ಅಮರ್ಜಾ ಅಣೆಕಟ್ಟಿನಿಂದ ಕೆಳಗಡೆ ನಾಲಾಕ್ಕೆ ನೀರು ಬಿಡಲು ನವ ಕರ್ನಾಟಕ ರೈತ ಸಂಘದಿಂದ ಪ್ರತಿಭಟನೆ
ಅಮರ್ಜಾ ಅಣೆಕಟ್ಟಿನಿಂದ ಕೆಳಗಡೆ ನಾಲಾಕ್ಕೆ ನೀರು ಬಿಡಲು ನವ ಕರ್ನಾಟಕ ರೈತ ಸಂಘದಿಂದ ಪ್ರತಿಭಟನೆ
ಕಲಬುರಗಿ: ಅಮರ್ಜಾ ಅಣೆಕಟ್ಟಿನಿಂದ ಕೆಳಗಡೆ ನಾಲಾಕ್ಕೆ ನೀರು ಬಿಡುವಂತೆ ಒತ್ತಾಯಿಸಿ ನವ ಕರ್ನಾಟಕ ರೈತ ಸಂಘ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.
ಸಂಘದ ಅಧ್ಯಕ್ಷ ದಯಾನಂದ ಪಾಟೀಲ್ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯಲ್ಲಿ, ಅಮರ್ಜಾ ಅಣೆಕಟ್ಟಿನ ಕೆಳಭಾಗದ ಕೊರಳ್ಳಿ, ಭೂಸುನೂರು, ನಿಂಬರ್ಗಾ, ದೇವಂತಿಗೆ, ದಂಗಾಪುರ, ಜವಳಿ(ಡಿ), ಬಟರಗಾ, ಹಿತ್ತಲ ಶಿರೂರು ಹಾಗೂ ಕುಡಿಕಿ ಗ್ರಾಮಗಳಲ್ಲಿ ದನಕರು ಮತ್ತು ಕುರಿಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದೆ ಎಂದು ತಿಳಿಸಲಾಗಿದೆ.
ಪ್ರಸ್ತುತ ಕೆನಾಲಿಗೆ ನೀರು ಬಿಡಲಾಗುತ್ತಿದ್ದು, ದನಕರು ಮತ್ತು ಕುರಿಗಳು ಕೆನಾಲಿಗೆ ಇಳಿದು ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೆನಾಲಿಗೆ ನೀರು ಬಿಡುವುದನ್ನು ನಿಲ್ಲಿಸಿ, ಕೆಳಗಡೆ ನಾಲಾಕ್ಕೆ ನೀರು ಹರಿಸಿದರೆ ಪಶುಗಳಿಗೆ ಕುಡಿಯುವ ನೀರು ಲಭ್ಯವಾಗುವುದರ ಜೊತೆಗೆ ಕೆಳಭಾಗದ ರೈತರ ಬೋರ್‌ವೆಲ್ ಹಾಗೂ ಬಾವಿಗಳಿಗೆ ಸಹ ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಸ್ಥಳೀಯ ಶಾಸಕರಾದ ಬಿ.ಆರ್. ಪಾಟೀಲ್, ಎಂ.ವೈ. ಪಾಟೀಲ್, ಕೃಷಿಕ ಸಮಾಜದ ಅಧ್ಯಕ್ಷ ಡಾ. ಸಿದ್ದರಾಮಪ್ಪಾ ಪಾಟೀಲ್, ತಾಲೂಕು ಅಧ್ಯಕ್ಷ ಗುರುಗೌಡ ಪಾಟೀಲ್, ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಗುರಗೌಡ ಪಾಟೀಲ್ ಹಾಗೂ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ್ ಬಿ. ಶೇಗಜಿ ಅವರುಗಳೂ ಸಹ ಬೆಂಬಲ ವ್ಯಕ್ತಪಡಿಸಿ ಪತ್ರ ಬರೆದಿರುವುದಾಗಿ ತಿಳಿಸಲಾಗಿದೆ.
ರೈತರ ಹಾಗೂ ಪಶುಗಳ ಹಿತದೃಷ್ಟಿಯಿಂದ ತಕ್ಷಣವೇ ಕೆಳಗಡೆ ನಾಲಾಕ್ಕೆ ನೀರು ಬಿಡುವಂತೆ ಪ್ರಾದೇಶಿಕ ಆಯುಕ್ತರಿಗೆ ರೈತ ಸಂಘ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಲಕ್ಷ್ಮಿಪುತ್ರ ಶೇಗಜಿ, ಸಂಜಯ ಆರ್.ಕೆ, ಪಂಡಿತ ಪೂಜಾರಿ, ಶಿವಾಜಿ, ಭೀಮಶಾ, ದುರ್ಗಪ್ಪಾ, ಪ್ರಕಾಶ ಸುತಾರ, ಮಂಜುನಾಥ ಧುತ್ತರಗಾಂವ, ಶ್ರೀಮಂತರಾವ ಪಾಟೀಲ ಸೇರಿದಂತೆ ಇತರರು ಇದ್ದರು.
