ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಸ್ಥಾನ ನೀಡಲು ಸಂವಿಧಾನ ರಕ್ಷಣಾ ಹೋರಾಟ ಸಮಿತಿಯಿಂದ ಮನವಿ
ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಸ್ಥಾನ ನೀಡಲು ಸಂವಿಧಾನ ರಕ್ಷಣಾ ಹೋರಾಟ ಸಮಿತಿಯಿಂದ ಮನವಿ
ಕಲಬುರಗಿ: ರಾಜ್ಯದ ಪ್ರಭುದ್ಧ ರಾಜಕಾರಣಿ, ದಲಿತ ಸಮುದಾಯದ ಯುವ ನಾಯಕ ಹಾಗೂ ಜನಪರ ಚಿಂತಕರಾದ ಪ್ರಿಯಾಂಕ್ ಖರ್ಗೆಅವರನ್ನು ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕೆಂದು ಸಂವಿಧಾನ ರಕ್ಷಣಾ ಹೋರಾಟ ಸಮಿತಿ ಆಗ್ರಹಿಸಿದೆ.
ಈ ಕುರಿತು ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಿಗೆ ಮನವಿ ಸಲ್ಲಿಸಿರುವ ಸಮಿತಿಯವರು, ಮೂರು ಬಾರಿ ಸಚಿವರಾಗಿ ಸೇವೆ ಸಲ್ಲಿಸಿರುವ ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ನ್ಯಾಯ, ಸಂವಿಧಾನದ ಮೌಲ್ಯಗಳು ಹಾಗೂ ಜನಪರ ಆಡಳಿತಕ್ಕಾಗಿ ನಿರಂತರವಾಗಿ ಹೋರಾಟ ನಡೆಸಿರುವ ನಾಯಕರು ಎಂದು ತಿಳಿಸಿದ್ದಾರೆ.
ಸಮಾನತೆಯ ಹರಿಕಾರ ಬಸವಣ್ಣ ಅವರನ್ನು ಕರ್ನಾಟಕ ಸರ್ಕಾರ “ಸಾಂಸ್ಕೃತಿಕ ನಾಯಕ” ಎಂದು ಘೋಷಿಸುವಲ್ಲಿ ಪ್ರಿಯಾಂಕ್ ಖರ್ಗೆ ಅವರ ಪಾತ್ರ ಮಹತ್ವದ್ದಾಗಿದೆ. ಜೊತೆಗೆ ಡಾ. ಬಿ. ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸ್ಥಾಪನೆಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಾಮಾಜಿಕ ಬದಲಾವಣೆಗೆ ಬುನಾದಿ ಹಾಕಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಬಿಜೆಪಿ ಸರ್ಕಾರದ ಅವ್ಯವಹಾರ, ಭ್ರಷ್ಟಾಚಾರ ಹಾಗೂ ವಿವಿಧ ಹಗರಣಗಳನ್ನು ದಾಖಲೆ ಸಮೇತ ಜನರ ಮುಂದಿಟ್ಟಿರುವ ಪ್ರಿಯಾಂಕ್ ಖರ್ಗೆ ಅವರು ರೈತರು, ಮಹಿಳೆಯರು, ದಲಿತರು ಹಾಗೂ ನಿರುದ್ಯೋಗಿಗಳ ಸಮಸ್ಯೆಗಳನ್ನು ಸದನದೊಳಗೂ ಹೊರಗೂ ಪ್ರಖರವಾಗಿ ಎತ್ತಿಹಿಡಿದಿದ್ದಾರೆ ಎಂದು ಸಮಿತಿಯವರು ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಸಚಿವರಾಗಿ “ಸಮೃದ್ಧಿ”, “ಐರಾವತ”, “ಪ್ರಬುದ್ಧ” ಹಾಗೂ “ಉನ್ನತಿ” ಯೋಜನೆಗಳನ್ನು ಜಾರಿಗೆ ತಂದು ಯುವಕರು, ವಿದ್ಯಾರ್ಥಿಗಳು ಮತ್ತು ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಿದ್ದಾರೆ ಎಂದು ಪ್ರಶಂಸಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಅವರ ಸಾಧನೆಗೆ ಕೇಂದ್ರ ಸರ್ಕಾರದಿಂದಲೂ ಮೆಚ್ಚುಗೆ ವ್ಯಕ್ತವಾಗಿದ್ದು, ಪಂಚಾಯತ್ ರಾಜ್ ವಿಕೇಂದ್ರೀಕರಣದಲ್ಲಿ ಕರ್ನಾಟಕವನ್ನು ದೇಶದ ಮುಂಚೂಣಿ ರಾಜ್ಯವನ್ನಾಗಿ ರೂಪಿಸುವಲ್ಲಿ ಅವರ ಕೊಡುಗೆ ಗಮನಾರ್ಹವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರವಹಿಸಿರುವ ಕಾರಣದಿಂದ ಪ್ರಿಯಾಂಕ್ ಖರ್ಗೆ ಅವರಿಗೆ ಉಪ ಮುಖ್ಯಮಂತ್ರಿಯ ಸ್ಥಾನಮಾನ ನೀಡಬೇಕೆಂದು ಸಂವಿಧಾನ ರಕ್ಷಣಾ ಹೋರಾಟ ಸಮಿತಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಅರ್ಜುನ್ ಭದ್ರೆ,
ಬೀಮಾರವ ಟಿಟಿ,
ಪರಮೇಶ್ವರ ಕಾನಾಪುರ,
ದೇವೇಂದ್ರ ಸಿನೂರ್,
ದಿನೇಶ ದೊಡ್ಡಮನಿ,
ದೇವೇಂದ್ರ ನಡುವಿನಮನಿ,
ರಮೇಶ ಜಾಧವ್,
ಮಹಾಂತಪ್ಪ ಸಂಗಾವಿ,
ಸಿದ್ದರಾಮ ಬೆಳಕೋಟಿ,
ಮಲ್ಲಿಕಾರ್ಜುನ ನೀಲೂರ್,
ಸುನೀಲ್ ಮಾನಪಡೆ,
ರಾಜಕುಮಾರ ಕಪನೂರ್,
ಕಿಶೋರ್ ಗಾಯಕವಾಡ,
ಸೇರಿದಂತೆ ಹಲವು ಮುಖಂಡರು ಉಪಸ್ತರಿದ್ದರು.
