ರಾಜ್ಯಮಟ್ಟದ ಪ್ರಾಜೆಕ್ಟ್‌ ಪ್ರದರ್ಶನ ನಾಳೆಯಿಂದ ||ಶರಣಬಸವ ವಿ.ವಿ.ಕಲಬುರಗಿ

ರಾಜ್ಯಮಟ್ಟದ ಪ್ರಾಜೆಕ್ಟ್‌ ಪ್ರದರ್ಶನ ನಾಳೆಯಿಂದ ||ಶರಣಬಸವ ವಿ.ವಿ.ಕಲಬುರಗಿ

ರಾಜ್ಯಮಟ್ಟದ ಪ್ರಾಜೆಕ್ಟ್‌ ಪ್ರದರ್ಶನ ನಾಳೆಯಿಂದ

ಕಲಬುರಗಿ: ನಗರದ ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಸಹಯೋಗದಲ್ಲಿ ಆಗಸ್ಟ್‌ 9 ಮತ್ತು 10ರಂದು 47ನೇ ಸರಣಿ–ವಿದ್ಯಾರ್ಥಿ ಯೋಜನಾ ಕಾರ್ಯಕ್ರಮದ ಪ್ರಾಜೆಕ್ಟ್‌ ಸೆಮಿನಾರ್-ಪ್ರದರ್ಶನ ಜರುಗಲಿದೆ ಎಂದು ಕೆಎಸ್‌ಸಿಎಸ್‌ಟಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಯು.ಟಿ. ವಿಜಯ್ ತಿಳಿಸಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಗೆ ಪೂರಕವಾದ ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರಗಳನ್ನು ಗುರುತಿಸಿ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಹಾಗೂ ಆರ್ಥಿಕ ನೆರವು ನೀಡಲು ಪ್ರಾಜೆಕ್ಟ್‌ ಪ್ರದರ್ಶನ ಆಯೋಜಿಸಲಾಗುತ್ತಿದೆ ಎಂದರು.

ಪ್ರಾಜೆಕ್ಟ್‌ ಪ್ರದರ್ಶನ ಕಾರ್ಯಕ್ರಮವನ್ನು ಆ. 9ರ ಬೆಳಿಗ್ಗೆ 10.30ಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸುವರು. ಮಹಾದಾಸೋಹ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ, 9ನೇ ಪೀಠಾಧಿಪತಿ ದೊಡ್ಡಪ್ಪ ಎಸ್‌. ಅಪ್ಪ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ದಾಕ್ಷಾಯಿಣಿ ಎಸ್.ಅಪ್ಪ ಸಾನ್ನಿಧ್ಯ ವಹಿಸುವರು. ಗುಲಬರ್ಗಾ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಆಗಸರ, ಕೆಎಸ್‌ಸಿಎಸ್‌ಟಿಯ ಕಾರ್ಯದರ್ಶಿ ಪ್ರೊ. ಎಂ.ಅಶೋಕ್ ರಾಯಚೂರು ಪಾಲ್ಗೊಳ್ಳುವರು’ ಎಂದು ತಿಳಿಸಿದರು.

ರಾಜ್ಯದ 80ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳ 600 ವಿದ್ಯಾರ್ಥಿಗಳು ಪಾಲ್ಗೊಂಡು, 354 ಪ್ರಾಜೆಕ್ಟ್‌ಗಳ ಪ್ರದರ್ಶನ ಮಾಡುವರು. ಪ್ರಾಜೆಕ್ಟ್‌ಗಳ ಮೌಲ್ಯಮಾಪನಕ್ಕೆ ಭಾರತೀಯ ವಿಜ್ಞಾನ ಸಂಸ್ಥೆ, ನ್ಯಾಷನಲ್ ಏರೊಸ್ಪೇಸ್ ಲ್ಯಾಬೊರೇಟರೀಸ್, ಸೆಂಟ್ರಲ್ ಮಾನು ಫ್ಯಾಕ್ಚರಿಂಗ್ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್ ಮತ್ತು ಇತರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳ 22 ಪರಿಣಿತರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ಈ ಪ್ರಾಜೆಕ್ಟ್‌ಗಳ ಪೈಕಿ 60 ಪ್ರಾಜೆಕ್ಟ್‌ಗಳನ್ನು ವರ್ಷದ ಅತ್ಯುತ್ತಮ ಪ್ರಾಜೆಕ್ಟ್‌ಗಳೆಂದು ಗುರುತಿಸಲಾಗುತ್ತದೆ. ಎಲ್ಲ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾಲೇಜೊಂದಕ್ಕೆ ವರ್ಷದ ಅತ್ಯುತ್ತಮ ಪ್ರಾಜೆಕ್ಟ್‌ ಪ್ರಶಸ್ತಿ ನೀಡಲಾಗುತ್ತದೆ. ಪ್ರಮಾಣ ಪತ್ರ, ನಗದು ಬಹುಮಾನವೂ ಇರಲಿದೆ ಎಂದರು.

ಶರಣಬಸವ ವಿವಿ ಸಮಕುಲಪತಿ ಪ್ರೊ. ವಿ.ಡಿ.ಮೈತ್ರಿ, ಕುಲಸಚಿವ ಅನಿಲ್ ಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಬಸವರಾಜ ಮಠಪತಿ, ಡೀನ್ ಲಕ್ಷ್ಮಿ ಪಾಟೀಲ ಮಾಕಾ, ಪ್ರೊ. ಎಂ.ಎಸ್.ಜೋಗದ್, ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಟಿ.ವಿ. ಶಿವಾನಂದನ್ ಪಾಲ್ಗೊಂಡಿದ್ದರು.