ದರ್ಶನಂ ಪುರಾಣ ಪ್ರವಚನ ಕೃತಿಯ ಬಗ್ಗೆ ಅಭಿಪ್ರಾಯ: ಆಧ್ಯಾತ್ಮ ಸಾಧಕರಿಗೆ ಕಾವ್ಯಾಂಶಸಹಿತ ಕೈಪಿಡಿ-ಮಸೂತಿ

ದರ್ಶನಂ ಪುರಾಣ ಪ್ರವಚನ ಕೃತಿಯ ಬಗ್ಗೆ ಅಭಿಪ್ರಾಯ: ಆಧ್ಯಾತ್ಮ ಸಾಧಕರಿಗೆ ಕಾವ್ಯಾಂಶಸಹಿತ ಕೈಪಿಡಿ-ಮಸೂತಿ

ದರ್ಶನಂ ಪುರಾಣ ಪ್ರವಚನ ಕೃತಿಯ ಬಗ್ಗೆ ಅಭಿಪ್ರಾಯ: ಆಧ್ಯಾತ್ಮ ಸಾಧಕರಿಗೆ ಕಾವ್ಯಾಂಶಸಹಿತ ಕೈಪಿಡಿ-ಮಸೂತಿ

ಕಲಬುರಗಿ: ಚೌಡಾಪೂರಿ ಹಿರೇಮಠದ ಶ್ರೀ ಶಾಂತವೀರ ಶಿವಾಚಾರ್ಯರು ಅವರ ಜೀವನಾಧಾರಿತ ಮಹತ್ವದ ಕೃತಿ ದರ್ಶನಂ ಪುರಾಣ ಪ್ರವಚನ ಕುರಿತು ಪುರಾಣ ಲೇಖಕರಾದ ಡಾ. ನಾಗೇಂದ್ರ ಮಸೂತಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಒಟ್ಟು ೯ ಅಧ್ಯಾಯಗಳು ಮತ್ತು ೪೯೪ ಷಟ್ಪದಿ ಪದ್ಯಗಳನ್ನು ಒಳಗೊಂಡಿರುವ ಈ ಕೃತಿ ಪೂಜ್ಯರ ಜೀವನ ಸಾಧನೆ, ಸಿದ್ಧಿ ಮತ್ತು ಪವಾಡಗಳನ್ನು ಕಾವ್ಯಮಯವಾಗಿ ಬಿಂಬಿಸುತ್ತದೆ. ಭಾಷೆ, ಛಂದಸ್ಸು ಹಾಗೂ ಮಹಾಕಾವ್ಯದ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಈ ಕೃತಿ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಮೈಲುಗಲ್ಲಾಗಲಿದೆ ಎಂದು ಅವರು ಹೇಳಿದರು. ಭಕ್ತಿ, ವಿಶ್ವಾಸ ಮತ್ತು ಆಧ್ಯಾತ್ಮ ಸಾಧಕರಿಗೆ ಕೈಪಿಡಿಯಾಗುವ ಈ ಕಾವ್ಯಾಂಶಸಮೃದ್ಧ ಗ್ರಂಥವು ಚಲುವಿನ ಕೃತಿಯಾಗಿದೆ ಎಂದು ತಿಳಿಸಿದರು.

ಹಿರಿಯ ಶರಣ ಸಾಹಿತಿಗಳಾದ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಮಾತನಾಡಿ, “ಇದು ಕಿರು ಭಾಮಿನಿ ಷಟ್ಪದಿಯಲ್ಲಿ ರಚಿತವಾದ ಕೃತಿ. ಪೂಜ್ಯರ ಜೀವನವನ್ನು ಮಹಾಕಾವ್ಯ ರೂಪದಲ್ಲಿ ಕಟ್ಟಿಕೊಟ್ಟಿರುವುದು ಹೆಮ್ಮೆಯ ವಿಷಯ. ಇಂತಹ ಗ್ರಾಮೀಣ ಧಾರ್ಮಿಕ ಚಟುವಟಿಕೆಗಳು ಯುವಕರಲ್ಲಿ ಸಾಮರಸ್ಯ ಮತ್ತು ಕೂಡಿ ಬಾಳುವ ಮನೋಭಾವ ಬೆಳೆಸುತ್ತವೆ” ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಅವರು “ಯತ್ತಣ ಕೋಗಿಲೇ, ಯತ್ತಣ ಮಾಮರ ಯತ್ತಣದಿಂದ ಯತ್ತ ಸಂಬಂಧವಯ್ಯಾ” ಎಂಬ ಶರಣರ ವಾಣಿಯನ್ನು ಉಲ್ಲೇಖಿಸಿ, ಕನ್ನಡ ಸಾರಸ್ವತ ಲೋಕದಲ್ಲಿ ಹೆಸರು ಮಾಡಿದ ಇಬ್ಬರು ಗುರು-ಶಿಷ್ಯರು ಹಾಗೂ ಕಳೆದ ವರ್ಷದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನಾಧ್ಯಕ್ಷರು ನಮ್ಮ ಊರಿನ ಶಾಂತೇಶ್ವರ ಮಠಕ್ಕೆ ಆಗಮಿಸಿರುವುದು ಸೌಭಾಗ್ಯಕರ ಸಂಗತಿ” ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ ನಿಮಿತ್ತ ನಡೆದ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಡಾ. ಶಾಂತಸೋಮನಾಥ ಅವರು ಸಾನಿಧ್ಯ ವಹಿಸಿದರು. ಶಿಕ್ಷಣ ಇಲಾಖೆಯ ವಿಶ್ರಾಂತ ನಿರ್ದೇಶಕರಾದ ಕರಣಯ್ಯ ಎಸ್. ಹಿರೇಮಠ, ಕವಿಗಳಾದ ಶಿವಯ್ಯ ಮಠಪತಿ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದುತ್ತರಗಾಂವದ ಶ್ರೀ ಸೂರ್ಯಕಾಂತ ಶಾಸ್ತ್ರಿಗಳು ಪುರಾಣ ಪ್ರವಚನ ನಡೆಸಿ, ಕಲಾವಿದರಾದ ವೀರಭದ್ರಯ್ಯ ಗುರುಶಾಂತಯ್ಯ ಸ್ಥಾವರಮಠ ಸಂಗೀತ ಸೇವೆ ಸಲ್ಲಿಸಿದರು. ಉಮಾದೇವಿ ಚೇಂಗಟಿ ಸ್ವಾಗತಿಸಿದರು; ಬಸವರಾಜ ಬೈರಿ ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಸಂದರ್ಭದಲ್ಲಿ ಕೃತಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಆಧ್ಯಾತ್ಮಕ ಸಾಧಕರಿಗೆ ಮಾರ್ಗದರ್ಶಕ ಕೈಪಿಡಿಯಾಗುವ ಗ್ರಂಥವೆಂದು ಗಣ್ಯರು ಶ್ಲಾಘಿಸಿದರು.