ಸೇಡಂ | ಯಡತೊರೆ ಶ್ರೀ ಶಂಕರಭಾರತಿ ಮಹಾಸ್ವಾಮಿಜಿ ಹೇಳಿಕೆ ( ಕಿಕ್ಕರ್ ) ಸನ್ನತಿಯಲ್ಲಿ ಸೌಂದರ್ಯಲಹರಿ ರಚನೆ
ಸೇಡಂನಲ್ಲಿ ಯಡತೊರೆ ಶ್ರೀ ಶಂಕರಭಾರತಿ ಮಹಾಸ್ವಾಮಿಜಿ ಹೇಳಿಕೆ ( ಕಿಕ್ಕರ್ )ಸನ್ನತಿಯಲ್ಲಿ ಸೌಂದರ್ಯಲಹರಿ ರಚನೆ
ಸೇಡಂ : ಆದಿಗುರು ಶ್ರೀ ಶಂಕರ ಭಗವತ್ಪಾದಾಚಾರ್ಯರು ಪ್ರಸಿದ್ಧ ಸ್ತೋತ್ರ ಸೌಂದರ್ಯ ಲಹರಿ
ರಚಿಸಿದ್ದು ಕಲಬುರಗಿ ಜಿಲ್ಲೆಯ ಸನ್ನತಿ ಶ್ರೀ ಚಂದ್ರಲಾಂಬ ದೇವಿಯ ಸಾನ್ನಧ್ಯದಲ್ಲಿಯೇ ಎಂದು ಮೈಸೂರು ಕೆ.ಆರ್.ನಗರದ ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಸೇಡಂನ ಶ್ರೀ ವಿಠ್ಠಲ ಮಂದಿರದ ಪ್ರಾಂಗಣದಲ್ಲಿ ತಾಲೂಕು ಬ್ರಾಹ್ಮಣ ಸಮಾಜ, ಶಿವಗುರು ಅಷ್ಟೋತ್ತರ ಮಂಡಳಿ ಮತ್ತು ಶ್ರೀ ಶಂಕರ ಸೇವಾ ಸಮಿತಿ ಹಾಗೂ ವಿಪ್ರಮಹಿಳಾ ಸಂಘಟನೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಲ್ಯಾಣವೃಷ್ಟಿ ಸಮರ್ಪಣಾ ಸಮಾರಂಭದ ಸಾನ್ನಧ್ಯವಹಿಸಿ ಅವರು, ಅನುಗ್ರಹ ಸಂದೇಶ ನೀಡಿದರು.
ಶ್ರೀ ಶಂಕರಾಚಾರ್ಯರು ಸೌಂದರ್ಯ ಲಹರಿ ರಚನೆ ಮಾಡಿದ್ದು, ಕಾಶ್ಮೀರದಲ್ಲಿ ಅಥವಾ ಶೃಂಗೇರಿ ಅಥವಾ ಕೇರಳದ ದೇವಸ್ಥಾನದಲ್ಲಿ ಎಂದು ಊಹಿಸಲಾಗಿತ್ತು. ಆದರೆ, ಇತ್ತೀಚೆಗೆ ನಡೆದ ಸಂಶೋಧನೆಯು ಗಣಿತಶಾಸ್ತ್ರದ ಆಧರಿಸಿದ ಜ್ಯೋತಿರ್ವಿಜ್ಞಾನವು ಸನ್ನತಿಗೆ ಶಂಕರರು ಆಗಮಿಸಿದ್ದರು ಮಾತ್ರವಲ್ಲ, ಚಂದ್ರಲಾಂಬ ದೇವಿಯ ದೇವಸ್ಥಾನದ ಸಮೀಪದಲ್ಲಿರುವ ಮಾರ್ಕಂಡೇಯನ ಸ್ಥಳದಲ್ಲಿ ಕೂತು ಸೌಂದರ್ಯ ಲಹರಿ ರಚಿಸಿದ್ದಾರೆ. ರಚಿಸಿದ ದಿನವೂ ಅಶ್ವಯುಜ ಬಹುಳ ದ್ವಾದಶಿಯಂದು ರಚಿಸಿದ್ದಾರೆ ಎನ್ನಲು ಪುರಾವೆಗಳೂ ದೊರೆತಿವೆ ಎಂದು ಹೇಳಿದರು.
ವೇದಾಂತ ಭಾರತಿಯಿಂದ ಶಾಂಕರ ಜ್ಯೋತಿ ಪ್ರಕಾಶ ಎಂಬ ಯೋಜನೆ ಆರಂಭಿಸಿದ್ದು, ದೇಶದಲ್ಲಿ ಯಾವಯಾವ ಪ್ರಾಂತ್ಯಗಳಿಗೆ ಶ್ರೀ ಶಂಕರಭಗವತ್ಪಾದರು ಬಂದು ಹೋಗಿದ್ದಾರೆ ಎನ್ನಲು ಆಧಾರ ಸಹಿತ ಗೊತ್ತಾದರೆ, ಅಲ್ಲಿನ ವಿಶೇಷ ಕುರಿತು ಪ್ರಕಟಿಸುವ ಯೋಜನೆಯಿದೆ ಎಂದರು.
ಕಲ್ಯಾಣವೃಷ್ಟಿ ಸ್ತೋತ್ರವನ್ನು ಸರ್ವ ಸಮಾಜದವರೂ ಪಠಿಸುವ ಮೂಲಕದ ನೆಮ್ಮದಿ ಹೊಂದಬಹುದು ಎಂದ ಶ್ರೀಗಳು, ಪರಮಾತ್ಮನಲ್ಲಿ ಏನು ಬೇಕು ಎಂದು ಕೇಳಲು ವಿವೇಕ ಬೇಕಾಗುತ್ತದೆ. ವಿವೇಕ ಮೂಡಲು ಶಂಕರರ ಸ್ತೋತ್ರಗಳು ಸಹಕಾರಿಯಾಗುತ್ತವೆ ಎಂದರು.
ಸಮೀಕ್ಷಾ ಕುಲಕರ್ಣಿ ಪ್ರಾರ್ಥಿಸಿದರು. ಡಾ.ಪ್ರವೀಣ ಜೋಶಿ ಸ್ವಾಗತಿಸಿದರು. ರಾಮಚಂದ್ರ ಜೋಶಿ ನಿರೂಪಿಸಿದರು. ಸಂಜೀವ ದೇಶಪಾಂಡೆ ವಂದಿಸಿದರು.
ಶೋಭಾಯಾತ್ರೆ :
ಸೇಡಂನ ನಾಗರಕಟ್ಟಾದಿಂದ ರುಕ್ಮಿಣಿ ವಿಠ್ಠಲ ಮಂದಿರವರೆಗೆ ಶ್ರೀಗಳ ಶೋಭಾಯಾತ್ರೆ ಜರುಗಿತು. ಮಹಿಳಾ ಭಜನಾ ಮಂಡಳಿಯ ಸದಸ್ಯರು ಭಜನೆ ಮಾಡುವ ಮೂಲಕ ಶ್ರೀಗಳನ್ನು ವೇದಿಕೆಗೆ ಕರೆತಂದರು.
ನಂತರ ಶ್ರೀಗಳ ಸಮಕ್ಷಮದಲ್ಲಿ ಶಿವ ಪಂಚಾಕ್ಷರಿ ಸ್ತೋತ್ರ, ಕಲ್ಯಾಣವೃಷ್ಟಿ ಸ್ತೋತ್ರ, ಲಕ್ಷ್ಮಿನರಸಿಂಹ ಕರಾವಲಂಬನ ಸ್ತೋತ್ರ ಪಠಿಸಿ ಶ್ರೀಗಳ ಮೆಚ್ಚುಗೆಗೆ ಪಾತ್ರರಾಗಿ ಆರ್ಶೀವಾದ ಪಡೆದರು.
ಬ್ರಾಹ್ಮಣ ಸಮಾಜದ ಅಧ್ಯಕ್ಷ ಕಾಶೀನಾಥ ಕುಲಕರ್ಣಿ, ಸಿಂಧನಮಡು ಸಂಸ್ಥಾನದ ಶ್ರೀ ಸಂತೋಷ ಸ್ವಾಮಿ ಮಹಾರಾಜ, ಸತ್ಯನಾರಾಯಣ ಮಹಾರಾಜ, ಸಹಜಾನಂದಸ್ವಾಮಿ ಮಹಾರಾಜ, ರತಿನ್ ದೇಶಪಾಂಡೆ, ಸುಧಾಕರಭಟ್ ಚಂದಾಪುರ, ಗುರುರಾಜ ಕುಲಕರ್ಣಿ ಹಾಬಾಳ, ವೆಂಕಟೇಶ ಕುಲಕರ್ಣಿ ಊಡಗಿ, ಅಂಕಿತ್ ಜೋಶಿ, ಪ್ರಹ್ಲಾದರಾವ್, ಗುರುರಾಜಾಚಾರ್ ತುಪ್ಪಸಕ್ರಿ, ಭೀಮಸೇನರಾವ ದೇಶಪಾಂಡೆ, ಸಂತೋಷ ಕುಲಕರ್ಣಿ ಸೇರಿದಂತೆ ನಗರದ ಗಣ್ಯರು, ಮಹಿಳೆಯರು ಭಾಗವಹಿಸಿದ್ದರು.
