ಕಲಬುರಗಿಯಲ್ಲಿ ವಿಐಪಿ ಪಕ್ಷದ ಶಕ್ತಿ ಪ್ರದರ್ಶನ

ಕಲಬುರಗಿಯಲ್ಲಿ ವಿಐಪಿ ಪಕ್ಷದ ಶಕ್ತಿ ಪ್ರದರ್ಶನ

ಕಲಬುರಗಿಯಲ್ಲಿ ವಿಐಪಿ ಪಕ್ಷದ ಶಕ್ತಿ ಪ್ರದರ್ಶನ

ಅತಿಹಿಂದುಳಿದ ಸಮುದಾಯಗಳ ಏಳಿಗೆಗೆ ಮಠಾಧೀಶರು, ಮುಖಂಡರ ಬೆಂಬಲ

ಕಲಬುರಗಿ: ಪಂಚ ರಾಜ್ಯಗಳ ಚುನಾವಣೆಯ ಬಳಿಕ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ರಾಷ್ಟ್ರೀಯ ಪಕ್ಷ ತನ್ನ ಅಸ್ತಿತ್ವ ಬಲಪಡಿಸಲು ಮುಂದಾಗಿದ್ದು, ರಾಷ್ಟ್ರೀಯ ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಕರ್ನಾಟಕದಲ್ಲಿ ಸಂಘಟನೆ ವಿಸ್ತರಣೆಗೆ ಚಾಲನೆ ನೀಡಿದೆ. ನಗರದ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ವಿವಿಧ ಮಠಾಧೀಶರು, ಹಿಂದುಳಿದ ಸಮುದಾಯಗಳ ಮುಖಂಡರು ಹಾಗೂ ಪ್ರತಿನಿಧಿಗಳು ಭಾಗವಹಿಸಿ ಪಕ್ಷಕ್ಕೆ ಬೆಂಬಲ ಸೂಚಿಸಿದರು.

ರಾಷ್ಟ್ರೀಯ ಕೋಲಿ, ಬೆಸ್ತ, ನಿಶಾದ್ ಹಾಗೂ ಹಿಂದುಳಿದ ವರ್ಗಗಳ ಮಠಾಧೀಶರ ಮಹಾಸಭಾ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು, ರಾಜ್ಯದಲ್ಲಿ ಅತಿಹಿಂದುಳಿದ ಸಮುದಾಯಗಳಿಗೆ ಸಮರ್ಪಕ ರಾಜಕೀಯ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ವಿಐಪಿ ಪಕ್ಷವು ಹಿಂದುಳಿದ ವರ್ಗಗಳ ಧ್ವನಿಯಾಗಿ ಕೆಲಸ ಮಾಡಬೇಕೆಂದು ಅಭಿಪ್ರಾಯಪಟ್ಟರು.

ವಿಐಪಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಕೆ. ಮೋಹನಕುಮಾರ್ ಮಾತನಾಡಿ, ಪಕ್ಷವು ರಾಷ್ಟ್ರೀಯ ಅಧ್ಯಕ್ಷ ಮುಖೇಶ್ ಸುಹಾನಿ ಅವರ ನೇತೃತ್ವದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಜನಸಾಮಾನ್ಯರ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಕರ್ನಾಟಕದಲ್ಲಿಯೂ ಪಕ್ಷ ಸಂಘಟನೆಗೆ ಹೈಕಮಾಂಡ್ ವಿಶೇಷ ಆದ್ಯತೆ ನೀಡಿದ್ದು, ಹಿಂದುಳಿದ ಸಮುದಾಯಗಳ ರಾಜಕೀಯ ಶಕ್ತಿಕರಣವೇ ಪಕ್ಷದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕೋಲಿ, ಬೆಸ್ತ, ನಿಶಾದ್ ಸೇರಿದಂತೆ ಅನೇಕ ಸಮುದಾಯಗಳಿಗೆ ರಾಜಕೀಯ ಅವಕಾಶಗಳು ಕಡಿಮೆಯಾಗಿವೆ. ಅವರ ಹಕ್ಕು, ಪ್ರಾತಿನಿಧ್ಯ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ವಿಐಪಿ ಪಕ್ಷ ಹೋರಾಟ ನಡೆಸಲಿದೆ ಎಂದು ತಿಳಿಸಿದರು. ಪ್ರಾದೇಶಿಕ ಪಕ್ಷಗಳ ಅಗತ್ಯ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅವಕಾಶ ವಂಚಿತ ಸಮುದಾಯಗಳ ಸೇವೆಗೆ ಪಕ್ಷ ಬದ್ಧವಾಗಿದೆ ಎಂದು ಹೇಳಿದರು.

ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಂಡಿರುವ ವಿಐಪಿ ನಾಯಕರು, ಕಲಬುರಗಿಯಲ್ಲಿ ಸಭೆ ನಡೆಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ನಡೆಸಿ ಪಕ್ಷ ಸಂಘಟನೆ ಬಲಪಡಿಸಿ, ಮುಂಬರುವ ವಿಧಾನಸಭೆ ಚುನಾವಣೆಗೆ ಸಜ್ಜಾಗುವ ಗುರಿ ಹೊಂದಿದ್ದಾರೆ.

ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ರಾಜು ಗುರುಸ್ವಾಮಿ, ಶ್ರೀ ಸಂಗನಬಸವ ಮಹಾಸ್ವಾಮಿ, ಚಿದಾನಂದ ಮಹಾಸ್ವಾಮಿ, ರವಿಶಂಕರ್ ಮಹಾಸ್ವಾಮಿ, ಶ್ರೀ ಅಭಿನವ ಅಂಬಿಗರ ಚೌಡಯ್ಯ ಮೂಲಗದ್ದುಗೆ ಸ್ವಾಮಿ ಸೇರಿದಂತೆ ಜಿಲ್ಲೆಯ ಅನೇಕ ಹಿಂದುಳಿದ ಸಮುದಾಯಗಳ ಸ್ವಾಮೀಜಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.