ರಾಜ್ಯೋತ್ಸವ ಪ್ರಶಸ್ತಿ ಮೊತ್ತವನ್ನು ದತ್ತಿನಿಧಿಯಾಗಿ ಇಟ್ಟು ಪ್ರತಿವರ್ಷ ಐದು ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದೇನೆ- ಸಿದ್ಧರಾಮ ಹೊನ್ಕಲ್
ರಾಜ್ಯೋತ್ಸವ ಪ್ರಶಸ್ತಿ ಮೊತ್ತವನ್ನು ದತ್ತಿನಿಧಿಯಾಗಿ ಇಟ್ಟು ಪ್ರತಿವರ್ಷ ಐದು ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದೇನೆ- ಸಿದ್ಧರಾಮ ಹೊನ್ಕಲ್
ಶಹಾಪುರ,ಯಾದಗಿರಿ, ಕಲಬುರ್ಗಿ, ಬೆಂಗಳೂರು:-ದಿನಾಂಕ- ೩-೧೧-೨೬
ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ನ್ಯಾಯದ ಅನುಗುಣವಾಗಿ ಯಾವುದೇ ಪ್ರಶಸ್ತಿ ನೀಡಲಾಗುತ್ತದೆ. ನಾಡಿನಲ್ಲಿ ನನಗಿಂತ ಹೆಚ್ಚು ಸಾಧನೆ ಮಾಡಿದ, ನನಗಿಂತ ವಯಸ್ಸಿನಲ್ಲಿ ಸಹ ಹಿರಿಯರಾದ ಸಾಹಿತಿಗಳು ಸಾಕಷ್ಟು ಇದ್ದಾರೆ. ನನಗೆ ಪ್ರಶಸ್ತಿ ಬಂದಿದೆ ನಾನು ಶ್ರೇಷ್ಠನೆಂಬ ಭಾವ ನನಗಿಲ್ಲ. ನಾನು ಪ್ರಶಸ್ತಿಯನ್ನು ಅತ್ಯಂತ ಸಂಕೋಚದಿಂದ ಸ್ವೀಕರಿಸಿದ್ದೇನೆ. ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯ ನನಗೆ ನನ್ನ ಸಾಹಿತ್ಯ ಸಾಧನೆಯ ಜೊತೆಗೆ ಪ್ರಾದೇಶಿಕ ನ್ಯಾಯದ ಅಡಿಯಲ್ಲಿ ಯಾದಗಿರಿ ಜಿಲ್ಲೆಯ ಸಾಹಿತಿಗಳಿಗೆ ಹಲವಾರು ವರ್ಷಗಳಿಂದ ಪುರಸ್ಕಾರ ನೀಡಿಲ್ಲ ಎಂಬ ಹಿನ್ನೆಲೆಯಲ್ಲಿ ಆಯ್ಕೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಮಾನ್ಯ ಸಂಸ್ಕೃತಿ ಸಚಿವರಿಗೆ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ಕಾರ್ಯದರ್ಶಿಗಳು, ಮಾನ್ಯ ನಿರ್ದೇಶಕರು ಹಾಗೂ ಆಯ್ಕೆ ಸಮಿತಿಯ ಎಲ್ಲಾ ಸದಸ್ಯರಿಗೂ ಗೌರವದ ವಂದನೆಗಳು ಅರ್ಪಿಸುತ್ತೇನೆ.
ಈ ಪ್ರಶಸ್ತಿಯ ಜೊತೆಗೆ ಸರ್ಕಾರ ನನಗೆ ನೀಡಿದ ಗೌರವಧನದ ಮೌತ್ತವನ್ನು ಕನ್ನಡ ಸಾಹಿತ್ಯ ಪರಿಷತ್ತು ಅಥವಾ ಸಾಹಿತ್ಯ ಅಕಾಡೆಮಿ ಅಥವಾ ವಿಶ್ವ ವಿದ್ಯಾಲಯಗಳಲ್ಲಿ ನಮ್ಮ ತಂದೆ ತಾಯಿಯ ಹೆಸರಿನಲ್ಲಿ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ದುಡಿಯುವ ಸಂಸ್ಥೆಯಲ್ಲಿ ದತ್ತಿ ನಿಧಿ ಸ್ಥಾಪನೆ ಮಾಡಿ ಪ್ರತಿ ವರ್ಷ ಸಾಹಿತ್ಯ, ಪತ್ರಿಕೋದ್ಯಮ, ಜಾನಪದ, ವೈದ್ಯಕೀಯ, ಧಾರ್ಮಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ನಾಡಿನ ಐದು ಸಾಧಕರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಿ ಗೌರವಿಸುವ ವಿಚಾರ ಇದೆ. ಈಗಾಗಲೇ ಹಿಂದೆಯೂ ಸಹ ನಮ್ಮ ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಕನ್ನಡದ ಐದು ಲೇಖಕರಿಗೆ ಪ್ರತಿವರ್ಷ ಪ್ರಶಸ್ತಿ ನೀಡುತ್ತಾ ಬಂದಿದ್ದೇನೆ.ಎರಡು ವರ್ಷಗಳಿಂದ ನಿಲ್ಲಿಸಿದ್ದೆ. ಈಗ ಅದನ್ನೇ ಮುಂದುವರಿಸಬೇಕೋ ಅಥವಾ ಬೇರೆ ಸಂಸ್ಥೆಗಳ ಮೂಲಕ ಮುಂದುವರಿಸಿ ಒಟ್ಟಾರೆ ಈ ಸಾಹಿತ್ಯ ಕ್ಷೇತ್ರದ ಸಾಧನೆಗೆ ಸಂದ ಮೊತ್ತವನ್ನು ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಉಪಯೋಗಿಸಲು ದತ್ತಿನಿಧಿ ಇಡಲಿದ್ದೇನೆ ಎಂದು ರಾಜ್ಯೋತ್ಸವ ಪುರಸ್ಕೃತ ಲೇಖಕ ಸಿದ್ಧರಾಮ ಹೊನ್ಕಲ್ ಪತ್ರಿಕಾ ಹೇಳಿಕೆ ನೀಡಿ ತಿಳಿಸಿದ್ದಾರೆ.

