ಮಹಾಗಾಂವ ಕ್ರಾಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ವಚನ-ತತ್ವಪದ ವೈಚಾರಿಕ ನೆಲೆಗಟ್ಟಿನ ಸಾಹಿತ್ಯ

ಮಹಾಗಾಂವ ಕ್ರಾಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ವಚನ-ತತ್ವಪದ ವೈಚಾರಿಕ ನೆಲೆಗಟ್ಟಿನ ಸಾಹಿತ್ಯ

ಮಹಾಗಾಂವ ಕ್ರಾಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

ವಚನ-ತತ್ವಪದ ವೈಚಾರಿಕ ನೆಲೆಗಟ್ಟಿನ ಸಾಹಿತ್ಯ 

ಕಮಲಾಪುರ: ಶರಣರು,ತತ್ವಪದಕಾರರ ಸಾತ್ವಿಕ ಚಿಂತನೆ, ಸಾಮಾಜಿಕ ಕಾಳಜಿ, ಮೌಢ್ಯ ನಿರಾಕರಣೆ, ಸಮಾನತೆ ತತ್ವ, ಜೀವನಾನುಭವ ಒಳಗೊಂಡಿರುವ ವಚನ ಹಾಗೂ ತತ್ವಪದ ವೈಚಾರಿಕ ನೆಲೆಗಟ್ಟಿನ ಸಾಹಿತ್ಯವಾಗಿದೆ ಎಂದು ಪ್ರೊ. ಲಿಂಗಪ್ಪ ಗೋನಾಳ ತಿಳಿಸಿದರು.

ಕಮಲಾಪುರ ತಾಲ್ಲೂಕಿನ ಮಹಾಗಾಂವ ಕ್ರಾಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಬುಧವಾರ ಆಯೋಜಿಸಿದ್ದ ವಚನ ಸಾಹಿತ್ಯ ಮತ್ತು ತತ್ವ ಪದಗಳ ರಚನಿಕತೆ ಕುರಿತು ಒಂದು ದಿನದ ರಾಷ್ಟೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು. 

ವಚನಗಳು ಉಪನಿಷತ್ತು, ಗಾಯತ್ರಿ ಮಂತ್ರಕ್ಕಿಂತಲೂ ಶ್ರೇಷ್ಠ. ಸುತ್ತಲಿನ ಪರಿಸರವನ್ನು ಅತಿ ಸೂಕ್ಷ್ಮವಾಗಿ ಗಮನಿಸಿ, ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸಿದ ಶರಣರು, ವಚನಗಳ ಮೂಲಕ ಜನಪರ ಸಂಸ್ಕೃತಿಯನ್ನು ಎತ್ತಿ ಹಿಡಿದರು ಎಂದು ಹೇಳಿದರು.

ಕೇವಲ ರಾಜ-ಮಹಾರಾಜರು ಮಾತ್ರ ಸಾಹಿತ್ಯದ ವಸ್ತುವಲ್ಲ. ಪ್ರತಿಯೊಬ್ಬ ವ್ಯಕ್ತಿ, ಪ್ರತಿಯೊಂದು ವಿಷಯವೂ ಸಾಹಿತ್ಯದ ವಸ್ತುವಾಗುತ್ತದೆ ಎಂಬುದನ್ನು ವಚನಗಳು ಸಾರಿವೆ. ದೇವರ ಮೇಲಿನ ಭಕ್ತಿಗೆ ಮಧ್ಯವರ್ತಿ ಬೇಕಿಲ್ಲ ಎಂಬುದು ವಚನಗಳ ಸಂದೇಶ. ಗದ್ಯದ ಗಂಧ, ಪದ್ಯದ ಅಂದವನ್ನು ವಚನಗಳು ಒಳಗೊಂಡಿವೆ. ವಚನ ತತ್ವಪದಗಳಲ್ಲಿ ಚಿಕಿತ್ಸಕ ಪದ್ಧತಿಯೂ ಅಡಗಿದೆ. ವಚನ ಭಾಷೆ ಅಚ್ಚಗನ್ನಡ ಎಂದು ಅವರು ವಿವರಿಸಿದರು.

ಸೊಲ್ಲಾಪುರದ ಶರಣ ಚಿಂತಕಿ ರಾಜೇಶ್ವರಿ ಲೋಕಾಪುರ ಅವರು 'ವಚನ ಹಾಗೂ ತತ್ವಪದದಲ್ಲಿ ಕಾಯಕ ನಿಷ್ಠೆ' ವಿಷಯ ಕುರಿತು ವಿಚಾರ ಮಂಡಿಸಿದರು. ಕಾಯಕ ನಿರತನಾದರೆ ದೇವರನ್ನೂ ಮರೆಯಬೇಕು. ಕಾಯಕ ಮಾಡಿಯೇ ಪ್ರಸಾದ ಸ್ವೀಕರಿಸಬೇಕು ಎಂಬುದು ಶರಣರ ಸಂದೇಶ ಎಂದು ಅವರು ಹೇಳಿದರು.

ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಚಿದಾನಂದ ಚಿಕ್ಕಮಠ ಅವರು 'ವಚನ ಹಾಗೂ ತತ್ವಪದ ಸಾಹಿತ್ಯದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು' ಕುರಿತು ಮಾತನಾಡಿದರು.

ವಚನ ಸಾಹಿತ್ಯ ಮತ್ತು ತತ್ವಪದದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯದ ಬಹುಶಿಸ್ತೀಯ ಅಧ್ಯಯನ ಅಗತ್ಯವಿದೆ. ಅನುಭವ ಮಂಟಪದಲ್ಲಿ ಪ್ರಜಾಸತ್ತಾತ್ಮಕತೆ ಇತ್ತು. ಮಾತನಾಡುವ ಹಕ್ಕಿನ ಜೊತೆಗೆ ಮಾತಿಗೆ ಮಹತ್ವವಿತ್ತು. ಸರ್ವ ಸಮ್ಮತದ ಮಾತುಗಳೇ ವಚನಗಳು. ಸಂವಿಧಾನದ ಬಹುತೇಕ ಅಂಶಗಳು ವಚನ, ತತ್ವಪದಗಳಲ್ಲಿ ಇವೆ ಎಂದು ಅವರು ವಿವರಿಸಿದರು.

ಶಾಸಕ ಬಸವರಾಜ ಮತ್ತಿಮಡು, ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ ಪಸಾರ, ಮಲ್ಲಿಕಾರ್ಜುನ ಮರತೂರಕರ್, ಕಾಲೇಜಿನ ಪ್ರಾಚಾರ್ಯರಾದ ಡಾ. ಶರಣಪ್ಪ ಮಾಳಗಿ,ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ವಡ್ಡನಕೇರಿ, ಲಕ್ಷ್ಮಣ ಬೋಸ್ಲೆ, ತೀರ್ಥಕುಮಾರ ಬೆಳಕೋಟಾ, ತಾಲ್ಲೂಕು ಘಟಕದ ಅಧ್ಯಕ್ಷ ಶರಣಬಸಪ್ಪ ವಡ್ಡನಕೇರಿ, ಪ್ರಾಧ್ಯಾಪಕ ಅನಿಲಕುಮಾರ ಹಾಲು, ಕರಿಗೋಳೇಶ್ವರ, ಶ್ರೀಕಾಂತ ಪಾಟೀಲ, ಉಮೇಶ ಸಾಗರ, ಪ್ರಕಾಶ ಖೋಬ್ರೆ, ಕಾಶಿನಾಥ ಪಾಟೀಲ, ಸಾವಿತ್ರಿ ಮಠ, ಶಿಲ್ಪಾ ಗಾಂವಕರ, ಜ್ಯೋತಿರ್ಮಯ ಖಡಕೆ ಮತ್ತಿತರು ಭಾಗವಹಿಸಿದ್ದರು.

ಬಸವಣ್ಣನವರು ಬಾಬಾಸಾಹೇಬ್ ಅಂಬೇಡ್ಕರ್ ಅವರ ತಾತ್ವಿಕ ಚಿಂತನೆ ಭಾರತದ ಪ್ರಜಾಸತ್ತಾತ್ಮ ವ್ಯವಸ್ಥೆಯನ್ನು ಬಲಪಡಿಸಿವೆ. ಸಂಸತ್ತು ಪರಿಕಲ್ಪನೆ ಸಂವಿಧಾನ ನಿಯಮಗಳು 12 ಶತಮಾನದಲ್ಲಿ ಶರಣರು ಪ್ರತಿಪಾದಿಸಿದ್ದಾರೆ

ಬಸವರಾಜ ಮತ್ತಿಮಡು ಶಾಸಕ