ಪಾಳಾದಲ್ಲಿ ಶ್ರೀ ಬೀರಲಿಂಗೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

ಪಾಳಾದಲ್ಲಿ ಶ್ರೀ ಬೀರಲಿಂಗೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

ಪಾಳಾದಲ್ಲಿ ಶ್ರೀ ಬೀರಲಿಂಗೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ 

ಕಲಬುರಗಿ: ತಾಲೂಕಿನ ಪಾಳಾ ಗ್ರಾಮದ ಸೀಮಾಂತರದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆದ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವವು ಸೋಮವಾರ ಅತ್ಯಂತ ಭಕ್ತಿ ಭಾವ ಹಾಗೂ ವೈಭವದೊಂದಿಗೆ ಸಂಪನ್ನಗೊಂಡಿತು.

ಮಹೋತ್ಸವದ ಕೊನೆಯ ದಿನವಾದ ಸೋಮವಾರ ಬೆಳಿಗ್ಗೆ ಶ್ರೀ ಬೀರಲಿಂಗೇಶ್ವರ ದೇವರ ಮೂರ್ತಿಗೆ ಕಾಗಿನೆಲೆ ಸಂಸ್ಥಾನದ ಶಾಖೆಯ ತಿಂತಣಿ ಬ್ರಿಜ್ ಲಿಂಗಬೀರ ದೇವರು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಕುಡಕಿ ಚೆನ್ನಯ್ಯ ಸ್ವಾಮಿ ಅವರಿಂದ ಮಂದಿರದ ಶಿಖರಕ್ಕೆ ಭವ್ಯ ಕಳಸಾರೋಹಣ ಕಾರ್ಯಕ್ರಮ ಜರುಗಿತು.

 ಪಾಳಾ ಗ್ರಾಮದ ಗುರುಮೂರ್ತಿ ಶಿವಾಚಾರ್ಯರು, ಧರ್ಮಸಭೆಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಇಸ್ಲಾಂ ಧರ್ಮದವರಾದ ಹುಸೇನಿ ಜಮಾದಾರ್ ಅವರು ದೇವಸ್ಥಾನ ನಿರ್ಮಾಣಕ್ಕಾಗಿ ತಮ್ಮ ಜಮೀನನ್ನು ದಾನ ನೀಡಿರುವುದು ಸಮಾಜದಲ್ಲಿ ಧರ್ಮಸೌಹಾರ್ದ ಮತ್ತು ಏಕತಾಭಾವನೆಗೆ ಮಾದರಿಯಾಗಿದೆ ಎಂದು ತಿಳಿಸಿದರು.

ಸಮಾಜ ಸೇವಕಿ ಜಯಶ್ರೀ ಮತ್ತಿಮಡು ಅವರು ನೂತನ ಮಂದಿರವನ್ನು ಉದ್ಘಾಟಿಸಿ ಮಾತನಾಡಿ, ತಮ್ಮ ಪತಿ ಶಾಸಕ ಬಸವರಾಜ ಮತ್ತಿಮೂಡ ಅವರಿಂದ ಭಕ್ತರ ಅನುಕೂಲಕ್ಕಾಗಿ ಯಾತ್ರಿಕರ ನಿವಾಸ ನಿರ್ಮಾಣ ಮಾಡುವ ಭರವಸೆ ನೀಡಿದರು.

 ಪತ್ರಕರ್ತ ಶರಣಗೌಡ ಪಾಟೀಲ ಮಾತನಾಡಿ, “ದೇವನೊಬ್ಬ, ನಾಮ ಹಲವು; ಮಾನವೀಯ ಮೌಲ್ಯಗಳೊಂದಿಗೆ ಸಮಾನತೆಯಿಂದ ಬದುಕಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ದಿಲೀಪ್ ಪಾಟೀಲ, ಸುಭಾಷ್ ಆಲೂರ, ಪರಮೇಶ್ವರ ದಂಡಿನಕರ್, ರಾಜಕುಮಾರ ಬೆಣ್ಣೂರಕರ್, ಗೌಡಪ್ಪಗೌಡ ಪಾಟೀಲ, ಮಾಪಣ್ಣ ತಳಕೇರಿ, ಮಹೇಶ ನಾಟೀಕಾರ, ಕುಸನೂರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಅನೇಕ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗ್ರಾಮದಿಂದ ದೇವಸ್ಥಾನದವರೆಗೆ ಭಕ್ತರು ಬಾಜಾ-ಭಜಂತ್ರಿ, ಕುಂಭಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಸಿ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿದರು.

ಕಾರ್ಯಕ್ರಮವನ್ನು ದತ್ತು ಕಂಟಿಕರ್ ನಿರೂಪಿಸಿದರು.