ದೇಶದ ಪ್ರಧಾನಿ "ಭಯೋತ್ಪಾದಕ" ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಅಕ್ಷಮ್ಯ ಅಪರಾಧ: ಡಾ. ಉಮೇಶ್ ಜಾಧವ್
ದೇಶದ ಪ್ರಧಾನಿ "ಭಯೋತ್ಪಾದಕ" ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಅಕ್ಷಮ್ಯ ಅಪರಾಧ: ಡಾ. ಉಮೇಶ್ ಜಾಧವ್
ಕಲಬುರಗಿ : ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು " ಭಯೋತ್ಪಾದಕ" ಎಂದು ಕರೆದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸಂವಿಧಾನಬದ್ಧ ಸ್ಥಾನ ಅಲಂಕರಿಸಿದ ದೇಶದ ಪ್ರಧಾನಿಗೆ ಅಪಮಾನ ಮಾಡಿರುವುದಲ್ಲದೆ ಇದು ಸಂವಿಧಾನ ವಿರೋಧಿ ಕೃತ್ಯ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ತೀವ್ರ ಆಕ್ರೋಶ ವ್ಯಕ್ತಪಡಿಸಿ ಖರ್ಗೆಯವರು ತಕ್ಷಣ ದೇಶದ ಜನರ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು "ಭಯೋತ್ಪಾದಕ" ಎಂದು ಕರೆದಿರುವುದು ದೇಶದ ಅತ್ಯುನ್ನತ ಸಾಂವಿಧಾನಿಕ ಪದವಿ ಅಲಂಕರಿಸಿದ ಗೌರವಯುತ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ ಅಪಮಾನವಾಗಿದೆ. ಈ ಹೇಳಿಕೆಯ ವಿರುದ್ಧ ಈಗಾಗಲೇ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ವ್ಯಕ್ತವಾಗುತ್ತಿದ್ದು ತಕ್ಷಣ ಪ್ರಧಾನಮಂತ್ರಿಯವರಲ್ಲಿ ಖರ್ಗೆ ಕ್ಷಮೆ ಯಾಚಿಸಬೇಕು. ಮಲ್ಲಿಕಾರ್ಜುನ ಖರ್ಗೆಯರು ಇತ್ತೀಚೆಗೆ ಪ್ರಧಾನಿ ಅವರನ್ನು ವಿಷ ಸರ್ಪ ಎಂದು ಹೇಳಿಕೆ ನೀಡಿ ಕ್ಷಮೆ ಯಾಚಿಸಿದ್ದಾರೆ. ಗುಜರಾತಿನವರನ್ನು ಅನಕ್ಷರಸ್ಥರು ಎಂದು ಕೇರಳದಲ್ಲಿ ಪ್ರಸ್ತಾಪ ಮಾಡಿ ಅಪಮಾನ ಮಾಡಿದ್ದಾರೆ. ಅವರ ಇತ್ತೀಚಿನ ಹೇಳಿಕೆಗಳು ಅವರ ಘನತೆಗೆ ಶೋಭೆ ತರುವಂತದ್ದಲ್ಲ. ಹಿರಿಯ ಅನುಭವಿ ರಾಜಕಾರಣಿಯಾಗಿ ಈಗೀಗ ವಯಸ್ಸಿನ ಅರಳು ಮರಳು ಉಂಟಾಗಿದೆ ಎಂಬ ಭಾವನೆ ಮೂಡುತ್ತಿದೆ. ಮಾತೆತ್ತಿದರೆ ಸಂವಿಧಾನ ಎಂದು ಜಪಿಸುತ್ತಿರುವ ಖರ್ಗೆಯವರು ಸಂವಿಧಾನಬದ್ಧವಾದ ಸ್ಥಾನ ಅಲಂಕರಿಸಿದ ಪ್ರಧಾನಿ ಅವರನ್ನು ಉಗ್ರ ಎಂದು ಹೇಳಿಕೆ ನೀಡುವ ಮೂಲಕ ಇದು ಸಂವಿಧಾನಕ್ಕೆ ಮಾಡಿದ ಅಪಚಾರ ಎಂದು ಡಾ.ಜಾಧವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕರು ಇತ್ತೀಚೆಗೆ ಎಲ್ಲ ಚುನಾವಣೆಗಳಲ್ಲಿ ಹೀನಾಯವಾಗಿ ಸೋತು ಮೂಲೆಗುಂಪಾಗುತ್ತಿರುವುದರಿಂದ ಹತಾಶ ಭಾವನೆಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯು ವ್ಯಾಪಕ ಜನ ಬೆಂಬಲ ಗಳಿಸಿರುವುದನ್ನು ಮನಗಂಡು ಕಾಂಗ್ರೆಸ್ ನಾಯಕರು ಹತಾಶಗೊಂಡು ಮತ್ತು ಸೋಲಿನ ಭಯದಿಂದ ಈ ರೀತಿಯ ಹುಚ್ಚು ಹೇಳಿಕೆಗಳನ್ನು ನೀಡಿ ತಮ್ಮ ನಿಜ ಬಣ್ಣ ಬಯಲು ಮಾಡುತ್ತಿದ್ದಾರೆ. ಖರ್ಗೆ ಹೇಳಿಕೆಯನ್ನು ಗಮನಿಸಿದ ಕೇಂದ್ರ ಚುನಾವಣಾ ಆಯೋಗವು ಎಚ್ಚರಿಕೆಯನ್ನು ಈಗಾಗಲೇ ನೀಡಿದ್ದು ತಮ್ಮ ವಿವರಣೆಯನ್ನು 24 ಗಂಟೆಗಳಲ್ಲಿ ಸಲ್ಲಿಸುವಂತೆ ಆದೇಶ ನೀಡಿರುವುದು ಸ್ವಾಗತಾರ್ಹವಾಗಿದೆ. ಈ ರೀತಿಯ ಕೆಟ್ಟ ಹೇಳಿಕೆಯನ್ನು ನೀಡಿದ ಖರ್ಗೆ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಮುಂದಿನ ದಿನಗಳಲ್ಲಿ ಯಾರು ಕೂಡ ಈ ರೀತಿಯ ನಿಂದನಾತ್ಮಕ ಹೇಳಿಕೆಗಳನ್ನು ನೀಡದಂತೆ ಎಚ್ಚರ ವಹಿಸಬೇಕಾಗಿದೆ ಎಂದು ಡಾ. ಉಮೇಶ್ ಜಾಧವ್ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ
