ರಂಗೋಲಿ ಕಲೆಯಿಂದ ಧಾರ್ಮಿಕಕ್ಕಿಂತ ದೈಹಿಕ ಲಾಭ ಹೆಚ್ಚು– ರೇಖಾ ಅಂಡಗಿ
ರಂಗೋಲಿ ಕಲೆಯಿಂದ ಧಾರ್ಮಿಕಕ್ಕಿಂತ ದೈಹಿಕ ಲಾಭ ಹೆಚ್ಚು– ರೇಖಾ ಅಂಡಗಿ
ಕಲಬುರಗಿ: ಪ್ರತಿದಿನ ಮನೆಮುಂದೆ ರಂಗೋಲಿ ಹಾಕುವುದು ಬೆನ್ನುಮೂಳೆ, ಕೈ–ಕಾಲುಗಳಿಗೆ ಉತ್ತಮ ವ್ಯಾಯಾಮವಾಗುವುದರ ಜೊತೆಗೆ ಬೆರಳಗಳ ಚಲನೆಯಿಂದ ಅಕ್ಯುಪ್ರೆಶರ್ ಲಾಭ ದೊರಕುತ್ತದೆ. ಜ್ಞಾನಮುದ್ರೆಯ ಮೂಲಕ ಮೆದುಳಿಗೆ ಏಕಾಗ್ರತೆ ಹಾಗೂ ಚೈತನ್ಯ ಹೆಚ್ಚಿಸುವ ದೈಹಿಕ ಪ್ರಯೋಜನಗಳಿರುವುದರಿಂದ ರಂಗೋಲಿ ಎಂಬ ಪರಂಪರಾತ್ಮಕ ಕಲೆಯನ್ನು ಬೆಳೆಸಿ ಉಳಿಸಿಕೊಳ್ಳುವುದು ಅತ್ಯಂತ ಅಗತ್ಯ ಎಂದು ಟೆಂಗಳಿ ಅಂಡಗಿ ಪ್ರತಿಷ್ಠಾನದ ಕಾರ್ಯದರ್ಶಿ ರೇಖಾ ಅಂಡಗಿ ಹೇಳಿದರು.
ದಿನಾಂಕ ೨೧.೦೧.೨೦೨೬ ರಂದು ಸಾಯಂಕಾಲ ನಗರದ ಜಿ.ಡಿ.ಎ. ಲೇಔಟ್‌ನ ಮಾಣಿಕಪ್ರಭು ಕಾಲೋನಿಯ ಅಪರಾಜಿತ ಶಾಲೆ ಮತ್ತು ಕಂಪ್ಯೂಟರ್ ಟ್ರೇನಿಂಗ್ ಸೆಂಟರ್ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಮಕ್ಕಳು ಹಾಗೂ ಪಾಲಕರ ರಂಗೋಲಿ ಮತ್ತು ಚಿತ್ರಕಲಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಹೆಣ್ಣು ಮಕ್ಕಳು, ವಿಶೇಷವಾಗಿ ಹದಿಹರೆಯದ ಹುಡುಗಿಯರು ಜಿಮ್‌ಗಳಿಗೆ ಹೋಗಿ ಸಮಯ ಹಾಗೂ ಶಕ್ತಿಯನ್ನು ವ್ಯರ್ಥಗೊಳಿಸುವುದಕ್ಕಿಂತ, ಬೆಳಿಗ್ಗೆ ರಂಗೋಲಿ ಹಾಕುವುದು, ಮನೆ ಸ್ವಚ್ಛತೆ, ಬಟ್ಟೆ ಒಗೆಯುವುದು ಸೇರಿದಂತೆ ಮನೆ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಉತ್ತಮ ಆರೋಗ್ಯದ ಜೊತೆಗೆ ಭದ್ರ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿದ್ದ ಕಂಪ್ಯೂಟರ್ ತರಬೇತಿ ಕೇಂದ್ರದ ಮುಖ್ಯಸ್ಥೆ ಪುಷ್ಪಾಂಜಲಿ ಭಂಡಾರಿ ಮಾತನಾಡಿ, ರಂಗೋಲಿ ಒಂದು ಪ್ರಾಚೀನ ಧಾರ್ಮಿಕ ಕಲೆ. ಇದು ಭಕ್ತರು ಮತ್ತು ಭಗವಂತನ ನಡುವಿನ ಸಂವಹನದ ಮಾಧ್ಯಮವೆಂದು ನಂಬಲಾಗಿದೆ. ಹಬ್ಬ–ಹರಿದಿನಗಳು ಹಾಗೂ ಶುಭಕಾರ್ಯಗಳಲ್ಲಿ ಮನೆ ಮುಂದೆ ರಂಗೋಲಿ ಹಾಕುವುದರಿಂದ ಸಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ. ಅದಕ್ಕಾಗಿ ಶಾಲೆ ಮತ್ತು ಕಂಪ್ಯೂಟರ್ ತರಬೇತಿ ಕೇಂದ್ರದ ಮುಂದೆ ಮಕ್ಕಳು ಹಾಗೂ ಪಾಲಕರು ರಂಗೋಲಿ ಹಾಕಿ ಸಂಭ್ರಮಿಸಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ಹಾಗೂ ಪಾಲಕರು ರಂಗೋಲಿ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು.
ರಾಜಗೋಪಾಲ ಭಂಡಾರಿ, ಶಿವರಾಜ ಅಂಡಗಿ, ಭಾಗ್ಯಶ್ರೀ ಮೇಡಂ, ಸಾಕ್ಷಿ ಮೇಡಂ, ಯಕಬೋಟೆ ಭಂಡಾರಿ, ಭೂಮಿಕಾ ಭಂಡಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
---
