ಕುಂಚದ ಕಲೆಗೆ ಮನಸೋತ ಖ್ಯಾತ ನಿರೂಪಕ ಅಕುಲ್ ಬಾಲಾಜಿ : ಸದ್ದಿಲ್ಲದೆ ಮಿಂಚಿದ ರಾಯಚೂರಿನ ಚಿತ್ರ ಕಲಾವಿದ ಯೇಸುರಾಜ್.

ಕುಂಚದ ಕಲೆಗೆ ಮನಸೋತ ಖ್ಯಾತ ನಿರೂಪಕ ಅಕುಲ್ ಬಾಲಾಜಿ : ಸದ್ದಿಲ್ಲದೆ ಮಿಂಚಿದ ರಾಯಚೂರಿನ ಚಿತ್ರ ಕಲಾವಿದ ಯೇಸುರಾಜ್.

ಕುಂಚದ ಕಲೆಗೆ ಮನಸೋತ ಖ್ಯಾತ ನಿರೂಪಕ ಅಕುಲ್ ಬಾಲಾಜಿ : ಸದ್ದಿಲ್ಲದೆ ಮಿಂಚಿದ ರಾಯಚೂರಿನ ಚಿತ್ರ ಕಲಾವಿದ ಯೇಸುರಾಜ್.

ರಾಯಚೂರು ಜಿಲ್ಲೆಯ ಕರ್ನಾಟಕ ಮತ್ತು ತೆಲಂಗಾಣ ಗಡಿಭಾಗದ 'ಸಿಂಗನೋಡಿ' ಎಂಬ ಪುಟ್ಟ ಗ್ರಾಮದ ಪ್ರತಿಭೆ ಯೇಸುರಾಜ್. ತಂದೆ ಗುಡ್ಡಿ ನರಸಪ್ಪ ಹಾಗೂ ತಾಯಿ ಶಕುಂತಲಮ್ಮ ಅವರ ಎಂಟನೇ ಮಗನಾಗಿ ಜನಿಸಿದ ಇವರು, ಇಂದು ಚಿತ್ರಕಲೆಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿಯ ಪ್ರಸಿದ್ಧ 'ಸೊಲಬಕ್ಕನವರ ಶಿಲ್ಪಕಲಾ ಕುಟೀರ'ದಲ್ಲಿ ಪ್ರತಿಮೆಗಳಿಗೆ ಬಣ್ಣ ಲೇಪಿಸುವ ಕಾಯಕದಲ್ಲಿ ತೊಡಗಿಸಿಕೊಂಡು, ಕಳೆದ ಐದು ವರ್ಷಗಳಿಂದ ಅಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

                  ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶೌರ್ಯ ಭೂಮಿ'ಗೆ ಪಾದಾರ್ಪಣೆ ಮಾಡಿದರೆ ಸಾಕು, ಅಲ್ಲಿನ ಪ್ರತಿಮೆಗಳು ಇತಿಹಾಸವನ್ನು ಕಣ್ಣಮುಂದೆ ತರುತ್ತವೆ. ಬ್ರಿಟಿಷರ ವಿರುದ್ಧ ಸಂಗೊಳ್ಳಿ ರಾಯಣ್ಣ ಯುದ್ಧ ಸಾರಿದ ಸನ್ನಿವೇಶಗಳನ್ನು ಅತ್ಯಂತ ಸೂಕ್ಷ್ಮವಾಗಿ ಕೆತ್ತನೆ ಮಾಡಿ, ಅವುಗಳಿಗೆ ಜೀವಕಳೆ ತುಂಬುವಂತೆ ಬಣ್ಣ ಲೇಪಿಸುವಲ್ಲಿ ಯೇಸುರಾಜ್ ಅವರ ಪಾತ್ರ ಶ್ಲಾಘನೀಯವಾಗಿದೆ. ಅಲ್ಲಿನ ಕಲಾಕೃತಿಗಳನ್ನು ನೋಡಲು ಎರಡು ಕಣ್ಣುಗಳು ಸಾಲವು.

               ಇದೇ ಶೌರ್ಯ ಭೂಮಿಯಲ್ಲಿ 'ಜೀ ಕನ್ನಡ' ವಾಹಿನಿಯ 'ಹಳ್ಳಿ ಪವರ್' ಕಾರ್ಯಕ್ರಮದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಯೇಸುರಾಜ್ ಅವರ ಬದುಕಿಗೊಂದು ಮಹತ್ವದ ತಿರುವು ಸಿಕ್ಕಿತು. ಖ್ಯಾತ ನಿರೂಪಕ ಅಕುಲ್ ಬಾಲಾಜಿ ಈ ಕಾರ್ಯಕ್ರಮದ ಸಾರಥ್ಯ ವಹಿಸಿದ್ದರು. ಕಾಕತಾಳೀಯವೆಂಬಂತೆ ಆತ್ಮೀಯ ಗಂಗಾಧರ್ ಅವರ ಮೂಲಕ ಯೇಸುರಾಜ್ ಅವರಿಗೆ ಅಕುಲ್ ಬಾಲಾಜಿ ಅವರನ್ನು ಭೇಟಿಯಾಗುವ ಅವಕಾಶ ಒದಗಿ ಬಂದಿತು. ಈ ಸಂದರ್ಭದಲ್ಲಿ ಯೇಸುರಾಜ್ ಅವರು ತಾವು ಬಿಡಿಸಿದ ಅಕುಲ್ ಬಾಲಾಜಿಯವರ ಚಿತ್ರಪಟವನ್ನು ಅವರಿಗೆ ಕಾಣಿಕೆಯಾಗಿ ನೀಡಿದರು. ಇದನ್ನು ಕಂಡು ಸಂಭ್ರಮಿಸಿದ ಅಕುಲ್ ಬಾಲಾಜಿ ಅವರು, ಕಲಾವಿದನ ಕೈಚಳಕಕ್ಕೆ ಮನಸೋತು ಮತ್ತೊಂದು ಅವಕಾಶ ನೀಡಿದರು.

              'ಹಳ್ಳಿ ಪವರ್' ಕಾರ್ಯಕ್ರಮದಲ್ಲಿ ಮಹಾರಾಣಿ ಪಟ್ಟ ಅಲಂಕರಿಸಿದ್ದ 'ರಗಡ ರಶ್ಮಿ' ಅವರ ಭಾವಚಿತ್ರವನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಅಕುಲ್ ಬಾಲಾಜಿ ಅವರು ಯೇಸುರಾಜ್ ಅವರಿಗೆ ನೀಡಿದರು. ಬಂದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಇವರು, ಕೇವಲ ಒಂದೆರಡು ಗಂಟೆಗಳಲ್ಲಿ ಅದ್ಭುತ ಚಿತ್ರಪಟ ಸಿದ್ಧಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇದು ಅವರ ವೃತ್ತಿ ನಿಷ್ಠತೆ ಮತ್ತು ನೈಪುಣ್ಯತೆಗೆ ಸಾಕ್ಷಿಯಾಯಿತು.

              ನಂತರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದ 'ಹಳ್ಳಿ ಪವರ್' ಅಂತಿಮ ಹಂತದ ಸಂಭ್ರಮಾಚರಣೆಯಲ್ಲಿ ಚಿತ್ರ ಕಲಾವಿದ ಯೇಸುರಾಜ್ ಅವರು ತಮ್ಮ ಅಭಿಮಾನದ ಉತ್ತುಂಗವನ್ನು ಪ್ರದರ್ಶಿಸಿದರು. 5.5 ಅಡಿ ಉದ್ದ ಹಾಗೂ 3 ಅಡಿ ಅಗಲದ ಬೃಹತ್ ಕ್ಯಾನ್ವಾಸ್ ಮೇಲೆ, ಮೇಲ್ಭಾಗದಲ್ಲಿ ಸಂಗೊಳ್ಳಿ ರಾಯಣ್ಣ ಹಾಗೂ ಕೆಳಭಾಗದಲ್ಲಿ ಅಕುಲ್ ಬಾಲಾಜಿಯವರ ಚಿತ್ರವನ್ನು ಬಿಡಿಸಿ ಎಲ್ಲರೂ ಬೆರಗಾಗುವಂತೆ ಮಾಡಿದರು. ಆ ಚಿತ್ರವನ್ನು ನೋಡಿದ ಅಕುಲ್ ಬಾಲಾಜಿಯವರು, "ಇದು ನನ್ನ ಜೀವಮಾನದ ಸಾಧನೆಗಿಂತಲೂ ದೊಡ್ಡ ಬಹುಮಾನ" ಎಂದು ಭಾವುಕರಾಗಿ ನುಡಿದರು. ಅಷ್ಟೇ ಅಲ್ಲದೆ, ಕಲಾವಿದ ಯೇಸುರಾಜ್ ಅವರನ್ನು ಆಲಿಂಗಿಸಿಕೊಂಡು ತಮ್ಮ ಮನದಾಳದ ಸಂತೋಷವನ್ನು ವ್ಯಕ್ತಪಡಿಸಿದರು.

ಕುಗ್ರಾಮದಿಂದ ಬಂದು ಕಲಾಜಗತ್ತಿನಲ್ಲಿ ಮಿಂಚುತ್ತಿರುವ ಯೇಸುರಾಜ್ ಅವರ ಸಾಧನೆ ಜಿಲ್ಲೆಗೆ ಮಾತ್ರವಲ್ಲದೆ ಇಡೀ ನಾಡಿಗೆ ಹೆಮ್ಮೆ ತರುವಂತದ್ದು.

ಶಂಕುಸುತ ಮಹಾದೇವ ಕವಿಗಳು 

ಶ್ರೀ ಚೈತನ್ಯ ಟೆಕ್ನೋ ಶಾಲೆ, ರಾಯಚೂರು.

ವರದಿ: ಸತೀಶ ಕೆಮಶೆಟ್ಟಿ.