ದಲಿತರ ಕುಂದುಕೊರತೆ ಸಭೆ ನಡೆಸದ ಪೊಲೀಸ್ ಅಧಿಕಾರಿಗಳ ವಿರುದ್ಧ ಎ.ಬಿ ಹೊಸಮನಿ ಅಸಮಾಧಾನ

ದಲಿತರ ಕುಂದುಕೊರತೆ ಸಭೆ ನಡೆಸದ ಪೊಲೀಸ್ ಅಧಿಕಾರಿಗಳ ವಿರುದ್ಧ ಎ.ಬಿ ಹೊಸಮನಿ ಅಸಮಾಧಾನ

ದಲಿತರ ಕುಂದುಕೊರತೆ ಸಭೆ ನಡೆಸದ ಪೊಲೀಸ್ ಅಧಿಕಾರಿಗಳ ವಿರುದ್ಧ ಎ.ಬಿ ಹೊಸಮನಿ ಅಸಮಾಧಾನ 

ಕಲಬುರಗಿ: ಪ್ರತಿ ತಿಂಗಳ ಕೊನೆಯ ಭಾನುವಾರದಂದು ‘ದಲಿತ ದಿನ’ ಎಂದು ಆಚರಿಸಿ, ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ನಗರ ಪೊಲೀಸ್ ಆಯುಕ್ತರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ನಿವಾರಣೆ ಸಭೆ ನಡೆಸಬೇಕೆಂಬ ನಿಯಮವಿದ್ದರೂ, ಹಾಲಿ ಅಧಿಕಾರಿಗಳು ಹಳೆಯ ಸದಸ್ಯರ ಜೋತೆ ಸಭೆ ನಡೆಸಿ, ಹೊಸ ಸದಸ್ಯರನ್ನು ನೇಮಕ ಮಾಡಿದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಸದಸ್ಯ ಎ.ಬಿ. ಹೊಸಮನಿ ಆರೋಪಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿನಿಂದನೆ, ದೌರ್ಜನ್ಯ ಹಾಗೂ ಕೊಲೆ ಪ್ರಕರಣಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವರ ಆದೇಶವಿದ್ದರೂ ಸಂಬಂಧಪಟ್ಟ ಸಮಿತಿಗಳನ್ನು ರಚಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯಾದ್ಯಂತ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಸರ್ಕಾರಿ ಉದ್ಯೋಗ ಪಡೆದಿರುವವರ ಕುರಿತು ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಲಬುರಗಿ ತಾಲೂಕಿನ ಸಿಂದಗಿ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದವರ ಮೇಲೆ ನಡೆದ ದೌರ್ಜನ್ಯ ಪ್ರಕರಣ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದಿರುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಗೃಹ ಸಚಿವರು ಗಂಭೀರವಾಗಿ ಗಮನಹರಿಸಬೇಕು. ಈ ಎಲ್ಲ ವಿಷಯಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಂಬಂಧಪಟ್ಟ ಸಚಿವರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಾಲಾಜಿ ಕಾಂಬಳೆ, ಮಲ್ಲಿಕಾರ್ಜುನ ಭಾವಿಕಟ್ಟಿ, ಮಲ್ಲೇಶಿ ಹುನಗುಂಟಿ, ದಿನೇಶ್ ಔರಾದಕರ್, ಸೂರ್ಯಕಾಂತ, ಶರಣಬಸಪ್ಪ ವೈಜಾಪುರ, ಮಿಲಿಂದ ಕಡಮಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.