ಜೆಡಿಎಸ್ ಯುವ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ
ಜೆಡಿಎಸ್ ಯುವ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ
ಕಲಬುರಗಿ : ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಬಸವರಾಜ್ ಬೀರಬಿಟ್ಟಿ ರವರ ಅಧ್ಯಕ್ಷ ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಜೆಡಿಎಸ್ ಯುವ ಅಧ್ಯಕ್ಷ ಪ್ರವೀಣ್ ಎಲ್. ಜಾಧವ್ ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಹುದ್ದೆಗಳಿಗೆ ಯುವ ಮುಖಂಡರನ್ನು ನೇಮಕ ಮಾಡಲಾಯಿತು. ಸಚಿನ್ ಭವಾನಿಕಾರ್ ಅವರನ್ನು ಜಿಲ್ಲಾ ಯುವ ಉಪಾಧ್ಯಕ್ಷರಾಗಿ, ರಾಘವೇಂದ್ರ ರಘು ಹಬಳ ಅವರನ್ನು ಜಿಲ್ಲಾ ಯುವ ಘಟಕದ ಕಾರ್ಯದರ್ಶಿಯಾಗಿ, ಚಂದ್ರಶೇಖರ ಕತ್ತರಕಿ ಅವರನ್ನು ವಿದ್ಯಾರ್ಥಿ ಘಟಕದ ಪ್ರಧಾನ ಕಾರ್ಯದರ್ಶಿ (ಉತ್ತರ)ಯಾಗಿ, ಸಂತೋಷಕುಮಾರ್ ಸುಲ್ಪಿ ಅವರನ್ನು ವಿದ್ಯಾರ್ಥಿ ಘಟಕದ ಪ್ರಧಾನ ಕಾರ್ಯದರ್ಶಿ (ದಕ್ಷಿಣ)ಯಾಗಿ ಹಾಗೂ ಸಚಿನ್ ವಿಜಯ್ ಕುಮಾರ್ ಅವರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ಉಪಾಧ್ಯಕ್ಷರಾಗಿ ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಹಿರಿಯ ಮುಖಂಡರಾದ ಮಹಾಂತಪ್ಪ ಮದರಿ, ಹಣಮಯ್ಯ ಗುತ್ತೇದಾರ ಹಾಗೂ ನಾಗರಾಜ್ ಹಬಾಳ ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಜೆಡಿಎಸ್ ಯುವ ಅಧ್ಯಕ್ಷ ಪ್ರವೀಣ್ ಎಲ್. ಜಾಧವ್, ಪಕ್ಷದ ಸಂಘಟನೆ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಯುವಕರು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಪಕ್ಷದ ತತ್ವ, ಸಿದ್ಧಾಂತಗಳು ಹಾಗೂ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಕರೆ ನೀಡಿದರು.
ನೂತನ ಪದಾಧಿಕಾರಿಗಳ ನೇಮಕದಿಂದ ಜಿಲ್ಲೆಯ ಯುವ ಘಟಕಕ್ಕೆ ಮತ್ತಷ್ಟು ಬಲ ಸಿಗಲಿದ್ದು, ಪಕ್ಷ ಸಂಘಟನೆಗೆ ಹೊಸ ಚೈತನ್ಯ ದೊರೆಯಲಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.
