ರಾಜ್ಯ ಸರ್ಕಾರದ ಬಜೆಟ್ ಖಾಲಿ ಚೊಂಬು: ಶಾಸಕ ಪ್ರಭು ಚವ್ಹಾಣ --

ರಾಜ್ಯ ಸರ್ಕಾರದ ಬಜೆಟ್ ಖಾಲಿ ಚೊಂಬು: ಶಾಸಕ ಪ್ರಭು ಚವ್ಹಾಣ --

ರಾಜ್ಯ ಸರ್ಕಾರದ ಬಜೆಟ್ ಖಾಲಿ ಚೊಂಬು: ಶಾಸಕ ಪ್ರಭು ಚವ್ಹಾಣ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ರಾಜ್ಯ ಬಜೆಟ್ ಜನಸಾಮಾನ್ಯರ ನಿರೀಕ್ಷೆಗಳನ್ನು ಈಡೇರಿಸದ ಖಾಲಿ ಚೊಂಬಿನಂತಿದೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ. ಚವ್ಹಾಣ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ರಾಜ್ಯದ ರೈತರು, ಯುವಕರು ಹಾಗೂ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಸ್ಪಷ್ಟವಾದ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಿಲ್ಲ. ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹೆಣಗಾಡುತ್ತಿರುವಂತೆ ಕಾಣುತ್ತಿದೆ ಎಂದಿದ್ದಾರೆ.

ಕಳೆದ ಮೂರು ವರ್ಷಗಳಿಂದ ಅತೀವೃಷ್ಠಿಯಿಂದ ತೀವ್ರ ಬಾಧಿಸಿರುವ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ರಸ್ತೆ, ಸೇತುವೆ, ಕೆರೆ-ಕಟ್ಟೆಗಳು ಒಡೆದು ವಿಪರೀತ ನಷ್ಟ ಸಂಭವಿಸಿದೆ. ಬೆಳೆನಷ್ಟವಾಗಿ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಅವಶ್ಯಕ‌ತೆಗೆ ತಕ್ಕಂತೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ನಿಯಮಿತವಾಗಿ ಸಂಬಳ ಸಿಗುತ್ತಿಲ್ಲವೆಂದು ಸರ್ಕಾರಿ ನೌಕರರು ಗೋಳಾಡುತ್ತಿದ್ದಾರೆ. ಈ ಭಾಗಕ್ಕೆ ಹೊಸ ಯೋಜನೆಯನ್ನು ಘೋಷಿಸುವ ಅಗತ್ಯವಿತ್ತು. ಇದ್ಯಾವುದನ್ನೂ ಮಾಡದೇ ಸರ್ಕಾರ ಅಭಿವೃದ್ಧಿಯನ್ನು ಕೇವಲ ಭಾಷಣಗಳಿಗೆ ಸೀಮಿತಗೊಳಿಸಿದಂತೆ ತೋರುತ್ತಿದೆ. ಬೀದರ ಜಿಲ್ಲೆಯಲ್ಲಿ ಪ್ರವಾಸೋದ್ಯಮ, ನೀರಾವರಿ, ಕೈಗಾರಿಕಾ ಕ್ಷೇತ್ರಗಳಿಗೆ ವಿಶೇಷ ಅನುದಾನ ಘೋಷಿಸದೇ ಜನರ ನಿರೀಕ್ಷೆಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ನೀರಾವರಿ, ಗ್ರಾಮೀಣ ರಸ್ತೆ, ಕುಡಿಯುವ ನೀರು ಹಾಗೂ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈ ಬಜೆಟ್‌ನಲ್ಲಿ ಹೊಸದಾಗಿ ಯಾವುದೇ ಮಹತ್ವದ ಯೋಜನೆಗಳಿಲ್ಲದೆ ಕೇವಲ ಘೋಷಣೆಗಳ ಮಟ್ಟಕ್ಕೆ ಮಾತ್ರ ಸೀಮಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೋವುಗಳು ಸೇರಿದಂತೆ ಜಾನುವಾರುಗಳ ಹಿತದೃಷ್ಟಿಯಿಂದ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಎಲ್ಲ ಜನಪ್ರಿಯ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ಜಿಲ್ಲೆಗೊಂದು ಗೋಶಾಲೆ ಯೋಜನೆಗೆ ಹಣ ನೀಡುತ್ತಿಲ್ಲ. ಜಾನುವಾರುಗಳ ಆರೋಗ್ಯ ಕಾಪಾಡಲು ಜಾರಿಗೆ ತಂದಿದ್ದ ಪಶು ಸಂಜೀವಿನಿ ಎಂಬ್ಯುಲೆನ್ಸ್ ಗಳು ನಿಂತಲ್ಲೇ ತುಕ್ಕು ಹಿಡಿಯುತ್ತಿವೆ. ಇರುವ ಗೋಶಾಲೆಗಳು ಮುಚ್ಚುವ ಪರಿಸ್ಥಿತಿಗೆ ಬಂದಿವೆ. ಪುಣ್ಯಕೋಟಿ ದತ್ತು ಯೋಜನೆ ಸ್ಥಗಿತಗೊಂಡಿದೆ. ಗೋವುಗಳನ್ನು ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುವ ಧಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಜಾನುವಾರುಗಳ ಸಂಖ್ಯೆ ದಿನೇ ದಿನೇ ಕುಸಿಯುತ್ತಿದೆ. ಸರ್ಕಾರ ಜಾನುವಾರು ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಕಿಡಿ ಕಾರಿದ್ದಾರೆ.