ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಶಶೀಲ್ ಜಿ. ನಮೋಶಿ ಮುತುವರ್ಜಿ: ಶಾಲಾ ಶಿಕ್ಷಣ ಅಪರ ಆಯುಕ್ತರೊಂದಿಗೆ ಮಹತ್ವದ ಚರ್ಚೆ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಶಶೀಲ್ ಜಿ. ನಮೋಶಿ ಮುತುವರ್ಜಿ: ಶಾಲಾ ಶಿಕ್ಷಣ ಅಪರ ಆಯುಕ್ತರೊಂದಿಗೆ ಮಹತ್ವದ ಚರ್ಚೆ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಶಶೀಲ್ ಜಿ. ನಮೋಶಿ ಮುತುವರ್ಜಿ: ಶಾಲಾ ಶಿಕ್ಷಣ ಅಪರ ಆಯುಕ್ತರೊಂದಿಗೆ ಮಹತ್ವದ ಚರ್ಚೆ

ಕಲಬುರಗಿ: ಪ್ರೌಢಶಾಲಾ ಶಿಕ್ಷಕರ ವಿವಿಧ ಬಹುದಿನಗಳ ಬೇಡಿಕೆಗಳು ಹಾಗೂ ಸೇವಾ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶೀಲ್ ಜಿ. ನಮೋಶಿ ಅವರು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ನೂತನ ಅಪರ ಆಯುಕ್ತರಾದ ಶ್ರೀ ಅವಿನಾಶ ಶಿಂಧೆ ಅವರನ್ನು ಭೇಟಿ ಮಾಡಿ, ಶುಭಾಶಯ ಕೋರಿ ಶಿಕ್ಷಕರ ಪ್ರಮುಖ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಶಿಕ್ಷಕರ ಮುಂಬಡ್ತಿ, ಕೌನ್ಸಿಲಿಂಗ್, ಪಿಂಚಣಿ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಅಧಿಕಾರಿಗಳ ಗಮನಕ್ಕೆ ತಂದು, ಅವುಗಳ ತ್ವರಿತ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ವಿಷಯಗಳು:

1. ಮುಖ್ಯ ಗುರುಗಳ ಹುದ್ದೆಗೆ ಮುಂಬಡ್ತಿ: ಪ್ರೌಢಶಾಲಾ ಸಹ ಶಿಕ್ಷಕರಿಂದ ಮುಖ್ಯ ಗುರುಗಳ ಹುದ್ದೆಗೆ ಮುಂಬಡ್ತಿ ನೀಡುವ ಕೌನ್ಸಿಲಿಂಗ್ ದಿನಾಂಕವನ್ನು ನಿಗದಿಪಡಿಸುವಂತೆ ಕೋರಲಾಯಿತು. ಇದಕ್ಕೆ ಸ್ಪಂದಿಸಿದ ಅಪರ ಆಯುಕ್ತರು ಗುರುವಾರ ಅಥವಾ ಶುಕ್ರವಾರ ಕೌನ್ಸಿಲಿಂಗ್ ನಡೆಸುವುದಾಗಿ ತಿಳಿಸಿದರು.

2. ದೈಹಿಕ ಶಿಕ್ಷಣ ಶಿಕ್ಷಕರಿಗೆ ಮುಂಬಡ್ತಿ: ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಂದ ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳ ಹುದ್ದೆಗೆ ಮುಂಬಡ್ತಿ ನೀಡುವ ಕುರಿತು ಚರ್ಚಿಸಲಾಯಿತು. ಈ ಸಂಬಂಧ ವಿಜಯನಗರ ಜಿಲ್ಲೆಯ ಉಪನಿರ್ದೇಶಕರಿಗೆ ದೂರವಾಣಿ ಮೂಲಕ ಸೂಚನೆ ನೀಡಿ, ಬಾಕಿ ಇರುವ ಪ್ರಸ್ತಾವನೆಗಳನ್ನು ಅದೇ ದಿನ ಕಳುಹಿಸುವಂತೆ ನಿರ್ದೇಶಿಸಿದರು. ಅಲ್ಲದೆ, ಜೇಷ್ಠತಾ ಪಟ್ಟಿ ಶೀಘ್ರ ಪ್ರಕಟಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

3. ಹಳೆ ಪಿಂಚಣಿ ವ್ಯವಸ್ಥೆ ಜಾರಿ: ಹೊಸ ಪಿಂಚಣಿ ವ್ಯವಸ್ಥೆಯಿಂದ ಹಳೆ ಪಿಂಚಣಿ ವ್ಯವಸ್ಥೆಗೆ ಪರಿವರ್ತನೆಗೊಳ್ಳಬೇಕಾದ 70 ಶಿಕ್ಷಕರ ಕಡತಗಳು ಅಪರ ಆಯುಕ್ತರ ಲಾಗಿನ್‌ನಲ್ಲಿದ್ದು, ಅವುಗಳಿಗೆ ಅದೇ ದಿನ ಸಹಿ ಮಾಡಲಾಗುವುದೆಂದು ಭರವಸೆ ನೀಡಿದರು.

4. ಸಂಗೀತ ಮತ್ತು ನೃತ್ಯ ಶಿಕ್ಷಕರ ಮುಂಬಡ್ತಿ: ವಿಭಾಗೀಯ ಅಧೀಕ್ಷಕರು ಹಾಗೂ ಸಂಗೀತ ಮತ್ತು ನೃತ್ಯ ಹುದ್ದೆಗಳಿಗೆ ಸಂಬಂಧಿಸಿದ ಮುಂಬಡ್ತಿ ಪ್ರಕ್ರಿಯೆ ಕುರಿತು ಚರ್ಚಿಸಲಾಯಿತು. ತಕ್ಷಣವೇ ಮುಂಬಡ್ತಿ ಕೌನ್ಸಿಲಿಂಗ್ ದಿನಾಂಕ ನಿಗದಿಪಡಿಸುವುದಾಗಿ ತಿಳಿಸಿದರು.

5. ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ: ಕಲಬುರಗಿ ವಿಭಾಗದ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಮತ್ತಷ್ಟು ಉತ್ತಮಪಡಿಸುವ ಉದ್ದೇಶದಿಂದ ವಿಭಾಗ ಮಟ್ಟದಲ್ಲಿ ಏಕರೂಪದ ಕಾರ್ಯಯೋಜನೆ ರೂಪಿಸಿ, ಈ ಕುರಿತು ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆ ನಡೆಸುವುದಾಗಿ ತಿಳಿಸಿದರು.

ಶಿಕ್ಷಕರ ಸೇವಾ ಸಮಸ್ಯೆಗಳಿಗೆ ಸ್ಪಂದಿಸುವುದು, ಅವರ ನ್ಯಾಯಯುತ ಬೇಡಿಕೆಗಳಿಗೆ ಪರಿಹಾರ ದೊರಕಿಸಿಕೊಡುವುದು ಹಾಗೂ ಶಿಕ್ಷಣ ಇಲಾಖೆಯ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ವೇಗಗೊಳಿಸುವ ನಿಟ್ಟಿನಲ್ಲಿ ಶ್ರೀ ಶಶೀಲ್ ಜಿ. ನಮೋಶಿ ಅವರು ವಿಶೇಷ ಮುತುವರ್ಜಿ ವಹಿಸಿರುವುದು ಶಿಕ್ಷಕ ವೃಂದದಲ್ಲಿ ಆಶಾಭಾವನೆ ಮೂಡಿಸಿದೆ.

ಈ ಸಂದರ್ಭದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.