ದಲಿತ ಹಾಗೂ ದೃಷ್ಟಿವಿಕಲಚೇತನ ಅಧಿಕಾರಿಗೆ ಅನ್ಯಾಯ: ತಪ್ಪಿತಸ್ಥ ಅಧಿಕಾರಿಗಳ ಅಮಾನತಿಗೆ ಭೀಮ್ ಆರ್ಮಿ ಆಗ್ರಹ
ದಲಿತ ಹಾಗೂ ದೃಷ್ಟಿವಿಕಲಚೇತನ ಅಧಿಕಾರಿಗೆ ಅನ್ಯಾಯ: ತಪ್ಪಿತಸ್ಥ ಅಧಿಕಾರಿಗಳ ಅಮಾನತಿಗೆ ಭೀಮ್ ಆರ್ಮಿ ಆಗ್ರಹ
ಕಲಬುರಗಿ : ನಿಷ್ಠಾವಂತ, ದಲಿತ ಹಾಗೂ ದೃಷ್ಟಿವಿಕಲಚೇತನ ಅಧಿಕಾರಿಯಾಗಿರುವ ಶ್ರೀನಿವಾಸ ಬಾಳುವಾಲೆ ಅವರ ವಿರುದ್ಧ ವ್ಯವಸ್ಥಿತವಾಗಿ ಸುಳ್ಳು ಆರೋಪಗಳನ್ನು ಹೊರಿಸಿ ಮಾನಸಿಕ ಕಿರುಕುಳ ನೀಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ್, ಮಾಜಿ ಸಿಡಿಪಿಒಗಳಾದ ಶಿವಶರಣಪ್ಪ ಬುಶೆಟ್ಟಿ ಹಾಗೂ ಭೀಮರಾಯ ಕಣ್ಣೂರ ಅವರನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಒಳಪಡಿಸಬೇಕು ಎಂದು ಭೀಮ್ ಆರ್ಮಿ ಜಿಲ್ಲಾ ಸಮಿತಿ ವತಿಯಿಂದ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ಭೀಮ್ ಆರ್ಮಿ ಜಿಲ್ಲಾ ಅಧ್ಯಕ್ಷ ಸೂರ್ಯಕಾಂತ ಜಿಡಗಾ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯಲ್ಲಿ, ಶ್ರೀನಿವಾಸ ಬಾಳುವಾಲೆ ಅವರು ಕಲಬುರಗಿ ನಗರ ಸಿಡಿಪಿಒ ಹುದ್ದೆಯನ್ನು ವಹಿಸಿಕೊಳ್ಳುವುದಕ್ಕೂ ಮುನ್ನ ನಡೆದ ಪ್ರಕರಣಗಳಿಗೂ ಅವರ ಹೆಸರನ್ನು ಅನಗತ್ಯವಾಗಿ ಜೋಡಿಸಿ, ಇಲಾಖಾ ಕ್ರಮಕ್ಕೆ ಒಳಪಡಿಸುವ ಉದ್ದೇಶದಿಂದ ಅಧಿಕಾರಿಗಳು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಂಗನವಾಡಿ ಸಹಾಯಕಿಯರ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಬಾಳುವಾಲೆ ಅವರ ವಿರುದ್ಧ ಆರೋಪ ಮಾಡಲಾಗುತ್ತಿದೆಯಾದರೂ, ನೇಮಕಾತಿ ಪ್ರಕ್ರಿಯೆಯ ಬಹುತೇಕ ಹಂತಗಳು ಅವರು ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಪೂರ್ಣಗೊಂಡಿದ್ದವು. ಆದ್ದರಿಂದ ಅಂಕಪಟ್ಟಿ ತಿದ್ದುಪಡಿ ಅಥವಾ ನಕಲಿ ದಾಖಲೆಗಳ ಸೃಷ್ಟಿಯಲ್ಲಿ ಅವರ ಪಾತ್ರ ಇರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಇದೇ ವೇಳೆ, ನೇಮಕಾತಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು, ಕಡತಗಳು ಹಾಗೂ ಕಚೇರಿಯ ದತ್ತಾಂಶಗಳನ್ನು ಮಾಜಿ ಸಿಡಿಪಿಒ ಶಿವಶರಣಪ್ಪ ಬುಶೆಟ್ಟಿ ಅವರು ಅನಧಿಕೃತವಾಗಿ ಕಚೇರಿಯಿಂದ ತೆಗೆದುಕೊಂಡು ಹೋಗಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ. ಅಲ್ಲದೆ, ಈ ಕುರಿತು ಹಲವು ಬಾರಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಹೇಳಲಾಗಿದೆ.
ಕೆಲವು ಸಂಘಟನೆಗಳು ಹಾಗೂ ವ್ಯಕ್ತಿಗಳ ಮೂಲಕ ನಿರಂತರವಾಗಿ ಆಧಾರರಹಿತ ದೂರುಗಳನ್ನು ದಾಖಲಿಸಿ, ಸಾರ್ವಜನಿಕರ ದೂರಿನ ಹೆಸರಿನಲ್ಲಿ ಶ್ರೀನಿವಾಸ ಬಾಳುವಾಲೆ ಅವರ ವಿರುದ್ಧ ಇಲಾಖಾ ವಿಚಾರಣೆ ಆರಂಭಿಸಲು ಸಂಚು ರೂಪಿಸಲಾಗಿದೆ ಎಂದು ಭೀಮ್ ಆರ್ಮಿ ಆರೋಪಿಸಿದೆ. ಇದರಿಂದ ದಲಿತ ಹಾಗೂ ವಿಕಲಚೇತನ ಅಧಿಕಾರಿಯೊಬ್ಬರನ್ನು ಗುರಿಯಾಗಿಸಿಕೊಂಡು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಶ್ರೀನಿವಾಸ ಬಾಳುವಾಲೆ ಅವರ ವಿರುದ್ಧದ ಎಲ್ಲಾ ಆರೋಪಗಳನ್ನು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಿ, ಅವರ ಮೇಲೆ ಹೊರಿಸಲಾದ ಆರೋಪಗಳಿಂದ ಮುಕ್ತಗೊಳಿಸಬೇಕು. ಜೊತೆಗೆ, ಅಧಿಕಾರ ದುರ್ಬಳಕೆ, ದಾಖಲೆಗಳ ಅಕ್ರಮ ನಿರ್ವಹಣೆ ಹಾಗೂ ಸುಳ್ಳು ದೂರುಗಳ ಮೂಲಕ ಕಿರುಕುಳ ನೀಡಿದ ಆರೋಪದಡಿ ರಾಜಕುಮಾರ ರಾಠೋಡ್, ಶಿವಶರಣಪ್ಪ ಬುಶೆಟ್ಟಿ ಮತ್ತು ಭೀಮರಾಯ ಕಣ್ಣೂರ ವಿರುದ್ಧ ಇಲಾಖಾ ಹಾಗೂ ಕಾನೂನು ಕ್ರಮ ಜರುಗಿಸಬೇಕು ಎಂದು ಭೀಮ್ ಆರ್ಮಿ ಒತ್ತಾಯಿಸಿದೆ.
ಅಲ್ಲದೆ, ಕಳೆದ ಹಲವು ವರ್ಷಗಳಿಂದ ಕಲಬುರಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಬಂಧಿತ ಅಧಿಕಾರಿಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಪಾರದರ್ಶಕ ಹಾಗೂ ಜನಸ್ನೇಹಿ ಆಡಳಿತಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸೂರ್ಯಕಾಂತ ಜಿಡಗಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಬಂಗರಗಿ, ಜಿಲ್ಲಾ ಕಾರ್ಯದರ್ಶಿ ಸುಧೀರ ಹೊನ್ನಳ್ಳಿ, ಮುಖಂಡ ರಾಜಕುಮಾರ ಮೋಘಾ ಹಾಗೂ ಅಂಬೇಡ್ಕರ್ ಜನಪರ ವೇದಿಕೆಯ ಉಪಾಧ್ಯಕ್ಷ ಸಿದ್ಧಾರ್ಥ ಎಂ.ಕೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
