ಇತಿಹಾಸ ಸಂಸ್ಕೃತಿ ಒಂದು‌ನಾಣ್ಯದ ಎರಡು ಮುಖ: ಸಮಾಜ‌ ಮುನ್ನಡೆಸಲು ದಾರಿದೀಪ : ಶೇರಿಕಾರ

ಇತಿಹಾಸ ಸಂಸ್ಕೃತಿ ಒಂದು‌ನಾಣ್ಯದ ಎರಡು ಮುಖ: ಸಮಾಜ‌ ಮುನ್ನಡೆಸಲು ದಾರಿದೀಪ : ಶೇರಿಕಾರ

ಚಿಂಚೋಳಿ ತಾಲ್ಲೂಕು ಐತಿಹಾಸಿಕ‌ ಮಹತ್ವದ ತಾಣಗಳ‌ ಕೇಂದ್ರ -ಡಾ. ಶರಣಬಸ್ಸಪ್ಪ ವಡ್ಡನಕೇರಿ 

ಚಿಂಚೋಳಿ: ಭೌಗೋಳಿಕವಾಗಿ‌ ಅತ್ಯಂತ ಸುಂದರ ತಾಣವಾಗಿರುವ ಚಿಂಚೋಳಿ ತಾಲ್ಲೂಕು ಪ್ರಾಗೈತಿಹಾಸಿಕ‌ ಕಾಲದಿಂದ ಹೈದರಾಬಾದ ನಿಜಾಮನ ಕಾಲ ಮತ್ತು ಅವನ‌ ನಂತರವೂ ಐತಿಹಾಸಿಕವಾಗಿ ಅತ್ಯಂತ ಮಹತ್ವ ಪಡೆದ ತಾಲ್ಲೂಕು ಎಂದು 

 ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶರಣಬಸಪ್ಪ ವಡ್ಡನಕೇರಿ ತಿಳಿಸಿದರು. 

ಇಲ್ಲಿನ‌ ಸಿ.ಬಿ‌ ಪಾಟೀಲ ಕಾಲೇಜಿನಲ್ಲಿ ಇತಿಹಾಸ ವಿಭಾಗ ಮತ್ತು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಚಿಂಚೋಳಿ ತಾಲೂಕಿನ‌ ಇತಿಹಾಸ ಮತ್ತು ಸಂಸ್ಕೃತಿ ಕುರಿತಾದ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಶುಕ್ರವಾರ ಅವರು ಮಾತನಾಡಿದರು.

ಇಂತಹ ಮಹತ್ವದ ತಾಲೂಕಿನ ಚರಿತ್ರೆಯನ್ನು 'ಚಿಂಚೋಳಿ ತಾಲ್ಲೂಕು ದರ್ಶನ' ಕೃತಿಯ ಮೂಲಕ ಕಟ್ಟಿಕೊಟ್ಟಿರುವ ಸಹಾಯಕಿ‌ ಪ್ರಾಧ್ಯಾಪಕಿ ಡಾ. ದಿವ್ಯಾ ಕೆ ವಾಡಿ ಹಾಗೂ ಇಂಗ್ಲೀಷ ಅವತರಣಿಕೆ ಹೊರ ತಂದ ಡಾ. ರಾಮಕೃಷ್ಣ ಅಭಿನಂದನಾರ್ಹರು ಎಂದರು.

ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಮೂರ ಅವರು ಚಿಂಚೋಳಿ ತಾಲ್ಲೂಕು ದರ್ಶನ‌ ಕನ್ನಡ ಮತ್ತು ಇಂಗ್ಲೀಷ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ, ಚಿಂಚೋಳಿ ತಾಲೂಕು ಐತಿಹಾಸಿಕ‌ ಮತ್ತು ಸಾಂಸ್ಕೃತಿಕವಾಗಿ ತನ್ನದೇ ಹಿರಿಮೆ ಹೊಂದಿದೆ. ಇದನ್ನು ನಿಖರ ದತ್ತಾಂಶಗಳೊಂದಿಗೆ ಪುಸ್ತಕ ರಚಿಸಿದ ಲೇಖಕರ ಶ್ರಮ‌ ಮತ್ತು ಸಾಂಸ್ಕೃತಿಕ‌ ಕಾಳಜಿ‌ ಅನನ್ಯವಾಗಿದೆ ಎಂದರು. 

ಚಿಂಚೋಳಿ ತಾಲೂಕಿನ ಇತಿಹಾಸ ಮತ್ತು ಸಂಸ್ಕೃತಿ ಕುರಿತು ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತ ಜಗನ್ನಾಥ ಶೇರಿಕಾರ ಮಾತನಾಡಿ, ಇತಿಹಾಸ ಸಂಸ್ಕೃತಿಯನ್ನು‌ ಬೆಳೆಸುತ್ತದೆ. ಸಂಸ್ಕೃತಿ ಇತಿಹಾಸಕ್ಕೆ ಜೀವ ತುಂಬುತ್ತದೆ ಹೀಗಾಗಿ ಇತಿಹಾಸ ಮತ್ತು ಸಂಸ್ಕೃತಿ‌ ಒಂದು‌ ನಾಣ್ಯದ ಎರಡು ಮುಖವಿದ್ದಂತೆ ನಾವು ಇತಿಹಾಸ ಅರಿತು ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದರು.

 ಚಿಂಚೋಳಿ ತಾಲ್ಲೂಕಿನ ಗೊಟ್ಟಂಗೊಟ್ಟ, ನಾಗಾಈದಲಾಯಿ, ಮೊಂಬಾಪುರ, ಬೋನಸಪುರ, ಮೊರ್ನಾಳ್ ಪ್ರಾಗೈತಿಹಾಸಿಕ ಕಾಲದ ಜನವಸತಿ ಪ್ರದೇಶವಾಗಿದ್ದರೆ, ನಿಡಗುಂದಾದ ಸೂರ್ಯನಾರಾಯಣ ದೇವಾಲಯ ಐತಿಹಾಸಿಕವಾಗಿ ಬಹಳ ಪ್ರಾಮುಖ್ಯತೆ ಪಡೆದಿದೆ. ದೇವಾಲಯದ ನವರಂಗದಲ್ಲಿ ತೆರೆದ ಬಾವಿ ಛತ್ತಿನಲ್ಲಿ ಸೂರ್ಯದೇವನ ವಿಗ್ರಹ ನೋಡಲು ಈಗಲೂ ಕಾಣಸಿಗುತ್ತದೆ. ಇಲ್ಲಿನ‌ ಕಾಳಿಕಾ ದೇವಿ‌ ಮಂದಿರವೂ ಅಪರೂಪದಿಂದ ಕೂಡಿದೆ. ಜತೆಗೆ ಜೈನ ಶೈವ ಧಾರ್ಮಿಕ‌ ಕೇಂದ್ರವಾದ ಮಿರಿಯಾಣ, ಸುಲೇಪೇಟ, ದೇಗಲಮಡಿ, ಚಿಂಚೋಳಿ ಸ್ಮಾರಕಗಳು, ಸೋಮಲಿಂಗದಳ್ಳಿಯಲ್ಲಿ ಅನಾಥವಾಗಿ ಒಂದೇ ಕಡೆ ಹತ್ತಾರು ಸಂಖ್ಯೆಯಲ್ಲಿ‌ ಬಿದ್ದಿರುವ ವೀರಗಲ್ಲು ಹಾಗೂ‌ ಮಾಸ್ತಿ‌ಕಲ್ಲುಗಳ ಬಗ್ಗೆ ಸಂಶೋಧನೆ ನಡೆಯಬೇಕು ಎಂದರು. ನಾಗಾಈದಲಾಯಿಯ ಬೂದಿಗುಡ್ಡ, ಕನಕಪುರದಲ್ಲಿರುವ ಮಾನವನ ದ್ವಿಪಾದ ಹೋಲುವ ಜೋಡು ನಾಗಶಿಲ್ಪ, ಯತೆಬಾರಪುರದ ಮಹಿಳೆಯ ಶಿಲ್ಪ, ಮಿರಿಯಾಣದ ಹನುಮನ ಎದೆ ಸೀಳಿ ರಾಮಸೀತೆ ತೋರಿಸುವ ಶಿಲ್ಪ, ದ್ವಿಬಾಹು ಗಣಪನ‌ ವಿಗ್ರಹ, ಗೊಟ್ಟಮಗೊಟ್ಟದ ಪಾಣಿಪೀಠ ಹಾಗೂ ಶಿಲ್ಪಗಳು, ಕುಪನೂರಿನ ನೇಗಿಲ ಹಿಡಿದ ಮಾನವನ ಶಿಲ್ಪ ಅಧ್ಯಯನ ಯೋಗ್ಯವಾಗಿವೆ ಎಂದರು.

ಇಲ್ಲಿ ಶಾತವಾಹನರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು ಮತ್ತು ಬಹಮನಿ ಸುಲ್ತಾನರು ಹಾಗೂ ಹೈದರಾಬಾದಿನ‌ ನಿಜಾಮನ ಕಾಲದ ಇತಿಹಾಸದ ಕುರುಹುಗಳು ಹೇರಳವಾಗಿವೆ. ಚಿಂಚೋಳಿ ತಾಲ್ಲೂಕು ದರ್ಶನ ಕೃತಿ ರಚಿಸಿದ ದಿವ್ಯಾ ಕೆ ವಾಡಿ ಅವರ ಕಾಳಜಿ‌ ಮತ್ತು ಪರಿಶ್ರಮ ಶ್ಲಾಘನೀಯ ಎಂದರು. 

ಕಲಬುರಗಿಯ ಸರ್ಕಾರಿ ಪದವಿ‌ಮಹಾ ವಿದ್ಯಾಲಯದ ಡಾ. ಶಾಮಲಾ ಮ್ಯಾಕಲ್ ಅವರು ಮಾತನಾಡುತ್ತಾ, ಯಾವುದೇ ಚರಿತ್ರೆಯ ಪುಸ್ತಕಕ್ಕೆ ಕಾಲಮಾನದ ಚೌಕಟ್ಟಿರಬೇಕು. ಅದರಾಚೆಗಿನ ಅಧ್ಯಯನಗಳಿಗೆ ಭೌಗೋಳಿಕ ವ್ಯಾಪ್ತಿ ಸಿಗಬಹುದೇ ಹೊರತು, ಐತಿಹಾಸಿಕ ವ್ಯಾಪ್ತಿ ಸಿಗುವುದಿಲ್ಲ. ಚಿಂಚೋಳಿ ತಾಲ್ಲೂಕು ದರ್ಶನ ಇದೊಂದು ಮಹತ್ವದ ಕೃತಿಯಾಗಿದೆ. ಭವಿಷ್ಯದಲ್ಲಿ ಸಂಶೋಧಕರಿಗೆ ಆಕರ ಗ್ರಂಥವಾಗಲಿದೆ ಎಂದರು.

 ಚಿಂಚೋಳಿ ತಾಲೂಕು ದರ್ಶನ ಕೃತಿಯ ಕುರಿತು ಪರಿಚಯಾತ್ಮಕ ಮಾತುಗಳನ್ನಾಡಿದ ಕರ್ನಾಟಕ ರಾಜ್ಯ ಪತ್ರಾಗಾರ ಮತ್ತು ಗ್ಯಾಜೆಟಿಯರ್ ಇಲಾಖೆಯ ಉಪ‌ನಿರ್ದೇಶಕ ಡಾ. ವೀರಶೆಟ್ಟಿ ಗಾರಂಪಳ್ಳಿ‌ ಅವರು, ಚಿಂಚೋಳಿ ತಾಲ್ಲೂಕು ಚಾರಿತ್ರ್ಯಿಕವಾಗಿ ಅತ್ಯಂತ ಮಹತ್ವದ ತಾಣವಾಗಿದೆ. ಇಲ್ಲಿ ರಾಮಾಯಣ ಕಾಲ ಸೇರಿದಂತೆ ಬೌದ್ಧ, ಜೈನ, ಶೈವ ಹಾಗೂ ಮಧ್ಯಯುಗದ ಇಸ್ಲಾಂ ಆಳ್ವಿಕೆಯ ಕಾಲದ ಸಾಕಷ್ಟು ಕುರುಹುಗಳು ಲಭ್ಯವಿವೆ. ಈ ಕುರಿತು ಇನ್ನೂ ಅಧ್ಯಯನ‌ ನಡೆಯಲಿ ಎಂದರು. ಕೊಳ್ಳೂರಿನಲ್ಲಿ ಈಗಲೂ ನಾಗದೇವತೆ ಹಾಗೂ ತಾರಾ ಭಗವತಿಯ ಶಿಲ್ಪಗಳನ್ನು ಕಾಣಬಹುದು. ಅವು ತಾಲೂಕಿನ ಬೌದ್ಧ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಈ ತಾಲೂಕಿನಲ್ಲಿ ಕಂಡು ಬರುವ ಏಳು ಮಕ್ಕಳ ತಾಯಿ ಹೆಸರಿನ ಗುಡಿಗಳಿಗೆ ಗಾಂಧಾರದ ಹಾರೀತಿಯ ಸಂಬಂಧವಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಕರ್ನಾಟಕದ ಏಕೀಕರಣ ಚಳುವಳಿಯ ಹಿನ್ನೆಲೆಯಿದ್ದು, ಕರ್ನಾಟಕ ವಿದ್ಯಾವರ್ಧಕ ಸಂಘದವರು ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ಸಂಯೋಜಕರನ್ನು ನೇಮಿಸಿ ಚರಿತ್ರೆ ಮತ್ತು ಸಂಸ್ಕೃತಿ ಕುರಿತು ಕಾರ್ಯಕ್ರಮ, ವಿಚಾರ ಸಂಕಿರಣ, ಪುಸ್ತಕ ಬಿಡುಗಡೆಗಳಂತಹ ಕಾರ್ಯಕ್ರಮ‌ ಹಮ್ಮಿಕೊಳಲ್ಳುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪುಸ್ತಕ ಲೇಖಕರಾದ ಡಾ. ದಿವ್ಯಾ ಕೆ. ವಾಡಿ, ಡಾ. ರಾಮಕೃಷ್ಣ ಮಾತನಾಡಿ ಕೃತಿ ರಚನೆಗೆ ಪಟ್ಟ ಕಷ್ಟ ನನೆದು ಕಣ್ಣೀರು ಹಾಕಿದರು. ಕಾಲೇಜು ಪ್ರಾಂಶುಪಾಲರಾದ ಪ್ರೊ. ಮಾಣಿಕಮ್ಮ ಸುಲ್ತಾನಪುರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಬಸವರಾಜ ಭಾಗಾ, ಡಾ. ನಮೋಶಿ ರಾಠೋಡ, ಡಾ. ಮೀನಾಕ್ಷಿ ರಾಠೋಡ, ಬಸವರಾಜ ಐನೋಳ್ಳಿ, ಮೆರಾಜ‌ ಪಾಶಾ ಹಸನಲ್ಲಿ, ಚೇತನ‌ಅಣವಾರ ಮುಂತಾದವರು ಉಪಸ್ಥಿತರಿದ್ದರು. ಸುನೀತಾ ಮಾಡಗಿ ನಿರೂಪಿಸಿದರು. ಕಾಶಿನಾಥ ಹುಣಜೆ ಸ್ವಾಗತಿಸಿದರು. ಅಂಬರೀಶ್ ಪವಾರ್ ವಂದಿಸಿದರು.

ಇತಿಹಾಸ ಮತ್ತು ಸಂಸ್ಕೃತಿ ಒಂದು ನಾಣ್ಯದ ಎರಡು ಮುಖವಿದ್ದಂತೆ; ಸಮಾಜ ಮುನ್ನಡೆಸಲು ಇವು ದಾರಿದೀಪ-

  ಜಗನ್ನಾಥ ಶೇರಿಕಾರ