ಹಿಮಾಲಯದ 6,111 ಮೀಟರ್ ಎತ್ತರದ ಯುನಮ್ ಪೀಕ್ ಏರಿ ಗದಗ ಜಿಲ್ಲೆಯ ಕೀರ್ತಿ ಹೆಚ್ಚಿಸಿದ ದುರಗಪ್ಪ ಮಾದರ
ಹಿಮಾಲಯದ 6,111 ಮೀಟರ್ ಎತ್ತರದ ಯುನಮ್ ಪೀಕ್ ಏರಿ ಗದಗ ಜಿಲ್ಲೆಯ ಕೀರ್ತಿ ಹೆಚ್ಚಿಸಿದ ದುರಗಪ್ಪ ಮಾದರ
ರೋಣ/ಗಜೇಂದ್ರಗಡ:ಆ 26ಕಠಿಣ ಪರಿಶ್ರಮ ಮತ್ತು ಛಲವಿದ್ದರೆ ಎಂತಹ ಹಿಮಾಲಯದಂತ ಸವಾಲನ್ನೂ ಮೆಟ್ಟಿ ನಿಲ್ಲಬಹುದು ಎಂಬುದನ್ನು ಗದಗ ಜಿಲ್ಲೆಯ ಗ್ರಾಮೀಣ ಪ್ರತಿಭೆಯೊಬ್ಬರು ಸಾಬೀತುಪಡಿಸಿದ್ದಾರೆ. ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಸಮೀಪದ ಕಲ್ಲಿನೂರ (ಕಲ್ಲನೂರ) ಗ್ರಾಮದ ಬಡ ಯುವಕ, ರೋಣದ ರಾಜೀವ್ ಗಾಂಧಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ ದುರಗಪ್ಪ ಯಮನೂರಪ್ಪ ಮಾದರ ಅವರು ಹಿಮಾಚಲ ಪ್ರದೇಶದ ಬರೋಬ್ಬರಿ 6,111 ಮೀಟರ್ (20,049 ಅಡಿ) ಎತ್ತರದ ಕಡಿದಾದ ಯುನಮ್ ಪೀಕ್ ಪರ್ವತವನ್ನು ಯಶಸ್ವಿಯಾಗಿ ಆರೋಹಣ ಮಾಡಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಹಿಮಾಲಯ ಪರ್ವತ ಶ್ರೇಣಿಯ ಮೈನಸ್ ಡಿಗ್ರಿ ತಾಪಮಾನ ಆಮ್ಲಜನಕದ ಕೊರತೆ ಹಾಗೂ ತೀವ್ರ ಮೈಕೊರೆಯುವ ಹಿಮಗಾಳಿಯಂತಹ ವಿಷಮ ಪರಿಸ್ಥಿತಿಯನ್ನು ಎದುರಿಸಿ ದುರಗಪ್ಪ ಈ ಸಾಹಸ ಮೆರೆದಿದ್ದಾರೆ. ಹಿಮಾಚಲ ಪ್ರದೇಶದ ಪ್ರಸಿದ್ಧ ಅಟಲ್ ಬಿಹಾರಿ ವಾಜಪೇಯಿ ಪರ್ವತರೋಹಣ ಸಂಸ್ಥೆ (ABVIMAS - ಮನಾಲಿಯ ಜಿಸ್ಪಾ ಶಾಖೆ) ಯಲ್ಲಿ ಅತ್ಯುನ್ನತ ತರಬೇತಿ ಪಡೆದಿದ್ದ ಇವರು ನಿಗದಿತ ಗುರಿಯನ್ನು ಅತ್ಯಂತ ಧೈರ್ಯ ಮತ್ತು ದೃಢ ಸಂಕಲ್ಪದಿಂದ ತಲುಪುವ ಮೂಲಕ ನಾಡಿಗೆ ಹೆಮ್ಮೆ ತಂದಿದ್ದಾರೆ.
ಅತ್ಯಂತ ಕಡುಬಡತನದ ಕುಟುಂಬ ಹಿನ್ನೆಲೆಯಿಂದ ಬಂದಿರುವ ದುರಗಪ್ಪ ಅವರ ಸಾಹಸ ಮನೋಭಾವಕ್ಕೆ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸಮಾಜ ಕಲ್ಯಾಣ ಇಲಾಖೆ ಆರ್ಥಿಕ ಪ್ರಾಯೋಜಕತ್ವ ಮತ್ತು ಬೆಂಬಲ ನೀಡಿ ಪ್ರೋತ್ಸಾಹಿಸಿವೆ. ಸಮಾಜ ಕಲ್ಯಾಣ ಇಲಾಖೆಯ ಈ ಸಹಕಾರದಿಂದಾಗಿ ಗ್ರಾಮೀಣ ಭಾಗದ ಯುವಕನೊಬ್ಬ ರಾಷ್ಟ್ರಮಟ್ಟದ ಪರ್ವತ ಶಿಖರವನ್ನು ಏರಲು ಸಾಧ್ಯವಾಗಿದೆ.
ರೋಣದ ರಾಜೀವ್ ಗಾಂಧಿ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ದುರಗಪ್ಪ ಮಾದರ ಅವರ ಈ ಅದ್ಭುತ ಪರ್ವತಾರೋಹಣ ಸಾಹಸಕ್ಕೆ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಉಪನ್ಯಾಸಕ ವೃಂದ ಸಹಪಾಠಿಗಳು ಕಲ್ಲಿನೂರ ಗ್ರಾಮಸ್ಥರು ಹಾಗೂ ಗದಗ ಜಿಲ್ಲೆಯ ಸಮಸ್ತ ನಾಗರಿಕರು, ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಹಾಗೂ ಪ್ರೋತ್ಸಾಹ ಸಿಕ್ಕರೆ ಜಗತ್ತನ್ನೇ ಗೆಲ್ಲುವ ಸಾಮರ್ಥ್ಯ ಅವರಲ್ಲಿದೆ ಎಂಬುದಕ್ಕೆ ದುರಗಪ್ಪ ಅವರ ಈ ಸಾಹಸವೇ ಸಾಕ್ಷಿ.
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ

