ಸೌತ್ ಇಂಡಿಯನ್ ಕಾರು ರೇಸ್‌ನಲ್ಲಿ ವಿಜೇತರಾದ ರಿತೇಶ್ ಗುತ್ತೇದಾರರಿಗೆ ಸನ್ಮಾನ
ಸೌತ್ ಇಂಡಿಯನ್ ಕಾರು ರೇಸ್‌ನಲ್ಲಿ ವಿಜೇತರಾದ ರಿತೇಶ್ ಗುತ್ತೇದಾರರಿಗೆ ಸನ್ಮಾನ
ಕಲಬುರಗಿ: ಚೆನ್ನೈನಲ್ಲಿ ನಡೆದ 49ನೇ ದಕ್ಷಿಣ ಭಾರತದ ಕಾರುಗಳ ರೇಸ್ ರ್ಯಾಲಿಯಲ್ಲಿ ಗಮನಾರ್ಹ ಸಾಧನೆ ಮಾಡಿ ವಿಜಯಶಾಲಿಯಾದ ರಿತೇಶ್ ಗುತ್ತೇದಾರ ಅವರನ್ನು ಕಲಬುರಗಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ರಿತೇಶ್ ಗುತ್ತೇದಾರ ಅವರು ಮದ್ರಾಸ್ ಇಂಟರ್‌ನ್ಯಾಷನಲ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ 49ನೇ ದಕ್ಷಿಣ ಭಾರತದ ಪ್ರತಿಷ್ಠಿತ ಕಾರುಗಳ ರೇಸ್ ರ್ಯಾಲಿಯಲ್ಲಿ ಸಾಧನೆ ತೋರಿ ವಿಜಯಶಾಲಿಯಾಗಿದ್ದು, ಜಿಲ್ಲೆಯ ಹೆಮ್ಮೆ ಹೆಚ್ಚಿಸಿದ್ದಾರೆ.
ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಅವರ ಪುತ್ರರಾಗಿರುವ ರಿತೇಶ್ ಗುತ್ತೇದಾರ ಅವರ ಸಾಧನೆಯನ್ನು ಗುರುತಿಸಿ, ನಿಕಟಪೂರ್ವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಭೀಮಾಶಂಕರ ಎನ್. ಯಳಮೇಲಿ ಅವರ ಬಳಗದ ವತಿಯಿಂದ ಬಸವಣ್ಣನವರ ಭಾವಚಿತ್ರ ನೀಡಿ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿ.ಎಸ್. ಮಾಲಿಪಾಟೀಲ, ವಿದ್ಯಾಧರ ಬಿ. ಹುಗ್ಗಿ, ಸುಭಾಷ್ ಖಾಬಾ, ನಾಗಯ್ಯ ಗುತ್ತೇದಾರ, ಶರಣಗೌಡ ಪಾಟೀಲ್, ಮಲ್ಲಣ್ಣಗೌಡ ಪಾಟೀಲ್, ಶಿವಪ್ಪ ಗಣೂರ, ದಸ್ತಯ್ಯ ಗುತ್ತೇದಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ರಿತೇಶ್ ಗುತ್ತೇದಾರ ಅವರ ಸಾಧನೆಯನ್ನು ಶ್ಲಾಘಿಸಿದರು.
ಈ ವಿಜಯವು ಕಲಬುರಗಿ ಜಿಲ್ಲೆಯ ಕೀರ್ತಿಯನ್ನು ದಕ್ಷಿಣ ಭಾರತ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
