ನ್ಯಾಯದಾನ ಮಾಡುವ ಕೈಗಳಿಂದ ಪಕ್ಷಿಗಳಿಗೆ ನೀರು ದಾನ

ನ್ಯಾಯದಾನ ಮಾಡುವ ಕೈಗಳಿಂದ ಪಕ್ಷಿಗಳಿಗೆ ನೀರು ದಾನ
ಕಲಬುರಗಿ: ನಗರದ ಉಚ್ಚ ನ್ಯಾಯಾಲಯ ಪೀಠದ ಆವರಣದಲ್ಲಿ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಎಸ್. ಸುನಿಲ್ ದತ್ ಯಾದವ್, ಶ್ರೀ ಆರ್. ನಟರಾಜ್, ಶ್ರೀ ಎಸ್.ವಿಶ್ವಜಿತ್ ಶೆಟ್ಟಿ, ಶ್ರೀಮತಿ ಜೆ.ಎಮ್. ಖಾಜಿ, ಶ್ರೀ ಸಿ.ಎಮ್. ಜೋಶಿ, ಶ್ರೀ ರಾಜೇಶ ರೈ. ಕೆ. ಇವರುಗಳು ಬೇಸಿಗೆ ದಿನದ ಅಂಗವಾಗಿ ಪಕ್ಷಿಗಳಿಗೆ ಮಣ್ಣಿನ ಮಡಿಕೆಯಲ್ಲಿ ನೀರು ಹಾಕಿ ವಕೀಲರುಗಳನ್ನು ಉದ್ದೇಶಿಸಿ ಈಗ ಬರುವ ಬೇಸಿಗೆಯಲ್ಲಿ ಪಶು- ಪಕ್ಷಿಗಳಿಗೆ ನೀರುಣಿಸುವ ಕುರಿತು ಹೇಳುತ್ತ, ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಮೇಲೆ ಬೆಕ್ಕುಗಳಿಗೆ ಸಿಗದ ಹಾಗೆ ಮಣ್ಣಿನ ಪಾತ್ರೆಗಳನ್ನು ಇಟ್ಟು ಪಕ್ಷಿಗಳಿಗೆ ನೀರು ಹಾಕಬೇಕೆಂದು ಹೇಳಿದರು.
ಈ ಹಿಂದೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿತ್ತು ಕೆರೆ, ಬಾವಿಗಳಲ್ಲಿ ನೀರು ಇರುತ್ತಿತ್ತು. ಪಕ್ಷಿಗಳಿಗೆ ನೀರು ಕುಡಿಯಲು ಅನುಕೂಲ ಇತ್ತು. ಆದರೆ ಇತ್ತೀಚೆಗೆ ಬೋರವೆಲ್ ಹಾಕುವುದರಿಂದ, ಹಳ್ಳ-ಕೊಳ್ಳಗಳು ಕೆರೆ ಬಾವಿಗಳು ಬತ್ತಿಹೋಗಿವೆ. ಬೇಸಿಗೆಯಲ್ಲಿ ನೀರಿನ ಹಾಹಾಕಾರವಾಗಿ ಪಕ್ಷಿಗಳಿಗೆ ನೀರು ಸಿಗದಂತಾಗಿದೆ.
ಆದರೆ ಮನುಷ್ಯರು ತಮಗೆ ಹಸಿವು ಮತ್ತು ನೀರಿನ ದಾಹ ಆದಾಗ ಮತ್ತೊಬ್ಬರಿಂದ ಕೇಳಿ ಪಡೆಯುತ್ತಾರೆ. ಮೂಕ ಪಕ್ಷಿಗಳು/ಬಾನಾಡಿಗಳು ಕೇಳುವುದಕ್ಕೆ ಆಗುವುದಿಲ್ಲ. ಅದನ್ನು ತಿಳಿದು ನಾವು ಮಾನವೀಯತೆಯಿಂದ ನೀರು ಹಾಕುವ ವ್ಯವಸ್ಥೆಯನ್ನು ನಮ್ಮ ನಮ್ಮ ಮನೆಯ ಮೇಲೆ ಮಾಡಬೇಕು. ಇದರಿಂದ ಪುಣ್ಯ ಬರುತ್ತದೆ ಎಂದು ಹೇಳಿದರು.
ಕಲಬುರಗಿಯ ಮಹಾನ್ ಶರಣರಾದಂತಹ ಶ್ರೀ ಶರಣಬಸವೇಶ್ವರರು ಈ ಕಾರ್ಯವನ್ನು ಮಾಡುತ್ತಿದ್ದರು, ಆದ್ದರಿಂದ ತಾವುಗಳು ಆ ಶರಣರ ಮಾರ್ಗದರ್ಶನದಂತೆ ಪಕ್ಷಿಗಳಿಗೆ ನಿಮ್ಮ ನಿಮ್ಮ ಮನೆಯ ಮೇಲೆ ಮಡಿಕೆಯಲ್ಲಿ ನೀರು ಹಾಕಿ ಶರಣರ ಹಾದಿಯಲ್ಲಿ ನಡೆಯಬೇಕು ಎಂದು ಹೇಳಿದರು.
ಪ್ರತಿ ವರ್ಷದಂತೆ ಈ ವರ್ಷವು ಕೂಡ ಹಿರಿಯ ವಕೀಲರಾದ ಶ್ರೀಯುತ ಎಸ್.ಜಿ. ಮಠ ರವರು ಮಣ್ಣಿನ ಮಡಿಕೆಗಳನ್ನು ಪೂರೈಸುವ ವ್ಯವಸ್ಥೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಸಂಯೋಜಕರಾದ ನ್ಯಾಯವಾದಿ ಶರಣಬಸಯ್ಯ' ಜಿ ಮಠ ಸೇರಿದಂತೆ ಉಚ್ಚ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಮಾಡುವ ಕಲಬುರಗಿ ವಕೀಲರ ಸಂಘದ ಸದಸ್ಯರು, ಸರಕಾರಿ ವಕೀಲರು ಮತ್ತು ಉಚ್ಚ ನ್ಯಾಯಾಲಯದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಭಾಗವಹಿಸಿದ್ದರು.