ಬಡೇಪೂರ ಉದ್ಯಾನವನದ ಅತಿಕ್ರಮಣ ತೆರವುಗೊಳಿಸಿ ಅಭಿವೃದ್ಧಿಪಡಿಸಲು ಆಗ್ರಹ
ಬಡೇಪೂರ ಉದ್ಯಾನವನದ ಅತಿಕ್ರಮಣ ತೆರವುಗೊಳಿಸಿ ಅಭಿವೃದ್ಧಿಪಡಿಸಲು ಆಗ್ರಹ
ಕಲಬುರಗಿ : ಕಲಬುರಗಿ ತಾಲೂಕಿನ ಬಡೇಪೂರ ಗ್ರಾಮದ ಸರ್ವೆ ನಂ. 83ರಲ್ಲಿರುವ ವಸತಿ ವಿನ್ಯಾಸದ ಉದ್ಯಾನವನ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಕಟ್ಟಡಗಳನ್ನು ತಕ್ಷಣ ತೆರವುಗೊಳಿಸಿ ಉದ್ಯಾನವನವನ್ನು ಅಭಿವೃದ್ಧಿಪಡಿಸುವಂತೆ ಕರ್ನಾಟಕ ರಾಜ್ಯ ಕೋಲಿ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಸಮಿತಿಯ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಕೋಡ್ಲಿ ಅವರು, ಉದ್ಯಾನವನಕ್ಕಾಗಿ ಮೀಸಲಿರಿಸಿದ ಜಾಗವನ್ನು ಕೆಲವರು ಅತಿಕ್ರಮಿಸಿ ಕಟ್ಟಡಗಳನ್ನು ನಿರ್ಮಿಸಿರುವುದರಿಂದ ಸಾರ್ವಜನಿಕರಿಗೆ ದೊರೆಯಬೇಕಾದ ಸೌಲಭ್ಯಗಳು ಕಸಿದುಕೊಳ್ಳಲ್ಪಟ್ಟಿವೆ ಎಂದು ತಿಳಿಸಿದ್ದಾರೆ.
ಉದ್ಯಾನವನದಲ್ಲಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ, ಸಮರ್ಪಕವಾಗಿ ಅಭಿವೃದ್ಧಿಪಡಿಸಬೇಕು. ಅಲ್ಲದೆ, ಉದ್ಯಾನವನಕ್ಕೆ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಉದ್ಯಾನವನ ಎಂದು ನಾಮಕರಣ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದೇ ವೇಳೆ, ಕೋಲಿ ಸಮಾಜದ ಮುಖಂಡ ದಿವಂಗತ ವಿಠಲ ಹೇರೂರ ಅವರ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಬೇಕು. ಉದ್ಯಾನವನದ ಸಮೀಪ ಸೇಡಂ ರಸ್ತೆಯಿಂದ ಸರ್ಕಾರಿ ಆಸ್ಪತ್ರೆ ಕಡೆಗೆ ಹಾಗೂ ಸರ್ಕಾರಿ ಆಸ್ಪತ್ರೆ ಕಡೆಯಿಂದ ಶಹಾಬಾದ್ ರಸ್ತೆಯ ಕಡೆಗೆ ತಲಾ ಒಂದು ಬಸ್ ನಿಲ್ದಾಣ ನಿರ್ಮಿಸಿ ಸಾರ್ವಜನಿಕ ಸಾರಿಗೆ ಸೌಲಭ್ಯ ಒದಗಿಸಬೇಕು. ಜೊತೆಗೆ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗಿದೆ.
ಈ ಮನವಿಗೆ ಸಂಬಂಧಿಸಿದಂತೆ ಎನ್‌ಎ ಪ್ರತಿಗಳು ಹಾಗೂ ಲೇಔಟ್ ಪ್ರತಿಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ.
ಸಂಸ್ಥಾಪಕ ರಾಜ್ಯ ಅಧ್ಯಕ್ಷ ಸುಭಾಷ ಜಮಾದಾರ, ರಾಜ್ಯ ಉಪಾಧ್ಯಕ್ಷ ದತ್ತಪ್ಪ ಜಮಾದಾರ,
ರಾಜ್ಯ ಪ್ರಧಾನ ಕಾರ್ಯದರ್ಶಿ ಗಣಪತ್ತರಾವ್ ಅಂಕಲಗಿ,
ಜಿಲ್ಲಾ ಉಪಾಧ್ಯಕ್ಷದಶರಥ ಹೆಚ್. ತೆಗನೂರ,
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿ. ಸಣ್ಣೂರ್ ಇದ್ದರು.
