ನರೇಗಲ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ನೇರವೇರಿತು
ನರೇಗಲ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ನೇರವೇರಿತು
ಕಲ್ಯಾಣ ಕಹಳೆ ನರೇಗಲ್: ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪಠ್ಯ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳೂ ಅಗತ್ಯ. ವಿದ್ಯಾರ್ಥಿಗಳು ಅಂಕ ಗಳಿಸುವುದಕ್ಕಷ್ಟೇ ಸೀಮಿತವಾಗದೆ, ಜ್ಞಾನ ಸಂಪಾದನೆ, ಸಂಸ್ಕಾರ ಹಾಗೂ ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಗದಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ. ಶಿವಣ್ಣ ಎಂ. ಕುರಿ ಹೇಳಿದರು.
ನರೇಗಲ್ ಪಟ್ಟಣದ ಶ್ರೀ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ 2026–27ನೇ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ರೋವರ್ಸ್–ರೇಂಜರ್ಸ್, ಮಹಿಳಾ ವೇದಿಕೆ ಹಾಗೂ ಯುವ ರೆಡ್‌ಕ್ರಾಸ್ ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಲೇಜು ಜೀವನದಲ್ಲಿ ವಿದ್ಯಾರ್ಥಿಗಳು ಪಠ್ಯದ ಜತೆಗೆ ಸಾಂಸ್ಕೃತಿಕ, ಕ್ರೀಡಾ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇದರಿಂದ ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಸಮಾಜದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ರೂಢಿಸಿಕೊಳ್ಳುವ ಉತ್ತಮ ಅಭ್ಯಾಸಗಳೇ ಮುಂದಿನ ಬದುಕಿನ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದರು.
ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ. ಉತ್ತಮ ಬದುಕು ಕಟ್ಟಿಕೊಳ್ಳಲು ಅಗತ್ಯವಾದ ಜ್ಞಾನ ಮತ್ತು ಸಂಸ್ಕಾರವನ್ನು ನೀಡಬೇಕು. ವಿದ್ಯಾರ್ಥಿಗಳು ತಂದೆ-ತಾಯಿಗಳ ಕಷ್ಟವನ್ನು ಅರಿತು, ಸಮಯಪಾಲನೆ ಮತ್ತು ಶಿಸ್ತಿಗೆ ಆದ್ಯತೆ ನೀಡಬೇಕು. ಮನಸ್ಸನ್ನು ಚಂಚಲಗೊಳಿಸುವ ದುಶ್ಚಟಗಳಿಂದ ದೂರವಿದ್ದು, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಎಂ. ಎಸ್. ಧಡೇಸೂರಮಠ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಂಕ ಗಳಿಸುವುದಕ್ಕಷ್ಟೇ ಓದದೆ, ಜ್ಞಾನ ಸಂಪಾದಿಸುವ ಉದ್ದೇಶದಿಂದ ಅಧ್ಯಯನ ಮಾಡಬೇಕು. ಪಠ್ಯಪುಸ್ತಕಗಳ ಜತೆಗೆ ಉತ್ತಮ ಸಾಹಿತ್ಯ ಹಾಗೂ ಜ್ಞಾನವರ್ಧಕ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು. ಸಾಧಕರು, ಸಾಹಿತಿಗಳು ಹಾಗೂ ಮಹನೀಯರ ಜೀವನ ಮತ್ತು ಸಾಧನೆಗಳನ್ನು ತಿಳಿದುಕೊಂಡು ಅವರ ಜೀವನಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ತಂದೆ-ತಾಯಿಗಳು ಕಷ್ಟಪಟ್ಟು ಮಕ್ಕಳನ್ನು ಸಾಕಿ-ಸಲಹುತ್ತಿರುವುದನ್ನು ಅರಿತು, ಅವರ ನಿರೀಕ್ಷೆಗಳಿಗೆ ತಕ್ಕಂತೆ ಉತ್ತಮವಾಗಿ ಓದಿ ಸಮಾಜಕ್ಕೆ ಉಪಯುಕ್ತ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಕಾಲೇಜಿನಿಂದ ಹೊರಬರುವಾಗ ಪದವಿಯ ಜತೆಗೆ ಉತ್ತಮ ವ್ಯಕ್ತಿತ್ವವನ್ನೂ ಹೊಂದಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ. ಕಸ್ತೂರೆವ್ವ ಬಿ. ದಳವಾಯಿ, ವಿದ್ಯಾರ್ಥಿಗಳು ಕಾಲೇಜಿನಲ್ಲಿ ದೊರೆಯುವ ಪ್ರತಿಯೊಂದು ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಪ್ರತಿಭೆ ಹಾಗೂ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಹಿರಿಯರು ಮತ್ತು ಶಿಕ್ಷಕರ ಮಾರ್ಗದರ್ಶನ ಪಡೆದು ಶ್ರದ್ಧೆಯಿಂದ ಅಧ್ಯಯನ ಮಾಡಿದಾಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಸ್ಪರ್ಧಾತ್ಮ ಪರೀಕ್ಷೆಯ ತರಬೇತುದಾರ ಉಪನ್ಯಾಸಕ ಮಲ್ಲಪ್ಪ ಹೊಸೂರ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸ್ಪಷ್ಟ ಗುರಿ, ಛಲ, ಶ್ರದ್ಧೆ ಹಾಗೂ ನಿರಂತರ ಅಧ್ಯಯನ ಅಗತ್ಯ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಗುರಿಯನ್ನು ಸ್ಪಷ್ಟವಾಗಿ ನಿರ್ಧರಿಸಿಕೊಂಡು ಅದನ್ನು ಸಾಧಿಸಲು ಸತತ ಪ್ರಯತ್ನ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಭೂದಾನಿ ಬಸವರಾಜ ಕಳಕೊಣ್ಣವರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅರುಣ ಕಾಮತ, ಶರಣಪ್ಪ ಕುರಿ, ರೇಣುಕಾ ಧರ್ಮಾಯತ, ಬಸೀರಾಬಾನು ನದಾಫ್, ಐಕ್ಯೂಎಸಿ ಸಂಚಾಲಕರಾದ ಜಯಶ್ರೀ ಬಿ. ಮುತಗಾರ, ಆಂತರಿಕ ಕಿರು ಪರೀಕ್ಷೆ ವಿಭಾಗದ ಸಂಚಾಲಕರಾದ ಎಸ್. ಎಸ್. ಸೂಡಿ, ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಅಯ್ಯಪ್ಪ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಸುನಂದಾ ಮುಂಜಿ, ಯುಯುಸಿಎಂಎಸ್ ವಿಭಾಗದ ಸಂಚಾಲಕರಾದ ಅನಿಲಕುಮಾರ, ಕ್ರೀಡಾ ವೀಭಾಗದ ಸಂಚಾಲಕರಾದ ವಿರೂಪಾಕ್ಷ ಆರ್, ಉದ್ಯೋಗ ಭರವಸೆ ಕೋಶದ ಸಂಚಾಲಕರಾದ ಶಿವಕುಮಾರ ಕುರುಬರ, ಮಾಹಿತಿ ಮತ್ತು ತಂತ್ರಜ್ಞಾನದ ಸಂಚಾಲಕರಾದ ಶಶಿಕಲಾ ವಿ. ಎಸ್. ಇದ್ದರು. ಉಪನ್ಯಾಸಕ ಎನ್.ಎಸ್. ಹೊನ್ನೂರು ನಿರೂಪಿಸಿದರು.
ಜಿಲ್ಲಾ ವರದಿಗಾರರು ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ

