ಅವಿಸ್ಮರಣೀಯ ನೆನಪಾಗಿ ಇಳಿಯಿತು ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ' ಕಾರ್ಯಕ್ರಮ

ಅವಿಸ್ಮರಣೀಯ ನೆನಪಾಗಿ ಇಳಿಯಿತು ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ' ಕಾರ್ಯಕ್ರಮ

ಅವಿಸ್ಮರಣೀಯ ನೆನಪಾಗಿ ಇಳಿಯಿತು ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ' ಕಾರ್ಯಕ್ರಮ

ಕಲ್ಯಾಣ ಕಹಳೆ ನರೇಗಲ್ಲ: "ಜೀವನದಲ್ಲಿ ತಾಯಿ-ತಂದೆಯರ ನಂತರ ಅತ್ಯುನ್ನತ ಸ್ಥಾನ ಗುರುವಿನದು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ. ಪುಸ್ತಕ ಓದುವುದರಿಂದ ಮಸ್ತಕ ಬೆಳೆಯುತ್ತದೆ. ವಿದ್ಯಾರ್ಥಿಗಳು ಓದು, ಸಂಸ್ಕಾರ ಹಾಗೂ ಶಿಸ್ತನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಳ್ಳಬೇಕು" ಎಂದು ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಕೇಂದ್ರ ಕನ್ನಡ ಗಂಡು ಮಕ್ಕಳ ಶಾಲೆಯ 1988-89ರಿಂದ 1995-96ನೇ ಶೈಕ್ಷಣಿಕ ಸಾಲಿನ ಹಳೆಯ ವಿದ್ಯಾರ್ಥಿಗಳ ವತಿಯಿಂದ ಆಯೋಜಿಸಿದ್ದ 'ಗುರುವಂದನಾ ಸ್ನೇಹ ಸಮ್ಮಿಲನ'ದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

"ಪುಸ್ತಕಗಳು ಕೇವಲ ಜ್ಞಾನವನ್ನು ನೀಡುವುದಿಲ್ಲ. ವ್ಯಕ್ತಿಯ ಚಿಂತನೆ, ವ್ಯಕ್ತಿತ್ವ ಜೀವನದ ದೃಷ್ಟಿಕೋನವನ್ನು ರೂಪಿಸುತ್ತವೆ. ಪತ್ರಿಕೆ ಓದುವ ಸಂಸ್ಕೃತಿ ಬೆಳೆಯಬೇಕು. ಪತ್ರಿಕೆಗಳ ಒಳಪುಟಗಳಲ್ಲಿರುವ ಲೇಖನಗಳು, ಸುಭಾಷಿತಗಳು ಮಾರ್ಗದರ್ಶನಾತ್ಮಕ ವಿಷಯಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತವೆ" ಎಂದರು.

"ಗುಟ್ಕಾ, ತಂಬಾಕು, ಮದ್ಯ ಸೇರಿದಂತೆ ಎಲ್ಲ ರೀತಿಯ ದುಶ್ಚಟಗಳಿಂದ ದೂರವಿರಿ. ಆರೋಗ್ಯವೇ ನಿಜವಾದ ಸಂಪತ್ತು. ಆರೋಗ್ಯಕರ

ಜೀವನಶೈಲಿಯೊಂದಿಗೆ ತಂದೆ-ತಾಯಿ ಹಾಗೂ ಶಿಕ್ಷಕರ ಕನಸುಗಳನ್ನು ನನಸಾಗಿಸಬೇಕು" ಎಂದು ಸಲಹೆ ನೀಡಿದರು.

ಸನ್ಮಾನಿತ ನಿವೃತ್ತ ಡಿಡಿಪಿಐ ಸಂಜೀವ ಬಿಂಗೇರಿ ಮಾತನಾಡಿ, "ನಾವು ಶಿಕ್ಷಕರಾಗಿ ಮಾಡಿದ ಸೇವೆಯನ್ನು ವಿದ್ಯಾರ್ಥಿಗಳು ಮೂರು ದಶಕಗಳ ಬಳಿಕವೂ ನೆನಪಿಸಿಕೊಂಡು ಗೌರವಿಸುತ್ತಿರುವುದು ಜೀವನದ ಅತ್ಯಂತ ದೊಡ್ಡ ಬಹುಮಾನ” ಎಂದು ಭಾವುಕರಾಗಿ ನುಡಿದರು.

ಉದ್ಘಾಟಿಸಿ ಮಾತನಾಡಿದ ಶಿಕ್ಷಣ ಇಲಾಖೆಯ ಆರ್.ಎಸ್. ನರೇಗಲ್ಲ, "ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ: ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಶಿಲ್ಪಿಗಳು. ಹಳೆಯ ವಿದ್ಯಾರ್ಥಿಗಳು ಗುರುಗಳ ಸ್ಮರಿಸಿ ಗೌರವಿಸುತ್ತಿರುವುದು ಶಿಕ್ಷಣ ಕ್ಷೇತ್ರಕ್ಕೆ ಸಲ್ಲುವ ಅತ್ಯುನ್ನತ ಗೌರವ" ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಚಂದ್ರಾಮ ಗ್ರಾಮಪುರೋಹಿತ ಮಾತನಾಡಿ, "ಗುರುಗಳನ್ನು ಗೌರವಿಸುವ ಸಂಸ್ಕೃತಿ ಉಳಿದರೆ ಸಮಾಜದಲ್ಲಿ ಮೌಲ್ಯ ಉಳಿಯುತ್ತವೆ. ಇವು ಮುಂದಿನ ಪೀಳಿಗೆಗೆ ಉತ್ತಮ ಸಂದೇಶ ನೀಡುತ್ತವೆ" ಎಂದು ಅಭಿಪ್ರಾಯಪಟ್ಟರು.

ಸೇವೆ ಸಲ್ಲಿಸಿದ್ದ ನಿವೃತ್ತ ಶಿಕ್ಷಕರನ್ನು 'ಜ್ಞಾನ ದೀಪಗಳು' ಎಂಬ ಹೆಸರಿನಲ್ಲಿ ಸನ್ಮಾನಿಸಲಾಯಿತು. ವೀರಪ್ಪ ಸಂಗನಾಳ, ಕುಸುಮವ್ವ ಭೀಮನಗೌಡ್ರ, ಶರಣಬಸಪ್ಪ ಬೂದಿಹಾಳ, ಅಂದಾನಪ್ಪ ಅಣ ಗೌಡ, ಎಂ.ಪಿ. ಬಸರೀಗಿಡದ, ನಿಂಗನಗೌಡ ಚಿಕ್ಕನಗೌಡ್ರ, ಬಸವನಗೌಡ ಗೌಡರ, ಗೀತಾ ಗುಜ್ಜಲ ಮಲ್ಲವ್ವ ಸಕ್ರೋಜಿರನ್ನು ಹಳೆಯ ವಿದ್ಯಾರ್ಥಿಗಳು

ಗೌರವಿಸಿದರು. ಮೂರು ದಶಕಗಳ ಬಳಿಕ ಒಂದೇ ವೇದಿಕೆಯಲ್ಲಿ ಸೇರಿದ್ದ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ಸವಿನೆನಪುಗಳನ್ನು ಮೆಲುಕು ಹಾಕಿದರು. ಹಲವಾರು ವರ್ಷಗಳ ಬಳಿಕ ಭೇಟಿಯಾದ ಸಹಪಾಠಿಗಳು ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡು ಹಳೆಯ ಘಟನೆಗಳನ್ನು ಸ್ಮರಿಸುತ್ತಾ ಭಾವುಕರಾದರು. ಶಿಕ್ಷಕರನ್ನು ಪುಷ್ಪವೃಷ್ಟಿಯೊಂದಿಗೆ ದೃಶ್ಯ ವಿದ್ಯಾರ್ಥಿಗಳು ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆದ ಕ್ಷಣಗಳು ವಿಶೇಷ ಆಕರ್ಷಣೆಯಾಗಿದ್ದವು.

ಹರೀಶ ಬೊಮ್ಮನಹಳ್ಳಿ ಗೀತಾ ಭೋಪಳಾಪೂರ ಸಂಗೀತ ಕಾರ್ಯಕ್ರಮ ಮೆರುಗು ನೀಡಿತು. ಸುರೇಶ ಹಳ್ಳಿಕೇರಿ ಗವಿಸಿದ್ದಯ್ಯ ಹಳ್ಳಿಕೇರಿ ಭಾಗವಹಿಸಿದ್ದರು. ಎಸ್.ಜಿ. ಗುಳಗಣ್ಣವರ, ಎಸ್.ಬಿ. ನಿಡಗುಂದಿ, ತಿಮ್ಮರೆಡ್ಡಿ ಬಂಡಿವಡ್ಡರ, ಆನಂದ ಕೊಟಗಿ, ಚಂದ್ರಶೇಖರ ಸೋಮನಗೌಡ್ರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಗುರುಗಳ ಮೇಲಿನ ಗೌರವ, ಸಹಪಾಠಿಗಳ ಪುನರ್ಮಿಲನ, ಕೃತಜ್ಞತೆಯ ಭಾವನೆ ಮತ್ತು ಶಾಲಾ ದಿನಗಳ ಸವಿನೆನಪುಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಈ 'ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ' ಕಾರ್ಯಕ್ರಮ ಭಾಗವಹಿಸಿದ ಪ್ರತಿಯೊಬ್ಬರ ಮನದಲ್ಲಿ ಅವಿಸ್ಮರಣೀಯ ನೆನಪಾಗಿ ಉಳಿಯಿತು.

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ