ಕೆಕೆಆರ್ಟಿಸಿ ಬಸ್'ನ ಚಾಲಕ–ಕಂಡಕ್ಟರ್ ಮೇಲೆ ಹಲ್ಲೆ, ಚಿಂಚೋಳಿ ಪೊಲೀಸ್ ಸ್ಟೇಷನ್'ನಲ್ಲಿ ಪ್ರಕರಣ ದಾಖಲು

ಕೆಕೆಆರ್ಟಿಸಿ ಬಸ್'ನ ಚಾಲಕ–ಕಂಡಕ್ಟರ್ ಮೇಲೆ ಹಲ್ಲೆ,

ಚಿಂಚೋಳಿ ಪೊಲೀಸ್ ಸ್ಟೇಷನ್'ನಲ್ಲಿ ಪ್ರಕರಣ ದಾಖಲು 

ಚಿಂಚೋಳಿ, ಫೆ.13: ಪಟ್ಟಣದ ಡಿಪೋಗೆ ಸೇರಿದ ಕೆಎ–32–1971 ಸಂಖ್ಯೆಯ ಕೆಕೆಆರ್ಟಿಸಿ ಬಸ್‌ನ್ನು ಖಾಸಗಿ ಕಾರಿನ ವ್ಯಕ್ತಿ ಅಡ್ಡಗಟ್ಟಿ, ಚಾಲಕ ಹಾಗೂ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ಚಿಂಚೋಳಿಯಲ್ಲಿ ನಡೆದಿದೆ.

ಚಿಂಚೋಳಿ ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಹೊತ್ತಿಕೊಂಡು ಚಂದನಕೇರಾ ಮಾರ್ಗವಾಗಿ ಕಲಬುರಗಿಗೆ ಹೊರಟಿದ್ದ ಬಸ್‌ಗೆ ಕನಕಪೂರ ಗ್ರಾಮದ ದಿಕ್ಕಿನಿಂದ ಬಂದ ಖಾಸಗಿ ಕಾರು ಸೈಡ್ ಹೊಡೆದು ಮುಂದೆ ಸಾಗಿದುದಾಗಿ ತಿಳಿದುಬಂದಿದೆ. ಬಳಿಕ ಕಾರು ಹಿಂದಿರುಗಿ ಗಾರಂಪಳ್ಳಿ–ಹುಡದಳ್ಳಿ ಮಧ್ಯ ಬಸ್‌ನ್ನು ತಡೆದು ಅಡ್ಡಗಟ್ಟಿ, ಚಾಲಕ ಮತ್ತು ಕಂಡಕ್ಟರ್‌ ಜೊತೆ ಗಲಾಟೆ ನಡೆಸಿದರೆಂದು ಚಾಲಕ ಆರೋಪಿಸಿದ್ದಾರೆ.

ಕಾರ್ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಸ್ ಚಾಲಕನಿಗೆ ಕಪಾಳಕ್ಕೆ ಹೊಡೆದು ಗಾಯಗೊಳಿಸಿದ್ದಾನೆ ಎಂದು ವಿಡಿಯೋ ಹೇಳಿಕೆ ನೀಡಿದ್ದಾರೆ. ರಭಸದ ಎಟೀನಿಂದ ಗಾಯಗೊಂಡ ಚಾಲಕನನ್ನು ತಕ್ಷಣ ಚಿಂಚೋಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಕಿವಿಗೆ ಪೆಟ್ಟಾಗಿರುವುದರಿಂದ ವೈದ್ಯರು ಎಂ.ಎಲ್.ಸಿ ಪ್ರಕರಣ ದಾಖಲಿಸಿಕೊಂಡು ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಹೇಳಿದರು.

ಘಟನೆ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆನಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.