ಪೀಠಗಳ ನಡುವಿನ ಗೊಂದಲ ಸಮಾಜದ ಅಭಿವೃದ್ಧಿಗೆ ಮಾರಕ: ರುದ್ರೇಶ ಕೋಟಗಿ
ಪೀಠಗಳ ನಡುವಿನ ಗೊಂದಲ ಸಮಾಜದ ಅಭಿವೃದ್ಧಿಗೆ ಮಾರಕ: ರುದ್ರೇಶ ಕೋಟಗಿ
*ಇವೆರಡೂ ಪೀಠಗಳು ಸಮಾಜದ ಶಕ್ತಿಯ ಸಂಕೇತಗಳೇ ಹೊರತು ಪರಸ್ಪರ ಸ್ಪರ್ಧಿಗಳಲ್ಲ*
ಕಲ್ಯಾಣ ಕಹಳೆ ನರೇಗಲ್ಲ ಮೇ.22: “ಕೂಡಲಸಂಗಮ ಹಾಗೂ ಹರಿಹರ ಪಂಚಮಸಾಲಿ ಪೀಠಗಳ ನಡುವಿನ ಅನಗತ್ಯ ಗೊಂದಲ ಮತ್ತು ಭಿನ್ನಾಭಿಪ್ರಾಯಗಳು ಸಮಾಜದ ಅಭಿವೃದ್ಧಿಗೆ ಮಾರಕವಾಗಿದ್ದು, ಹಿರಿಯರು ತಕ್ಷಣ ಮಧ್ಯಸ್ಥಿಕೆ ವಹಿಸಿ ಸಮಾಜವನ್ನು ಒಗ್ಗೂಡಿಸಬೇಕು” ಎಂದು ನರೇಗಲ್ಲ ಪಂಚಮಸಾಲಿ ಸಮಾಜದ ಮುಖಂಡ ರುದ್ರೇಶ ಕೋಟಗಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಪಂಚಮಸಾಲಿ ಸಮಾಜದ ಸಭೆಯಲ್ಲಿ ಸಮಾಜದ ಪ್ರಮುಖ ಪೀಠಗಳ ನಡುವಿನ ಜಟಾಪಟಿಗಳು ತಳಮಟ್ಟದ ಕಾರ್ಯಕರ್ತರು ಹಾಗೂ ಯುವ ಸಮುದಾಯದಲ್ಲಿ ನಿರಾಸೆ ಮೂಡಿಸುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
“ಹರಿಹರ ಮತ್ತು ಕೂಡಲಸಂಗಮ ಪೀಠಗಳು ಒಂದೇ ನಾಣ್ಯದ ಎರಡು ಮುಖಗಳಂತಿವೆ. ಇವೆರಡೂ ಸಮಾಜದ ಶಕ್ತಿಯ ಸಂಕೇತಗಳೇ ಹೊರತು ಪರಸ್ಪರ ಸ್ಪರ್ಧಿಗಳಲ್ಲ” ಎಂದು ತಿಳಿಸಿದ್ದಾರೆ.
2ಎ ಮೀಸಲಾತಿಗಾಗಿ ನಡೆದ ಹೋರಾಟದಲ್ಲಿ ಲಕ್ಷಾಂತರ ಯುವಕರು ಬಿಸಿಲು-ಮಳೆ ಲೆಕ್ಕಿಸದೆ ಭಾಗವಹಿಸಿದ್ದರು. ಆದರೆ ಇಂದು ಹಿರಿಯರ ಆರೋಪ-ಪ್ರತ್ಯಾರೋಪಗಳನ್ನು ಕಂಡು ಯುವಕರು ಸಂಘಟನೆಯಿಂದ ದೂರ ಸರಿಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪೀಠಗಳು ಸಮಾಜದ ಬಡ ವಿದ್ಯಾರ್ಥಿಗಳ ಶಿಕ್ಷಣ, ವಸತಿ ನಿಲಯಗಳ ಅಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಬೇಕು. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಮಾಜದ ಒಳಿತಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಒತ್ತಾಯಿಸಿದ್ದಾರೆ.
ಹಿಂದಿನ ಕಹಿ ಘಟನೆಗಳನ್ನು ಮರೆತು ಪಂಚಮಸಾಲಿ ಸಮಾಜವು ಒಗ್ಗಟ್ಟಿನ ಮಂತ್ರದೊಂದಿಗೆ ಮುನ್ನಡೆಯಬೇಕು ಎಂಬ ಆಶಯವನ್ನು ರುದ್ರೇಶ ಕೋಟಗಿ ವ್ಯಕ್ತಪಡಿಸಿದ್ದಾರೆ.
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
