರೇಮಠದ ಸಭಾಂಗಣದಲ್ಲಿ ಕಮಲಾಪುರ ತಾಲೂಕಿನ ಡೊಂಗರಗಾಂವ ಗ್ರಾಮದ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ವತಿಯಿಂದ ಸೋಮವಾರ ಆಯೋಜಿಸಲಾದ ‘ಅವ್ವ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
“ದೇವರು ಎಲ್ಲೆಡೆ ಇರಲು ಸಾಧ್ಯವಾಗದೆ ತಾಯಿಯನ್ನು ಸೃಷ್ಟಿಸಿದ್ದಾನೆ ಎನ್ನುವುದು ಜನಪ್ರಿಯ ನಂಬಿಕೆ. ಆದರೆ ಇಂದಿನ ಸಮಾಜದಲ್ಲಿ ಅನೇಕ ಮಕ್ಕಳು ವೃದ್ಧಾಪ್ಯದಲ್ಲಿ ತಾಯಿ ಸೇವೆಯನ್ನು ನಿರ್ಲಕ್ಷಿಸುವುದು ದುಃಖಕರ. ಇದರಿಂದಲೇ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ” ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಶರಣಬಸವೇಶ್ವರ ಸಂಸ್ಥಾನದಿಂದ ಈ ವರ್ಷ 300 ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಐದು ಕೋಟಿ ರೂಪಾಯಿ ಶಿಷ್ಯವೇತನ ನೀಡಲಾಗುತ್ತಿದೆ ಎಂದು ತಿಳಿಸಿದ ಅವರು, ಹಾರಕೂಡ ಶ್ರೀಮಠದಲ್ಲಿ ತಮಗೂ ಹಾಗೂ ಪೀಠಾಧಿಪತಿಗಳಾದ ಡಾ. ಚನ್ನವೀರ ಶಿವಾಚಾರ್ಯರು ಅವರಿಗೆ ಡಾ. ಗುರುಪಾದಲಿಂಗ ಶಿವಯೋಗಿಗಳು ಅವರಿಂದ ‘ಅವ್ವ’ ಪ್ರಶಸ್ತಿ ಲಭಿಸಿರುವುದು ಸಂತಸದ ಸಂಗತಿ ಎಂದರು. ಇಂತಹ ಸಾರ್ಥಕ ಕಾರ್ಯಗಳನ್ನು ಕೈಗೊಂಡಿರುವ ಡಾ ಶರಣಬಸಪ್ಪ ವಡ್ಡನಕೇರಿ ಅಭಿನಂದನಾರ್ಹರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಪ್ಪಾರಾವ ಅಕ್ಕೋಣೆ ಮಾತನಾಡಿ, “ಮಹಿಳೆ ಪ್ರಕೃತಿ, ತಾಯಿ ಸಂಸ್ಕೃತಿ. ಮಮತೆಯ ಮಡದಿಯಾಗಿ, ವಾತ್ಸಲ್ಯದ ತಾಯಿಯಾಗಿ ಸಮಾಜಕ್ಕೆ ಮೌಲ್ಯಯುತ ಕೊಡುಗೆ ನೀಡುವಳು. ತಾಯಿ ಆಶೀರ್ವಾದವಿದ್ದರೆ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬಹುದು” ಎಂದು ಹೇಳಿದರು. ತಾಯಿ ಪ್ರೇರಣೆಯಿಂದ ನೀಡುವ ‘ಅವ್ವ’ ಪ್ರಶಸ್ತಿ ಎಲ್ಲರಿಗೂ ಸ್ಫೂರ್ತಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸ್ಥಳೀಯ ಪ್ರತಿಭಾವಂತ ಸಾಧಕರ ಶ್ರಮಕ್ಕೆ ತಕ್ಕ ಗೌರವ ಸಿಗಬೇಕು. ಲಾಬಿಯಿಂದ ಪಡೆಯುವ ಸರಕಾರಿ ಪ್ರಶಸ್ತಿಗಳಿಗಿಂತ ಸಮಾಜದಿಂದ ದೊರಕುವ ಗೌರವವೇ ಶ್ರೇಷ್ಠ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಬಸವಕಲ್ಯಾಣದ ಶಾಸಕರಾದ ಶರಣು ಸಲಗರ ಉದ್ಘಾಟಿಸಿದರು. ಸಿದ್ದಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಪ್ರಕಾಶಕರಾದ ಡಾ. ಬಸವರಾಜ ಕೊನೆಕ್ ಅವರು ಡಾ. ಶರಣಬಸಪ್ಪ ವಡ್ಡನಕೇರಿ ರಚಿಸಿದ *ಕನಸಿನ ಕರ್ನಾಟಕ*, *ಶಿಕ್ಷಕ ವೃತ್ತಿಯ ಪಾವಿತ್ರ್ಯತೆ* ಹಾಗೂ ಶರಣರು ಕಟ್ಟ ಬಯಸಿದ ಸಮಾಜ ಕೃತಿಗಳನ್ನು ಬಿಡುಗಡೆಗೊಳಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ. ಶರಣಬಸಪ್ಪ ವಡ್ಡನಕೇರಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಮೇಘರಾಜ ಕುಡಿ, ಅಲ್ಲಂಪ್ರಭು ದೇಶಮುಖ, ಡಾ. ನಾಗಪ್ಪ ಗೋಗಿ, ಬಸವರಾಜ ಐನೋಳಿ, ಶಿವರಾಜ ಕಾಳಗಿ, ಡಾ. ಗವಿಸಿದ್ದಪ್ಪ ಪಾಟೀಲ, ಅಂಬಾರಾವ ವಡ್ಡನಕೇರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ತೀಕ ಸ್ವಾಮಿ ಮತ್ತು ಶರಣಪ್ಪ ಸುಂಟನ ಸಂಗೀತ ಸೇವೆಗೈದರು.
ಹಾರಕೂಡದ ಪೂಜ್ಯರಾದ ಡಾ. ಚನ್ನವೀರ ಶಿವಾಚಾರ್ಯರು, ಮಾತೋಶ್ರೀ ಡಾ. ದಾಕ್ಷಾಯಿಣಿ ಅಪ್ಪ, ವಿ.ಜಿ. ಪೂಜಾರ, ಶಿವಕುಮಾರ ಪಸಾರ, ಶರಣಮ್ಮ ಪಾಟೀಲ ಹಾಗೂ ಗೊರೂರು ಪಂಕಜಾ ಅವರಿಗೆ ‘ಅವ್ವ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
