ಹೊಟ್ಟೆಯ ಗಂಭೀರ ಗಾಯದಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಯುವಕನ ಜೀವ ಉಳಿಸಿದ ಬಸವೇಶ್ವರ ಆಸ್ಪತ್ರೆ

ಹೊಟ್ಟೆಯ ಗಂಭೀರ ಗಾಯದಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಯುವಕನ ಜೀವ ಉಳಿಸಿದ ಬಸವೇಶ್ವರ ಆಸ್ಪತ್ರೆ

ಹೊಟ್ಟೆಯ ಗಂಭೀರ ಗಾಯದಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಯುವಕನ ಜೀವ ಉಳಿಸಿದ ಬಸವೇಶ್ವರ ಆಸ್ಪತ್ರೆ

ಕಲಬುರಗಿ: ಬಿರುಗಾಳಿಯಿಂದಾಗಿ ಚಿತ್ತಾಪೂರದ 30 ವರ್ಷದ ಶಶಿಕುಮಾರ್ ಎಂಬ ಯುವಕನ ಹೊಟ್ಟೆಯ ಮೇಲೆ ಟಿನ್ ಶೀಟ್ ಬಿದ್ದು ಗಂಭೀರ ಗಾಯಗೊಂಡಿದ್ದು, ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಅವರನ್ನು ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ತಜ್ಞ ವೈದ್ಯರು ಯಶಸ್ವಿಯಾಗಿ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.

ಗಂಭೀರ ಸ್ಥಿತಿಯಲ್ಲಿದ್ದ ಶಶಿಕುಮಾರ್ ಅವರನ್ನು ಸಂಬಂಧಿಕರು ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿದರು. ಆಗ ಅವರ ಹೊಟ್ಟೆಯ ಎಡಭಾಗದಲ್ಲಿ ಕತ್ತರಿದ ಗಾಯವಾಗಿದ್ದು, ಹೊಟ್ಟೆ ಉಬ್ಬಿಕೊಂಡು ಹೃದಯ ಬಡಿತ ವೇಗವಾಗಿ (ಟ್ಯಾಕಿಕಾರ್ಡಿಯಾ) ಮತ್ತು ರಕ್ತದ ಒತ್ತಡ ಕಡಿಮೆಯಾಗಿರುವ (ಹೈಪೋಟೆನ್ಷನ್) ಸ್ಥಿತಿ ಕಂಡುಬಂದಿತು.

ತಕ್ಷಣವೇ ವೈದ್ಯರು ತುರ್ತು ಪರೀಕ್ಷೆಗಳನ್ನು ನಡೆಸಿದಾಗ ಹೊಟ್ಟೆಯೊಳಗಿನ ಆಂತರಿಕ ಅಂಗಗಳಲ್ಲಿ ಚಿದ್ರ (ಹಾಲೋ ವಿಸ್ಕಸ್ ಪರ್ಫೋರೇಶನ್), ಹೆಚ್ಚಿನ ರಕ್ತಸ್ರಾವ (ಹೆಮೋಪೆರಿಟೋನಿಯಂ) ಹಾಗೂ ಕಿಡ್ನಿ ಸುತ್ತಮುತ್ತ ದ್ರವ ಸಂಗ್ರಹ ಕಂಡುಬಂತು. ರೋಗಿಯ ಜೀವಕ್ಕೆ ಅಪಾಯ ಇರುವುದನ್ನು ಕುಟುಂಬ ಸದಸ್ಯರಿಗೆ ವಿವರಿಸಿ ತಕ್ಷಣವೇ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಯಿತು.

ತುರ್ತು ಎಕ್ಸ್‌ಪ್ಲೋರೇಟರಿ ಲ್ಯಾಪರೋಟಮಿ ಶಸ್ತ್ರಚಿಕಿತ್ಸೆಯ ವೇಳೆ ಹೊಟ್ಟೆಯೊಳಗಿನ ರಕ್ತಸ್ರಾವವನ್ನು ನಿಯಂತ್ರಿಸಿ, ಸಿಗ್ಮಾಯ್ಡ್ ಕೋಲನ್‌ನಲ್ಲಿ ಉಂಟಾದ ಚಿದ್ರಗಳನ್ನು ಯಶಸ್ವಿಯಾಗಿ ಸರಿಪಡಿಸಲಾಯಿತು. ನಂತರ ರೋಗಿಯನ್ನು ಐಸಿಯುವಿಗೆ ಸ್ಥಳಾಂತರಿಸಿ ತೀವ್ರ ನಿಗಾ ವಹಿಸಲಾಯಿತು.

ಶಸ್ತ್ರಚಿಕಿತ್ಸೆಯ ನಂತರ ಎರಡನೇ ದಿನ ರೋಗಿಗೆ ಜ್ವರ ಕಾಣಿಸಿಕೊಂಡಿದ್ದು, ತಕ್ಷಣವೇ ಆಂಟಿಬಯೋಟಿಕ್ ಚಿಕಿತ್ಸೆ ನೀಡಿ ನಿಯಂತ್ರಿಸಲಾಯಿತು. ಸಮಯೋಚಿತ ಚಿಕಿತ್ಸೆ ಮತ್ತು ತಜ್ಞ ವೈದ್ಯರ ನಿರಂತರ ಕಾಳಜಿಯಿಂದ ರೋಗಿಯ ಸ್ಥಿತಿ ಕ್ರಮೇಣ ಸುಧಾರಿಸಿಕೊಂಡು, ಈಗ ದ್ರವ ಆಹಾರ ಹಾಗೂ ಸಾಮಾನ್ಯ ಆಹಾರವನ್ನು ಸ್ವೀಕರಿಸುತ್ತಾ ಚೇತರಿಸಿಕೊಂಡಿದ್ದಾರೆ.

ಈ ಯಶಸ್ವಿ ಚಿಕಿತ್ಸೆಯಲ್ಲಿ ಡಾ. ಸಂಜೀವ ಪಾಟೀಲ್, ಡಾ. ಸಂಗಮೇಶ್ವರ ಪಾಟೀಲ್, ಡಾ. ನವೀನ್, ಡಾ. ಶ್ರೀಜಾ, ಡಾ. ಸ್ಪೂರ್ತಿ ಅವರು ಡಾ. ಎಸ್.ಎಸ್. ಖರ್ಬಾರಿ ಮತ್ತು ಡಾ. ವಿ.ಎಸ್. ಕಪ್ಪಿಕೇರಿ ಅವರ ಮಾರ್ಗದರ್ಶನದಲ್ಲಿ ಸೇವೆ ಸಲ್ಲಿಸಿದರು. ಅನಸ್ತೇಶಿಯಾ ತಂಡದ ಮುಖ್ಯಸ್ಥ ಡಾ. ಎಂ.ಡಿ. ಯಾಹ್ಯ ಹಾಗೂ ಐಸಿಯು ಮುಖ್ಯಸ್ಥ ಡಾ. ಸೋಹೈಲ್ ಶಾಲಿ ಅವರು ನಿರಂತರವಾಗಿ ರೋಗಿಯ ಆರೋಗ್ಯದ ಮೇಲ್ವಿಚಾರಣೆ ನಡೆಸಿದರು.

ಇದೀಗ ಮರಣವನ್ನು ಜಯಿಸಿದ ಶಶಿಕುಮಾರ್ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ. ನಮೋಶಿ, ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ. ಕೈಲಾಸ ಪಾಟೀಲ್ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ಸಂಚಾಲಕರು ಡಾ. ಕಿರಣ ದೇಶಮುಖ್ ಮತ್ತು ಡಾ. ಶರಣಬಸಪ್ಪ ಹರವಾಳ ಸೇರಿದಂತೆ ಎಲ್ಲರೂ ವೈದ್ಯರ ತಂಡವನ್ನು ಶ್ಲಾಘಿಸಿದ್ದಾರೆ.