ಪತ್ರಕರ್ತರಿಗೆ ಆಧ್ಯಾತ್ಮಿಕ ಮೌಲ್ಯಗಳ ಅಗತ್ಯ ಎಂದು ಬಿ.ಕೆ. ಸವಿತ್ತಕ್ಕನವರು ಅಭಿಮತ
ಪತ್ರಕರ್ತರಿಗೆ ಆಧ್ಯಾತ್ಮಿಕ ಮೌಲ್ಯಗಳ ಅಗತ್ಯ ಎಂದು ಬಿ.ಕೆ. ಸವಿತ್ತಕ್ಕನವರು ಅಭಿಮತ
ನರೇಗಲ್ಲ : ಸಮಾಜದಲ್ಲಿ ಸತ್ಯ. ಜಾಗೃತಿ ಮತ್ತು ಮೌಲ್ಯಾಧಾರಿತ ಚಿಂತನೆಗಳನ್ನು ಬಿತ್ತುವ ಪತ್ರಿಕೋದ್ಯಮಕ್ಕೆ ಅತ್ಮಜ್ಞಾನದ ಬೆಳಕು ಸೇರ್ಪಡೆಯಾದಾಗ ಅದರ ಪರಿಣಾಮ ಮತ್ತಷ್ಟು ಅರ್ಥಪೂರ್ಣವಾಗುತ್ತದೆ. ಪತ್ರಕರ್ತರು ಸಮಾಜದ ಕಣ್ಣು ಮತ್ತು ಕಿವಿಗಳಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸತ್ಯದ ಅನ್ವೇಷಕರಾಗಿಯೂ ಇದ್ದು, ಅವರ ಬದುಕಿನಲ್ಲಿ ಆಧ್ಯಾತ್ಮಿಕ ಮೌಲ್ಯಗಳು ಅಳವಡಿಕೆಯಾಗುವುದು ಅಗತ್ಯವಾಗಿದೆ ಎಂದು ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿದ್ಯಾಲಯದ ಸಂಚಾಲಕಿ ಬಿ.ಕೆ. ಸವಿತ್ತಕ್ಕನವರು ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಇಂದಿನ ಮಾನವನು ಭೌತಿಕ ಸಾಧನೆಗಳು, ಹುದ್ದೆ, ಹಣ ಮತ್ತು ಖ್ಯಾತಿಯ ಹಿಂದೆ ಓಡುತ್ತಾ ತನ್ನ ನಿಜವಾದ ಗುರುತನ್ನೇ ಮರೆತಿದ್ದಾನೆ. "ನಾನು ಯಾರು?" ಎಂಬ ಮೂಲಭೂತ ಪ್ರಶ್ನೆಗೆ ಉತ್ತರ ಕಂಡುಕೊಳ್ಳದಿರುವುದೇ ಮಾನಸಿಕ ಅಶಾಂತಿ, ಒತ್ತಡ ಮತ್ತು ಅತೃಪ್ತಿಗೆ ಕಾರಣವಾಗಿದೆ. ನಾವು ಈ ದೇಹವಲ್ಲ, ದೇಹವನ್ನು ನಿಯಂತ್ರಿಸುವ ಚೈತನ್ಯಶಕ್ತಿಯಾದ ಆತ್ಮವಾಗಿದ್ದೇವೆ. ದೇಹವು ನಶ್ವರವಾದರೂ ಆತ್ಮವು ಶಾಶ್ವತ ಮತ್ತು ಅವಿನಾಶಿಯಾಗಿದ್ದು, ಅದರ ಮೂಲ ಸ್ವರೂಪ ಶಾಂತಿ, ಪ್ರೀತಿ, ಪವಿತ್ರತೆ, ಸುಖ ಮತ್ತು ಆನಂದವಾಗಿದೆ ಎಂದು ವಿವರಿಸಿದರು.
ಆತ್ಮವು ಮನಸ್ಸು, ಬುದ್ದಿ ಮತ್ತು ಸಂಸ್ಕಾರಗಳ ಮೂಲಕ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ. ಪ್ರತಿಯೊಬ್ಬ ಆತ್ಮನಿಗೂ ಪರಮಾತ್ಮನೇ
ಪರಮಪಿತನಾಗಿದ್ದು, ಪರಂಧಾಮವೇ ಆತ್ಮಗಳ ಮೂಲ ನೆಲೆಯಾಗಿದೆ. ಪರಮಾತ್ಮನ ಸ್ಮರಣೆ ಹಾಗೂ ರಾಜಯೋಗ ಧ್ಯಾನದ ಮೂಲಕ ವ್ಯಕ್ತಿ ತನ್ನೊಳಗಿನ ದೈವಿಕ ಗುಣಗಳನ್ನು ಜಾಗೃತಗೊಳಿಸಿಕೊಂಡು ಜೀವನದಲ್ಲಿ ಸಮತೋಲನ, ಸಂತೋಷ ಮತ್ತು ನೆಮ್ಮದಿಯನ್ನು ಸಾಧಿಸಬಹುದು ಎಂದು ತಿಳಿಸಿದರು.
ಪತ್ರಿಕೋದ್ಯಮದ ಮಹತ್ವವನ್ನು ಉಲ್ಲೇಖಿಸಿದ ಅವರು, ಪತ್ರಕರ್ತರು ಸಮಾಜದಲ್ಲಿ ನಡೆಯುವ ಘಟನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಹೊಣೆಗಾರಿಕೆಯನ್ನೂ ಹೊತ್ತಿರುತ್ತಾರೆ. ಅವರ ವೃತ್ತಿ ನಿರಂತರ ಸವಾಲುಗಳು. ಒತ್ತಡಗಳು, ಸಮಯದ ಮಿತಿಗಳು ಮತ್ತು ಜವಾಬ್ದಾರಿಗಳಿಂದ ಕೂಡಿದ್ದು, ಇಂತಹ ಸಂದರ್ಭಗಳಲ್ಲಿ ಮಾನಸಿಕ ದೃಢತೆ ಮತ್ತು ಶಾಂತ ಮನೋಭಾವ ಅತ್ಯಗತ್ಯವಾಗಿದೆ. ಆಧ್ಯಾತ್ಮಿಕ ಜ್ಞಾನ ಮತ್ತು ಧ್ಯಾನವು ಪತ್ರಕರ್ತರಿಗೆ ಒತ್ತಡವನ್ನು ನಿಭಾಯಿಸುವ ಶಕ್ತಿ ನೀಡುವುದರ ಜೊತೆಗೆ ಸತ್ಯದ ಪರವಾಗಿ ನಿಲ್ಲುವ ಧೈರ್ಯವನ್ನು ಕೂಡ ನೀಡುತ್ತದೆ ಎಂದು ಹೇಳಿದರು.
ನಿಜವಾದ ಯಶಸ್ಸಿನ ಕುರಿತು ಮಾತನಾಡಿದ ಅವರು, ಹಣ, ಹುದ್ದೆ ಅಥವಾ ಪ್ರಸಿದ್ದಿಯೇ ಯಶಸ್ಸಿನ ಮಾನದಂಡಗಳಲ್ಲ, ಯಾವುದೇ ಪರಿಸ್ಥಿತಿಯಲ್ಲಿಯೂ ಮನಸ್ಸಿನ ಸಂತೋಷ, ಶಾಂತಿ ಮತ್ತು ಸಮಾಧಾನವನ್ನು ಕಾಪಾಡಿಕೊಂಡು ಬದುಕುವ ವ್ಯಕ್ತಿಯೇ ನಿಜವಾದ ಯಶಸ್ವಿ. ಬಾಹ್ಯ ಸಾಧನೆಗಳಿಗಿಂತ ಆಂತರಿಕ ನೆಮ್ಮದಿ ಮತ್ತು ಮೌಲ್ಯಯುತ ಜೀವನವೇ ಮನುಷ್ಯನ ನಿಜವಾದ ಸಂಪತ್ತಾಗಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗದಗ ಜಿಲ್ಲಾ ಕಾನಿಪ ಸಂಘದ ಉಪಾಧ್ಯಕ್ಷ ಪ್ರಭುಸ್ವಾಮಿ ಆರವಟಿಗಿಮಠ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿಗಳು ಮತ್ತು ಪರಿಶೀಲಿಸದ ಮಾಹಿತಿಗಳು ಹರಡುತ್ತಿವೆ. ಕ್ಷಣಾರ್ಧದಲ್ಲಿ ಇಂತಹ ಸಂದರ್ಭದಲ್ಲಿ ಪತ್ರಿಕೆಗಳು ಮತ್ತು ವೃತ್ತಿಪರ ಮಾಧ್ಯಮಗಳು ವಿಶ್ವಾಸಾರ್ಹ ಸತ್ಯ ಹಾಗೂ ಮಾಹಿತಿಯ ಮೂಲಗಳಾಗಿ ಕಾರ್ಯನಿರ್ವಹಿಸುತ್ತಿವೆ. ಪತ್ರಿಕೆಗಳಲ್ಲಿ
ಪ್ರಕಟವಾಗುವ ಸುದ್ದಿಗಳು ಹಲವು ಹಂತಗಳ ಪರಿಶೀಲನೆ ಮತ್ತು ದೃಢೀಕರಣದ ನಂತರ ಜನರ ಮುಂದೆ ಬರುತ್ತವೆ. ಆದ್ದರಿಂದ ಮುದ್ರಿತ ಆಧ್ಯಾತ್ಮಿಕ ಮಾಧ್ಯಮಗಳ ಮೇಲಿನ ಜನರ ವಿಶ್ವಾಸ ಮತ್ತಷ್ಟು ಗಟ್ಟಿಯಾಗಬೇಕು ಎಂದು ಹೇಳಿದರು.
ಪತ್ರಕರ್ತ ಈಶ್ವರ ಬೆಟಗೇರಿ ಮಾತನಾಡಿ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳೆಲ್ಲವೂ ಅಗತ್ಯವಾಗಿವೆ. ಆಧುನಿಕ ಜೀವನಶೈಲಿಯಿಂದಾಗಿ ಮಾನಸಿಕ ಒತ್ತಡಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಧ್ಯಾನ ಮತ್ತು ಆತ್ಮಜ್ಞಾನ ವ್ಯಕ್ತಿಗೆ ಹೊಸ ಶಕ್ತಿ ಹಾಗೂ ನೆಮ್ಮದಿಯನ್ನು ನೀಡುತ್ತವೆ. ಬ್ರಹ್ಮಾಕುಮಾರಿ ಸಂಸ್ಥೆಯು ವಿಶ್ವದಾದ್ಯಂತ ಆಧ್ಯಾತ್ಮಿಕ ಜಾಗೃತಿ ಮೂಡಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಕಾನಿಪ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ನಿಂಗರಾಜ ಬೇವಿನಕಟ್ಟಿ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ ಶುಭ ಹಾರೈಸಲಾಯಿತು. ಬಳಿಕ ಮಾತನಾಡಿದ ಅವರು, ಜನಸಾಮಾನ್ಯರ ಸಮಸ್ಯೆಗಳು. ನೋವುಗಳು ಮತ್ತು ಆಡಳಿತದ ಆಶೋತ್ತರಗಳನ್ನು ಗಮನಕ್ಕೆ ತರುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಕರ್ತರು ಜನರು ಮತ್ತು ಆಡಳಿತದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಈಶ್ವರೀಯ ಪ್ರಾರ್ಥನೆ ಹಾಗೂ ಪರಮಾತ್ಮನ ಸಂದೇಶದೊಂದಿಗೆ ವಾತಾವರಣ ನಿರ್ಮಿಸಲಾಯಿತು.ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಹುರ್ರಾ ಟಾಪ್ ಶಿಖರವನ್ನು ಏರಿ ಸಾಧನೆಗೈದ ಜಕ್ಕಲಿ ಗ್ರಾಮದ ಪ್ರತಿಭಾವಂತ ಯುವತಿ ಸೃಷ್ಟಿ ಮೇಟಿ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ನರೇಗಲ್ಲ ಹೋಬಳಿ ಕಾನಿಪ ಸಂಘದ ಪತ್ರಕರ್ತರಿಗೂ ಸನ್ಮಾನ ನೀಡಿ ಗೌರವಿಸಲಾಯಿತು.
ಗದಗ ಜಿಲ್ಲಾ ಕಾನಿಪ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಆದರ್ಶ ಕುಲಕರ್ಣಿ, ಪತ್ರಕರ್ತರಾದ ಮಲ್ಲಯ್ಯ ಗುಂಡಗೋಪರಮಠ, ಸಂಗಮೇಶ ಮೆಣಸಗಿ, ಉಮೇಶ ನವಲಗುಂದ, ಹುಚ್ಚೀರಪ್ಪ ಈಟಿ, ಶಿವು ಮಡಿವಾಳರ, ಮಂಜುನಾಥ ಬಂಡಿವಡ್ಡರ ಸೇರಿದಂತೆ ಈಶ್ವರೀಯ ಪರಿವಾರದವರು ಹಾಗೂ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
