ವರ್ಷದ ಶ್ರೇಷ್ಠ ಕನ್ನಡಿಗ ಪ್ರಶಸ್ತಿಗೆ ಸುರೇಶ ಬಡಿಗೇರ ಆಯ್ಕೆ

ವರ್ಷದ ಶ್ರೇಷ್ಠ ಕನ್ನಡಿಗ ಪ್ರಶಸ್ತಿಗೆ ಸುರೇಶ ಬಡಿಗೇರ ಆಯ್ಕೆ

ವರ್ಷದ ಶ್ರೇಷ್ಠ ಕನ್ನಡಿಗ ಪ್ರಶಸ್ತಿಗೆ ಸುರೇಶ ಬಡಿಗೇರ ಆಯ್ಕೆ

ಮೇ 31ರಂದು ಪ್ರಶಸ್ತಿ ಪ್ರದಾನ, ಕವಿಗೋಷ್ಠಿ ಆಯೋಜನೆ

ಕಲಬುರಗಿ, ಮೇ 28: ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ “ವರ್ಷದ ಶ್ರೇಷ್ಠ ಕನ್ನಡಿಗ” ಪ್ರಶಸ್ತಿಗೆ ಯುವ ಸಾಹಿತಿ ಹಾಗೂ ಸಂಘಟಕ ಸುರೇಶ ಬಡಿಗೇರ ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷೆ ಮಾಲಾ ಕಣ್ಣಿ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಮೇ 31ರಂದು ಸಂಜೆ 5 ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಹತ್ತು ಮಂದಿ ಸಾಧಕರಿಗೆ “ಕಲಬುರ್ಗಿಯ ಕಣ್ಮಣಿ” ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಜೊತೆಗೆ ಕವಿಗೋಷ್ಠಿ ಕಾರ್ಯಕ್ರಮವೂ ಹಮ್ಮಿಕೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪಾಳಾ ಸುಕ್ಷೇತ್ರದ ಪೂಜ್ಯ ಶ್ರೀ ಗುರುಮೂರ್ತಿ ಶಿವಾಚಾರ್ಯರು ವಹಿಸಲಿದ್ದು, ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಭಾಗ್ಯಶ್ರೀ ಶರಣಪ್ರಕಾಶ ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಪ್ರಮೀಳಾ ಸದಾನಂದ ಪೆರ್ಲ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬಾಬುರಾವ ಯಡ್ರಾಮಿ, ಶರಣು ಗದುಗೆ, ಶಿವಾನಂದ ಖಜೂರಗಿ, ಉಮೇಶ ಶೆಟ್ಟಿ, ಶರಣು ಪಾಟೀಲ್ ಹಾಗೂ ಡಾ. ಕಾವ್ಯಶ್ರೀ ಮಹಾಗಾಂವ್ಕರ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ವಹಿಸಲಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ಸೀಮಾ ಪಾಟೀಲ, ಮಂಜುಳಾ ಎಸ್. ಬಿರಾದಾರ, ರೇಣುಕಾ ಹೆಳವರ, ಬಿ.ಎಚ್. ನಿರಗುಡಿ, ಬಾಬುಮಿಯ ಫುಲಾರಿ, ಪವನಕುಮಾರ ವಳಕೇರಿ, ಅಂಬುಜಾ ಮಳ್ಕೇಡ್ಕರ್, ಶಾಂತಮಲ್ಲಪ್ಪ ಕರಿಕಲ್, ರವಿ ದೇಗಾಂವ ಹಾಗೂ ರೇಣುಕಾ ಸರಡಗಿ ಅವರಿಗೆ “ಕಲಬುರ್ಗಿಯ ಕಣ್ಮಣಿ” ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಮಾಲಾ ಕಣ್ಣಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಆರು ಸಾಹಿತಿಗಳಿಂದ ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದ್ದು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ.