ಹರಿದಾಸ್ ಹಾರ್ಟ್ ಆಸ್ಪತ್ರೆಯ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ
ಹರಿದಾಸ್ ಹಾರ್ಟ್ ಆಸ್ಪತ್ರೆಯ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ
ಕಲಬುರಗಿ : ನಗರದ ಸೂಪರ್ ಮಾರ್ಕೆಟ್ ರಸ್ತೆಯ ಜವಳಿ ಕಾಂಪ್ಲೆಕ್ಸ್‌ನಲ್ಲಿರುವ ಹರಿದಾಸ್ ಹಾರ್ಟ್ ಆಸ್ಪತ್ರೆಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು, ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ್ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಉತ್ತಮ ಆರೋಗ್ಯವೇ ಪ್ರತಿಯೊಬ್ಬರ ಅಮೂಲ್ಯ ಸಂಪತ್ತಾಗಿದ್ದು, ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಜೊತೆಗೆ ಆರಂಭಿಕ ಹಂತದಲ್ಲಿಯೇ ಕಾಯಿಲೆಗಳನ್ನು ಪತ್ತೆಹಚ್ಚಲು ನೆರವಾಗುತ್ತವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಹೃದಯ, ಶ್ವಾಸಕೋಶ ಹಾಗೂ ನಾಳೀಯ ತಜ್ಞ ಡಾ. ಅರುಣಕುಮಾರ ಹರಿದಾಸ್ ಮಾತನಾಡಿ, ಹೃದಯ ಹಾಗೂ ಶ್ವಾಸಕೋಶ ಸಂಬಂಧಿತ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ಮಾಡದೆ, ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಈ ಉಚಿತ ಶಿಬಿರದಲ್ಲಿ ತಜ್ಞ ವೈದ್ಯರಿಂದ ಸಮಾಲೋಚನೆ ಹಾಗೂ ವಿವಿಧ ಆರೋಗ್ಯ ತಪಾಸಣೆಗಳ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಶಿಬಿರದಲ್ಲಿ ಎಲ್ಲಾ ಕಾಯಿಲೆಗಳಿಗೆ ತಜ್ಞ ವೈದ್ಯರಿಂದ ಉಚಿತ ಸಮಾಲೋಚನೆ, ರಕ್ತದೊತ್ತಡ (ಬಿಪಿ) ತಪಾಸಣೆ, ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಇಸಿಜಿ (ECG), ಎಕೋ (ಹೃದಯ ಸ್ಕ್ಯಾನ್) ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಕೋಮಲೇಶ್ವರಿ ಹರಿದಾಸ್, ಯುವ ಮುಖಂಡ ಸಂದೇಶ್ ಕಮಕನೂರ್, ಡಾ. ಶಾರದಾ ಹರಿದಾಸ್, ಹಿರಿಯ ಶ್ವಾಸಕೋಶ ತಜ್ಞ ಡಾ. ಹರ್ಷ ಮೂರ್ತಿ ಹಾಗೂ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಆಸ್ಪತ್ರೆಯ ವತಿಯಿಂದ ಸಾರ್ವಜನಿಕರು ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮನವಿ ಮಾಡಲಾಯಿತು.

