ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ‘ಪಾಂಚಜನ್ಯ ಗುರುಶ್ರೇಷ್ಠ ಪುರಸ್ಕಾರ–2026’
ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ‘ಪಾಂಚಜನ್ಯ ಗುರುಶ್ರೇಷ್ಠ ಪುರಸ್ಕಾರ–2026’
ಎರಡು ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ; ನಾಮನಿರ್ದೇಶನ ಸಲ್ಲಿಸಲು ನವೆಂಬರ್ 20 ಕೊನೆಯ ದಿನ
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ನಿಷ್ಠೆ, ಬದ್ಧತೆ ಮತ್ತು ಸೃಜನಶೀಲತೆಯಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಶೈಕ್ಷಣಿಕ ಹಾಗೂ ಸಾಮಾಜಿಕ ಕೊಡುಗೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಪಾಂಚಜನ್ಯ ಪ್ರತಿಷ್ಠಾನವತಿಯಿಂದ ‘ಪಾಂಚಜನ್ಯ ಗುರುಶ್ರೇಷ್ಠ ಪುರಸ್ಕಾರ–2026’ ಸ್ಥಾಪಿಸಲಾಗಿದೆ ಎಂದು ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಮುರಳಿ ಎಸ್. ಕಾಕೋಳು ತಿಳಿಸಿದ್ದಾರೆ.
ಕರ್ನಾಟಕದ ಸರ್ಕಾರಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ, ಕನಿಷ್ಠ 10 ವರ್ಷಗಳ ಬೋಧನಾ ಅನುಭವ ಹೊಂದಿರುವ ಶಿಕ್ಷಕರು ಈ ಪ್ರಶಸ್ತಿಗೆ ಅರ್ಹರು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ, ನವೀನ ಬೋಧನಾ ವಿಧಾನಗಳು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ, ನೈತಿಕ ನಾಯಕತ್ವ ಹಾಗೂ ಸಮುದಾಯದ ಸಹಭಾಗಿತ್ವದ ಮೂಲಕ ಶಾಲೆಯ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನು ಆಯ್ಕೆಗೆ ಪರಿಗಣಿಸಲಾಗುತ್ತದೆ.
2026ನೇ ಸಾಲಿನಲ್ಲಿ ಎರಡು ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಸರ್ಕಾರಿ ಪ್ರಾಥಮಿಕ/ಹಿರಿಯ ಪ್ರಾಥಮಿಕ ಶಾಲೆಯ ಒಬ್ಬ ಶಿಕ್ಷಕ ಹಾಗೂ ಸರ್ಕಾರಿ ಪ್ರೌಢಶಾಲೆಯ ಒಬ್ಬ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ. ಪುರಸ್ಕೃತರಿಗೆ ತಲಾ ₹25,000 ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುವುದು.
ನಾಮನಿರ್ದೇಶನದಲ್ಲಿ ಶಿಕ್ಷಕರ ಹೆಸರು, ಹುದ್ದೆ, ಶಾಲೆ, ಸ್ಥಳ, ದೂರವಾಣಿ ಮತ್ತು ಇ-ಮೇಲ್, ಬೋಧನಾ ಅನುಭವ, ಸಾಧನೆಗಳು, ಸೇವಾ ಕೊಡುಗೆಗಳು, ವಿದ್ಯಾರ್ಥಿಗಳಲ್ಲಿ ಉಂಟುಮಾಡಿದ ಸಕಾರಾತ್ಮಕ ಬದಲಾವಣೆಗಳಿಗೆ ಪೂರಕ ದಾಖಲೆಗಳು ಹಾಗೂ ಶಿಫಾರಸು ಪತ್ರವನ್ನು ಸಲ್ಲಿಸಬೇಕು.
ನಾಮನಿರ್ದೇಶನಗಳನ್ನು panchafoundation@gmail.com ವಿಳಾಸಕ್ಕೆ 2026ರ ನವೆಂಬರ್ 20ರೊಳಗೆ ಕಳುಹಿಸಬೇಕು. ಮೂವರು ಸದಸ್ಯರ ಪರಿಣತ ಆಯ್ಕೆ ಸಮಿತಿಯ ನಿರ್ಧಾರ ಅಂತಿಮವಾಗಿರುತ್ತದೆ. ಡಿಸೆಂಬರ್ 12, 2026ರಂದು ಬೆಂಗಳೂರಿನಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಅರ್ಹ ಶಿಕ್ಷಕರನ್ನು ಗುರುತಿಸಿ ಎರಡೂ ವಿಭಾಗಗಳಲ್ಲಿ ನಾಮನಿರ್ದೇಶನ ಮಾಡುವಂತೆ ಶಿಕ್ಷಣ ಸಂಸ್ಥೆಗಳು, ಸಂಘ-ಸಂಸ್ಥೆಗಳು ಹಾಗೂ ಶಿಕ್ಷಣಾಸಕ್ತರಲ್ಲಿ ಫೌಂಡೇಶನ್ ಮನವಿ ಮಾಡಿದೆ.
ಹೆಚ್ಚಿನ ಮಾಹಿತಿಗೆ: ಮುರಳಿ ಎಸ್. ಕಾಕೋಳು, ವ್ಯವಸ್ಥಾಪಕ ಟ್ರಸ್ಟಿ, ಪಾಂಚಜನ್ಯ ಪ್ರತಿಷ್ಠಾನ – 9845075250.

