ಕನ್ನಡದ ಕೀರ್ತಿ ಹೆಚ್ಚಿಸಿದ ರಾಷ್ಟ್ರಕೂಟರು: ಶಾಸಕ ಎಂ.ವೈ. ಪಾಟೀಲ್

ಕನ್ನಡದ ಕೀರ್ತಿ ಹೆಚ್ಚಿಸಿದ ರಾಷ್ಟ್ರಕೂಟರು: ಶಾಸಕ ಎಂ.ವೈ. ಪಾಟೀಲ್

ಕನ್ನಡದ ಕೀರ್ತಿ ಹೆಚ್ಚಿಸಿದ ರಾಷ್ಟ್ರಕೂಟರು: ಶಾಸಕ ಎಂ.ವೈ. ಪಾಟೀಲ್

ರಾಷ್ಟ್ರಕೂಟರ ಮನೆತನ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣ

ಕಲಬುರಗಿ: ಕನ್ನಡ ನಾಡನ್ನು ಆಳಿದ ರಾಜಮನೆತನಗಳಲ್ಲಿ ರಾಷ್ಟ್ರಕೂಟರ ಆಡಳಿತ ಕರ್ನಾಟಕದ ಇತಿಹಾಸಕ್ಕೆ ವಿಶೇಷ ಹೆಮ್ಮೆ ತಂದಿದೆ. ರಾಷ್ಟ್ರಕೂಟರ ಸಾಂಸ್ಕೃತಿಕ ಹಿರಿಮೆ, ಸಾಹಿತ್ಯಿಕ ಕೊಡುಗೆ ಹಾಗೂ ಆಡಳಿತ ವೈಭವವನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ಎಂ.ವೈ. ಪಾಟೀಲ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯ ಪತ್ರಗಾರ ಇಲಾಖೆ ಹಾಗೂ ಕಾಲೇಜಿನ ಇತಿಹಾಸ ಮತ್ತು ಕನ್ನಡ ವಿಭಾಗಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರಕೂಟ ಮನೆತನದ ಚರಿತ್ರೆ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ನಾಡನ್ನು ಆಳಿದ ವಿವಿಧ ರಾಜಮನೆತನಗಳು ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಕನ್ನಡಿಗರ ಹೋರಾಟದ ಫಲವಾಗಿ ಕನ್ನಡ ಭಾಷಿಕ ಪ್ರದೇಶಗಳು ಒಂದಾಗಿ ಕರ್ನಾಟಕ ರಾಜ್ಯ ನಿರ್ಮಾಣಗೊಂಡಿದೆ. ಇಂತಹ ಐತಿಹಾಸಿಕ ಪರಂಪರೆಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದರು.

ಧಾರವಾಡದ ವಿಶ್ರಾಂತ ಪ್ರಾಧ್ಯಾಪಕ ಡಾ. ಈರಣ್ಣ ಪತ್ತಾರ ಮಾತನಾಡಿ, ಎರಡು ಶತಮಾನಗಳಿಗೂ ಹೆಚ್ಚು ಕಾಲ ಆಡಳಿತ ನಡೆಸಿದ ರಾಷ್ಟ್ರಕೂಟರು ಸಾಹಿತ್ಯ, ಕೃಷಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅನನ್ಯ ಕೊಡುಗೆ ನೀಡಿದ್ದಾರೆ. ರಾಷ್ಟ್ರಕೂಟರ ಕಾಲದಲ್ಲಿ ಸಾಹಿತ್ಯ ಕ್ಷೇತ್ರ ಅತ್ಯಂತ ಸಮೃದ್ಧವಾಗಿತ್ತು. ಅವರ ಸಾಮ್ರಾಜ್ಯದಲ್ಲಿ 13 ಸಾಮಂತ ಅರಸರಿದ್ದ ಉಲ್ಲೇಖಗಳು ದೊರೆಯುತ್ತವೆ. ಶಿಕ್ಷಣ ಮತ್ತು ಸಾಹಿತ್ಯದ ಜತೆಗೆ ಸಾಮಾಜಿಕ ಜೀವನದಲ್ಲಿ ಅಂತರ್ಜಾತಿ ವಿವಾಹ, ಸತಿ ಪದ್ಧತಿ, ವಧುದಕ್ಷಿಣೆ ಹಾಗೂ ಆಡಳಿತದಲ್ಲಿ ಮಹಿಳೆಯರ ಪಾತ್ರದಂತಹ ಹಲವು ಅಂಶಗಳು ಕಂಡುಬರುತ್ತವೆ ಎಂದು ವಿವರಿಸಿದರು.

ಅಂದಿನ ಕಾಲದಲ್ಲಿ ತುಪ್ಪದ ಮೇಲೆಯೂ ತೆರಿಗೆ ವಿಧಿಸಲಾಗುತ್ತಿತ್ತು ಎಂಬ ಉಲ್ಲೇಖಗಳಿದ್ದು, ಇದು ಕೃಷಿ ಮತ್ತು ಪಶುಸಂಗೋಪನೆಗೆ ನೀಡಲಾಗಿದ್ದ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಇಂದಿನ ಯುವ ಪೀಳಿಗೆಯೂ ಕೃಷಿ ಹಾಗೂ ಪಶುಸಂಗೋಪನೆಯ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

 ಕಾಲೇಜಿನ ಪ್ರಾಚಾರ್ಯ ಡಾ. ಸಂತೋಷ ಹುಗ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಪತ್ರಗಾರ ಇಲಾಖೆಯ ಉಪನಿರ್ದೇಶಕ ಡಾ. ವೀರಶೆಟ್ಟಿ ಗಾರಂಪಳ್ಳಿ, ಮೈಸೂರಿನ ಡಾ. ರಾಜೇಂದ್ರಪ್ಪ ಎಸ್., ಎಪಿಎಂಸಿ ಜಿಲ್ಲಾಧ್ಯಕ್ಷ ಮಂಜುನಾಥ ಅಂಜುಟಗಿ, ಸಿಡಿಸಿ ಉಪಾಧ್ಯಕ್ಷ ಪ್ರಕಾಶ ಜಮಾದಾರ, ಸದಸ್ಯರಾದ ಶಾಂತಕುಮಾರ ದೇಸಾಯಿ, ಶಾರದಾದೇವಿ ಜಾಧವ, ಸೂರ್ಯಕಾಂತ ಉಮಾಪೂರೆ, ಡಾ. ಮಹ್ಮದ್ ಯೂನೂಸ್, ಡಾ. ಸಂಗಣ್ಣ ಸಿಂಗೆ ಹಾಗೂ ಪಿಎಸ್‌ಐ ವಿಜಯಕುಮಾರ ನಾಯಕ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಪವಿತ್ರಾ, ಸೃಷ್ಟಿ ಮತ್ತು ಸುಸ್ಮಿತಾ ಪ್ರಾರ್ಥಿಸಿದರು. ಡಾ. ಶಿವಶರಣಪ್ಪ ಮೋತಕಪಲ್ಲಿ ಕಾರ್ಯಕ್ರಮ ನಿರೂಪಿಸಿದರು.

ರಾಷ್ಟ್ರಕೂಟರ ಕಾಲದಲ್ಲಿ ಸಾಹಿತ್ಯದ ಜತೆಗೆ ಗಣಿತಶಾಸ್ತ್ರಕ್ಕೂ ಹೆಚ್ಚಿನ ಮಹತ್ವ ದೊರೆತಿತ್ತು. ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಅವರ ಆಡಳಿತದಲ್ಲಿ ದೂರದೃಷ್ಟಿ ಇತ್ತು. ರಾಷ್ಟ್ರಕೂಟರ ಕುರಿತು ಇನ್ನಷ್ಟು ಆಳವಾದ ಸಂಶೋಧನೆಗಳಾಗಬೇಕು.

— ಡಾ. ವೀರಶೆಟ್ಟಿ ಗಾರಂಪಳ್ಳಿ,

ಉಪನಿರ್ದೇಶಕರು, ಪತ್ರಗಾರ ಇಲಾಖೆ.